ಹಣ ಕೊಡದಿದ್ದರೆ ವಿಧಾನ ಸೌಧಕ್ಕೆ ಹೋಗುವಾಗ ಕೊಲ್ತೀನಿ: ಮಾಜಿ ಕಾರ್ಪೋರೇಟರ್ ನಿಂದ ಶಾಸಕ ಗೋಪಾಲಯ್ಯಗೆ ಬೆದರಿಕೆ ಕರೆ!

ವಿಧಾನಸೌಧಕ್ಕೆ ಹೋಗುವಾಗ ಕೊಲ್ತೀನಿ, ಇಲ್ಲ ಮನೆಯೊಳಗೆ ಬಂದು ಕೊಲೆ ಮಾಡ್ತೀನಿ ಎಂದು ಬಿಜೆಪಿ ಶಾಸಕ ಗೋಪಾಲಯ್ಯಗೆ  ಮಾಜಿ ಕಾರ್ಪೊರೇಟರ್ ಪದ್ಮರಾಜ್  ಕೊಲೆ ಬೆದರಿಕೆ  ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಗೋಪಾಲಯ್ಯ
ಗೋಪಾಲಯ್ಯ

ಬೆಂಗಳೂರು: ವಿಧಾನಸೌಧಕ್ಕೆ ಹೋಗುವಾಗ ಕೊಲ್ತೀನಿ, ಇಲ್ಲ ಮನೆಯೊಳಗೆ ಬಂದು ಕೊಲೆ ಮಾಡ್ತೀನಿ ಎಂದು ಬಿಜೆಪಿ ಶಾಸಕ ಗೋಪಾಲಯ್ಯಗೆ  ಮಾಜಿ ಕಾರ್ಪೊರೇಟರ್ ಪದ್ಮರಾಜ್  ಕೊಲೆ ಬೆದರಿಕೆ  ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಮಂಗಳವಾರ ಮಧ್ಯರಾತ್ರಿ  ಗೋಪಾಲಯ್ಯ  ಅವರಿಗೆ  ಕರೆ ಮಾಡಿದ ಮಾಜಿ ಕಾರ್ಪೊರೇಟರ್‌ ಪದ್ಮರಾಜ್‌  ʻನನಗೆ ಹಣ ಕೊಡಬೇಕು, ಕೊಡದಿದ್ದರೆ ನಿಮ್ಮನ್ನೂ ನಿಮ್ಮ ಕುಟುಂಬವನ್ನು ಕೊಲ್ಲದೆ ಬಿಡುವುದಿಲ್ಲʼ ಎಂದು ಬೆದರಿಕೆ ಹಾಕಿದ್ದಾನೆ. ಈ ಕರೆ ಬಂದ ತಕ್ಷಣವೇ ಗೋಪಾಲಯ್ಯ ಅವರು ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ, ವಿಧಾನಸಭೆಯ ಸ್ಪೀಕರ್‌ ಅವರಿಗೂ ಜೀವ ಬೆದರಿಕೆ ಇರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇದೀಗ ಪೊಲೀಸರು ಗೋಪಾಲಯ್ಯ ಅವರ ಮನೆಗೆ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಮತ್ತು ಆರೋಪಿ ಪದ್ಮರಾಜ್‌ಗಾಗಿ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ.

ನಿನ್ನೆ ರಾತ್ರಿ 11.1 ನಿಮಿಷಕ್ಕೆ ಬಸವೇಶ್ವರ ನಗರದ ಮಾಜಿ ಕಾರ್ಪೊರೇಟರ್‌ ಪದ್ಮರಾಜ್ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಹಣ ಕೊಡದೆ ಹೋದರೆ ಮನೆಯವರೂ ಸೇರಿ ಎಲ್ಲರನ್ನೂ ಕೊಲ್ಲುವುದಾಗಿ ಬೆದರಿಸಿದ್ದಾನೆ. ಅತ್ಯಂತ ಕೆಟ್ಟ ಪದಗಳಿಂದ ನನಗೆ ನನ್ನ ಕುಟುಂಬದವರಿಗೆ ನಿಂದನೆ ಮಾಡಿದ್ದಾನೆ. ಗೂಂಡಾ ವರ್ತನೆ ತೋರಿದ್ದಾನೆ ಎಂದು ಘಟನೆಯ ಬಗ್ಗೆ ಗೋಪಾಲಯ್ಯ ವಿವರಣೆ ನೀಡಿದ್ದಾರೆ.

ಪದ್ಮರಾಜ್‌ಗೂ ನನಗೂ ಯಾವುದೇ ಹಣಕಾಸಿನ ವ್ಯವಹಾರಗಳಿಲ್ಲ. ನಾನೇ ಅವನಿಗೆ ಹಿಂದೆ ಸಾಕಷ್ಟು ಸಹಾಯ ಮಾಡಿದ್ದೇನೆ. ಅವನ ಮಗಳಿಗೆ ಕಾಲೇಜು ಸೀಟು, ಉದ್ಯೋಗಕ್ಕೆ ಸಹಾಯ ಮಾಡಿದ್ದೇನೆ. ಆದರೆ, ಈಗ ಅವನೇ ನನ್ನ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾನೆ. ಅವನನ್ನು ಬಿಡಬಾರದು. ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರ ಬಳಿ ಮಾತನಾಡಿದ್ದೇನೆ ಎಂದು ಗೋಪಾಲಯ್ಯ ಹೇಳಿದರು.

ಪದ್ಮರಾಜ್‌ಗೆ ಸಾಕಷ್ಟು ಬಾರಿ ಸಹಾಯ ಮಾಡಿದ್ದೇನೆ. ಆದರೆ ಈ ಥರ ಕುಡಿದು ನಿಂದಿಸಿದ್ದು, ಬೆದರಿಕೆ ಹಾಕಿದ್ದು ನೋವಾಗಿದೆ ಎಂದು ಗೋಪಾಲಯ್ಯ ಅಳಲು ತೋಡಿಕೊಂಡಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ ಪದ್ಮರಾಜ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ವಿಚಾರಣೆಗೆ ನೋಟಿಸ್ ನೀಡಲು ಪೊಲೀಸರು ಪದ್ಮರಾಜ್ ಮನೆ ಬಾಗಿಲಿಗೆ ತೆರಳಿದ್ದಾರೆ. ಈ ವೇಳೆ ಮನೆಯ ಬಾಗಿಲು ತೆರೆಯದೆ ಪದ್ಮರಾಜ್ ಗಲಾಟೆ ಮಾಡುತ್ತಿದ್ದು, ಪೊಲೀಸರು ಪದ್ಮರಾಜ್ ಬಂಧನಕ್ಕೆ ಹರಸಾಹಸ ಪಡುತ್ತಿದ್ದಾರೆ.

ಮಾಜಿ ಕಾರ್ಪೊರೇಟರ್ ನಿಂದ ಕೊಲೆ ಬೆದರಿಕೆ ಆರೋಪದ ಕುರಿತಾಗಿ ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಕೆ. ಗೋಪಾಲಯ್ಯ ಪ್ರಸ್ತಾಪ ಮಾಡಿದರು. ನಾಲ್ಕು ಬಾರಿ ‌ಶಾಸಕನಾಗಿದ್ದೇನೆ, ನಿನ್ನೆ ರಾತ್ರಿ ಪದ್ಮರಾಜ್ ಕರೆ ಮಾಡಿ ಹಣಕ್ಕೆ ಬೇಡಿಕೆ ಇಡ್ತಾರೆ.‌ ಅತ್ಯಂತ ಕೆಟ್ಟ ಪದಗಳಿಂದ ನಿಂದಿಸಿದ್ದಾರೆ. ನನಗೆ ಹಾಗೂ ನನ್ನ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಸದನದ ಗಮನ ಸೆಳೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com