ಈ ದಿನದ ಮುಖ್ಯಾಂಶಗಳು:13-02-2024

ಅಕ್ರಮ ಆಸ್ತಿ ಗಳಿಕೆಯ ಪ್ರಕರಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್‌ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐರ್‌ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವಂತೆ ಸಿಬಿಐಗೆ ಲೋಕಾಯುಕ್ತ ಪೊಲೀಸರು ಪತ್ರ ಬರೆದಿದ್ದಾರೆ.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ
Updated on

ಡಿಕೆ ಶಿವಕುಮಾರ್ ವಿರುದ್ಧ ಲೋಕಾಯುಕ್ತ FIR

ಅಕ್ರಮ ಆಸ್ತಿ ಗಳಿಕೆಯ ಪ್ರಕರಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್‌ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐರ್‌ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವಂತೆ ಸಿಬಿಐಗೆ ಲೋಕಾಯುಕ್ತ ಪೊಲೀಸರು ಪತ್ರ ಬರೆದಿದ್ದಾರೆ. ಸಿಬಿಐ ಅಧಿಕಾರಿಗಳು ಹೈಕೋರ್ಟ್‌ ಮೊರೆ ಹೋಗಿದ್ದು, ತನಿಖೆ ಮುಗಿಯುವ ಹಂತದಲ್ಲಿದೆ. ಈ ವೇಳೆ ತನಿಖೆಗೆ ನೀಡಿರುವ ಅನುಮತಿ ವಾಪಸ್‌ ತೆಗೆದುಕೊಳ್ಳುವುದು ಸರಿಯಲ್ಲ ಎಂದು ವಾದಿಸಿದೆ. ಡಿಕೆ ಶಿವಕುಮಾರ್‌ ಅವರ ವಿರುದ್ಧ ತನಿಖೆ ನಡೆಸಲು ಸಿಬಿಐಗೆ ನೀಡಿದ್ದ ಪೂರ್ವಾನುಮತಿಯನ್ನು ಸರ್ಕಾರ ವಾಪಸ್‌ ತೆಗೆದುಕೊಂಡಿತ್ತು. ಈ ಹಿನ್ನೆಲೆ ಪ್ರಕರಣವನ್ನು ಲೋಕಾಯುಕ್ತ ಕೈಗೆತ್ತಿಕೊಂಡಿತ್ತು. ರಾಜ್ಯ ಸರ್ಕಾರ ಡಿಸೆಂಬರ್‌ 22ರಂದು ಲೋಕಾಯುಕ್ತ ಡಿಜಿಪಿಗೆ ಪತ್ರ ಬರೆದು ಡಿಕೆ ಶಿವಕುಮಾರ್‌ ವಿರುದ್ಧ ತನಿಖೆಗೆ ಆದೇಶಿಸಿತ್ತು.

ಲಂಚ ಇಲ್ಲದೇ ಗುತ್ತಿಗೆದಾರರ ಬಿಲ್ ಬಾಕಿಯ 600 ಕೋಟಿ ರೂ. ಹಣ ಬಿಡುಗಡೆಯಾಗಿದೆ: ಕೆಂಪಣ್ಣ

ರಾಜ್ಯದ 1054 ಸಣ್ಣ ಗುತ್ತಿಗೆದಾರರ ಒಂದು ಕೋಟಿ ರೂಪಾಯಿಗಿಂತ ಕಡಿಮೆ ಬಿಲ್ ಇರುವ 600 ಕೋಟಿ ರೂ. ಮೊತ್ತದ ಹಣವನ್ನು ಸರ್ಕಾರ ಯಾವುದೆ ಲಂಚ ಪಡೆಯದೆ ಬಿಡುಗಡೆ ಮಾಡಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ  ಹೇಳಿದ್ದಾರೆ. ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೆ ರೀತಿ ಉಳಿದ ಇಲಾಖೆಯಲ್ಲಿಯೂ ಬಿಡುಗಡೆ ಆಗಲಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಸಹಕಾರ ನೀಡುತ್ತಿದ್ದಾರೆ. ಬಿಬಿಎಂಪಿಯಲ್ಲಿನ ಬಾಕಿ ಬಿಲ್ಗಳ ಬಿಡುಗಡೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ಪ್ಯಾಕೇಜ್ ಸಿಸ್ಟಂ ಆರೋಪಕ್ಕೆ ಗುತ್ತಿಗೆದಾರರ ಸಂಘ ಬದ್ಧವಿದೆ ಎಂದು ಇದೇ ವೇಳೆ ಕೆಂಪಣ್ಣ ತಿಳಿಸಿದ್ದಾರೆ.

ವೈದ್ಯನ ಡೆತ್ ನೋಟ್ ನಲ್ಲಿ ಕಾಂಗ್ರೆಸ್ ಮುಖಂಡನ ಹೆಸರು

ಕಾಂಗ್ರೆಸ್ ಮುಖಂಡನ ಹೆಸರನ್ನ ಡೆತ್ ನೋಟ್‌ನಲ್ಲಿ ಬರೆದಿಟ್ಟು ವೈದ್ಯ ಡಾ. ಶಶಿಧರ ಹಟ್ಟಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಶರಣಾಗಿರುವ ಘಟನೆ ಗದ ಜಿಲ್ಲೆಯ ರೋಣ ತಾಲೂಕಿನ ಹಿರೇಹಾಳ ಗ್ರಾಮದಲ್ಲಿ ವರದಿಯಾಗಿದೆ. ಮರಳು ದಂಧೆಯಲ್ಲಿ ಪಾಲುದಾರರಾಗಿದ್ದ ಶರಣಗೌಡ ಪಾಟೀಲ್ ಹಾಗೂ ತಮ್ಮ ನಡುವೆ ಉಂಟಾದ ಹಣಕಾಸಿನ ಒತ್ತಡಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ವೈದ್ಯರು ಪತ್ರದಲ್ಲಿ ತಿಳಿಸಿದ್ದಾರೆ. ಶಶಿಧರ ಹಟ್ಟಿ, ಶರಣಗೌಡ ಪಾಟೀಲ್‌ ಸೇರಿದಂತೆ ಮೂವರು ಮರಳು ದಂಧೆಯಲ್ಲಿ ಭಾಗಿಯಾಗಿದ್ದರು.

ರೋಹನ್ ಬೋಪಣ್ಣಗೆ ಸಿಎಂ ಸನ್ಮಾನ

ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದು ಐತಿಹಾಸಿಕ ಸಾಧನೆ ಮಾಡಿರುವ ರೋಹನ್ ಬೋಪಣ್ಣ ಅವರನ್ನು ಸಿಎಂ ಸಿದ್ದರಾಮಯ್ಯ ಸನ್ಮಾನಿಸಿದ್ದು, 50 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ.  ಸನ್ಮಾನ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಉಪಸ್ಥಿತರಿದ್ದರು. ಬೋಪಣ್ಣ ಜನವರಿ 27ರಂದು ಮೆಲ್ಬೋರ್ನ್ ನಲ್ಲಿ ನಡೆದ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ಫೈನಲ್ಸ್ ನಲ್ಲಿ ಇಟಲಿಯ ಆಟಗಾರರ ವಿರುದ್ಧ ಗೆಲುವು ದಾಖಲಿಸಿದ್ದರು.

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕ ಮಂಡನೆ

ವಾಣಿಜ್ಯ ಹಾಗೂ ಇತರೆ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡವನ್ನು ಕಡ್ಡಾಯಗೊಳಿಸುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು. ಈ ಮೂಲಕ ಸುಗ್ರೀವಾಜ್ಞೆಗೆ ಕಾನೂನಿನ ರೂಪ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ನಾಮಫಲಕಗಳಲ್ಲಿ  ಕನ್ನಡಕ್ಕೆ ಆದ್ಯತೆ ನೀಡುವುದಕ್ಕೆ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು. ಆದರೆ ರಾಜ್ಯಪಾಲರು ಸುಗ್ರೀವಾಜ್ಞೆಯನ್ನು ವಾಪಸ್ ಕಳುಹಿಸಿ ವಿಧಾನಮಂಡಲದಲ್ಲಿ ವಿಧೇಯಕ ಮಂಡಿಸಿ ಅಂಗೀಕಾರ ಪಡೆದುಕೊಳ್ಳುವಂತೆ ಸೂಚಿಸಿದ್ದರು. ಈಮಧ್ಯೆ, ಅತಿಥಿ ಉಪನ್ಯಾಸಕರನ್ನು ರ ಖಾಯಂ ಮಾಡಲು ನಿಯಮಗಳಲ್ಲಿ ಅವಕಾಶ ಇಲ್ಲ ಎಂದು ಅಧಿವೇಶನದಲ್ಲಿ ಸರ್ಕಾರ ಸ್ಪಷ್ಟಪಡಿಸಿದೆ. ಪರಿಷತ್‌ ಸದಸ್ಯ ದೇವೇಗೌಡ ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಉನ್ನತ ಶಿಕ್ಷಣ ಸಚಿವ ಸುಧಾಕರ್, ಖಾಲಿ ಹುದ್ದೆಗೆ ಖಾಯಂ ಮಾಡಲು ನಿಯಮಗಳಲ್ಲಿ ಅವಕಾಶ ಇಲ್ಲ ಎಂದು ಹೇಳಿದ್ದಾರೆ.

ಬಸವಣ್ಣ ಭಾವಚಿತ್ರ ಅನಾವರಣ

ಸಾಮಾಜಿಕ ಕ್ರಾಂತಿಯ ಹರಿಕಾರ, ವಿಶ್ವಮಾನವತಾವಾದಿ ಜಗಜ್ಯೋತಿ ಬಸವಣ್ಣನವರ ಭಾವಚಿತ್ರವನ್ನು ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಫೆಬ್ರವರಿ 17ರಂದು ಹಾಕುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬಸವಣ್ಣ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿದ ಅವರು, ಬಸವಣ್ಣನವರ ಭಾವಚಿತ್ರದಲ್ಲಿ ‘ವಿಶ್ವ ಗುರು ಬಸವಣ್ಣ -ಸಾಂಸ್ಕೃತಿಕ ನಾಯಕ’ ಎಂದು ನಮೂದಿಸಲು ಸೂಚನೆ ನೀಡಲಾಗಿದೆ. ಬಸವಣ್ಣನವರ ಕಾರ್ಯಕ್ರಮಕ್ಕೆ ಸರ್ಕಾರದಲ್ಲಿ ದುಡ್ಡು ಇಲ್ಲ ಎಂದು ಹೇಳುವುದೇ ಇಲ್ಲ ಎಂದು ಸಿಎಂ ಹೇಳಿದ್ದಾರೆ.

ವೀಡಿಯೋ ಸುದ್ದಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com