ಈ ದಿನದ ಮುಖ್ಯಾಂಶಗಳು:15-02-2024

ಉಪೇಂದ್ರ ಚಿತ್ರದ ಕರಿಮಣಿ ಮಾಲೀಕ ನೀನಲ್ಲ ಹಾಡಿಗೆ ಪತ್ನಿ ರೀಲ್ಸ್​ ಮಾಡಿದ್ದಕ್ಕೆ ಮನನೊಂದು ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ದಿನದ ಮುಖ್ಯಾಂಶಗಳು:15-02-2024

ನಾಳೆ ಸಿದ್ದರಾಮಯ್ಯ ಬಜೆಟ್ ಮಂಡನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ದಾಖಲೆಯ 15ನೇ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ. ಇನ್ನು ನಾಳಿನ ಬಜೆಟ್‌ನಲ್ಲಿ ಯಾವೆಲ್ಲಾ ಹೊಸ ಕಾರ್ಯಕ್ರಮಗಳು ಇರುತ್ತವೆ. ಅಭಿವೃದ್ಧಿ ಕಾರ್ಯಗಳಿಗೆ ಎಷ್ಟೆಲ್ಲಾ ಅನುದಾನ ಒದಗಿಸಲಾಗುತ್ತದೆ. ಗ್ಯಾರಂಟಿ ಯೋಜನೆಗಳ ಮುಂದುವರಿಕೆಗ ಯಾವ ರೀತಿ ಸಂಪನ್ಮೂಲ ಕ್ರೂಢೀಕರಿಸಲಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸರ್ಕಾರದ 2ನೇ ಅವಧಿಯ ಬಜೆಟ್ ಮಂಡಿಸುತ್ತಿದ್ದು, ಈ ಬಜೆಟ್‌ನಲ್ಲಿ ಲೋಕಸಭಾ ಚುನಾವಣೆ ಗೆಲ್ಲಲು ಏನೆಲ್ಲಾ ಜನಪರ ಕಾರ್ಯಕ್ರಮಗಳನ್ನು ನೀಡಲಿದ್ದಾರೆ ಎಂಬುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಈ ಬಾರಿಯ ಬಜೆಟ್ ಗಾತ್ರ 3.80 ಲಕ್ಷ ಕೋಟಿ ದಾಟುವ ನಿರೀಕ್ಷೆ ಇದೆ. ನಾಳೆ ಬೆಳಿಗ್ಗೆ 10.15ಕ್ಕೆ ವಿಧಾನಸಭೆಯಲ್ಲಿ ಬಜೆಟ್ ಮಂಡಿಸುತ್ತಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆಗೆ ಕನ್ನಡತಿ ಸವಿತಾ ಕಾಂಬಳೆ ಮೇಯರ್

ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಪಟ್ಟ ಮತ್ತೆ ಬಿಜೆಪಿಗೆ ಒಲಿದಿದ್ದು ಮಾಜಿ ಪೌರ ಕಾರ್ಮಿಕ ಮಹಿಳೆ ಕನ್ನಡತಿ ಸವಿತಾ ಕಾಂಬಳೆ ಅವರು 22ನೇ ಅವಧಿಯ ಮೇಯರ್ ಆಗಿ ಆಯ್ಕೆಯಾಗಿದ್ದರೆ. ಮೇಯರ್ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದ ಲಕ್ಷ್ಮೀ ರಾಠೋಡ ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ ಸವಿತಾ ಕಾಂಬಳೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನು ಉಪಮೇಯರ್ ಆಗಿ ಮರಾಠಿಯ ಆನಂದ್ ಚವ್ಹಾಣ್ ಆಯ್ಕೆಯಾಗಿದ್ದಾರೆ. ಬಿಜೆಪಿಯ‌ ಆನಂದ್ ಚವ್ಹಾಣ್​ 39 ಮತ ಪಡೆದಿದ್ದಾರೆ. ಕಾಂಗ್ರೆಸ್‌‌ನ ಜ್ಯೋತಿ ಕಡೋಲ್ಕರ್‌ 20 ಮತಗಳನ್ನು ಮಾತ್ರ ಪಡೆದರು. ಬಿಜೆಪಿ ಈ ಬಾರಿ ಕನ್ನಡ ಹಾಗೂ ಮರಾಠ ಸಮುದಾಯಗಳನ್ನು ಓಲೈಕೆ ಮಾಡಿದೆ.

ಆಸ್ಪತ್ರೆಗೆ ಹೆಚ್ ಡಿ ದೇವೇಗೌಡ ದಾಖಲು

ಅನಾರೋಗ್ಯದ ಕಾರಣ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ನಗರದ ಮಣಿಪಾಲ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಬೆಳಿಗ್ಗೆ ದೇವೇಗೌಡರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಮಣಿಪಾಲ್‌ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಯ ಶ್ವಾಸಕೋಶ ತಜ್ಞ ಡಾ. ಸತ್ಯನಾರಾಯಣ ಅವರು ಪರೀಕ್ಷೆ ನಡೆಸಿ, ಆಸ್ಪತ್ರೆಯಲ್ಲಿಯೇ ದಾಖಲಿಸಿಕೊಂಡು ನಿಗಾವಹಿಸಿದ್ದಾರೆ. ಸದ್ಯ ದೇವೇಗೌಡರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಆತಂಕ ಪಡುವ ಅಗತ್ಯ ಇಲ್ಲ ಎಂದು ಮಣಿಪಾಲ್‌ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ. 90 ವರ್ಷದ ಎಚ್‌ಡಿ ದೇವೇಗೌಡ ಅವರು ಸಕ್ರಿಯ ರಾಜಕಾರಣದಲ್ಲಿದ್ದು, ಸದ್ಯ ಅವರು ಲೋಕಸಭೆ ಚುನಾವಣೆಯ ಪ್ರಚಾರ, ಸಭೆಗಳನ್ನು ನಡೆಸುತ್ತಿದ್ದಾರೆ.

ಎರಡು ದಿನಕ್ಕೆ ಇಳಿಸಿದ ಮದ್ಯಮಾರಾಟ ನಿರ್ಬಂಧ

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಮತದಾನದ ದಿನ ಮತ್ತು ಎಣಿಕೆ‌‌ ದಿನದಂದು ಮಾತ್ರ ಮದ್ಯ ಮಾರಾಟಕ್ಕೆ ಹೈಕೋರ್ಟ್‌ ನಿರ್ಬಂಧ ವಿಧಿಸಿ ಆದೇಶ ಪ್ರಕಟಿಸಿದೆ. ಫೆಬ್ರವರಿ 16ರ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿವರೆಗೆ ಮತ್ತು ಫೆಬ್ರವರಿ .20 ರ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿವರೆಗೆ ಮಾತ್ರ ಮದ್ಯ ಮಾರಾಟ, ವಿತರಣೆ ಮತ್ತು ಸೇವೆಯನ್ನು ನಿಷೇಧಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ. ಫೆಬ್ರವರಿ 14ರಂದು ಸಂಜೆ 5 ರಿಂದ ಫೆಬ್ರವರಿ 17 ರ ಬೆಳಿಗ್ಗೆ 6 ರವರೆಗೆ ಮದ್ಯ ಮಾರಾಟ, ವಿತರಣೆ ಮತ್ತು ಸೇವೆಯ ಮೇಲಿನ ನಿಷೇಧವನ್ನು ಪ್ರಶ್ನಿಸಿ ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ​​ಮತ್ತು ಇತರರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನಂತರ ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರು, ವ್ಯಾಲೆಂಟೈನ್ಸ್ ದಿನದಂದು ಉದ್ಯಮಕ್ಕೆ ಆಗಬಹುದಾದ ನಷ್ಟದ ದೃಷ್ಟಿಯಿಂದ ನಿಷೇಧದ ಅವಧಿಯನ್ನು ಕಡಿಮೆ ಮಾಡಿ ಮಧ್ಯಂತರ ಆದೇಶವನ್ನು ಪ್ರಕಟಿಸಿದರು.

ಬಿಜೆಪಿ ಶಾಸಕರ ವಿರುದ್ಧ ಎಫ್ಐಆರ್ ದಾಖಲು

ಮಂಗಳೂರಿನ ಜೆಪ್ಪುವಿನಲ್ಲಿರುವ ಸೇಂಟ್ ಜೆರೋಸಾ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇರೆಗೆ ಶಾಲೆ ಬಳಿ ಪ್ರತಿಭಟನೆ ನಡೆಸಿದ್ದ ಬಿಜೆಪಿ ಶಾಸಕರ ವಿರುದ್ಧ ಪ್ರಕರಣ ದಾಖಲಾಗಿದೆ. ಬಿಜೆಪಿ ಶಾಸಕರಾದ ಡಿ ವೇದವ್ಯಾಸ್ ಕಾಮತ್ ಮತ್ತು ಭರತ್ ಶೆಟ್ಟಿ, ವಿಎಚ್‌ಪಿ ಮುಖಂಡ ಶರಣ್ ಪಂಪ್‌ವೆಲ್ ಮತ್ತು ಇತರರ ವಿರುದ್ಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು, ಕಾನೂನುಬಾಹಿರ ಸಭೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ, ಕ್ರಿಮಿನಲ್ ಬೆದರಿಕೆ ಮತ್ತು ಇತರರ ವಿರುದ್ಧ ಸೇಂಟ್ ಜೆರೋಸಾ ಶಾಲೆಯ ಮುಂದೆ ಗಲಾಟೆ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಶ್ರೀರಾಮನಿಗೆ ಅಪಮಾನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಕಿ ಪ್ರಭಾ ಅವರನ್ನು ಶಾಲಾ ಆಡಳಿತ ಮಂಡಳಿ ಅಮಾನತು ಮಾಡಿದೆ.

ಪತಿ ಪ್ರಾಣಕ್ಕೆ ಕುತ್ತು ತಂದ ಕರಿಮಣಿ ರೀಲ್ಸ್ ಹಾಡು

ಉಪೇಂದ್ರ ಚಿತ್ರದ ಕರಿಮಣಿ ಮಾಲೀಕ ನೀನಲ್ಲ ಹಾಡು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್ ಆಗುತ್ತಿದೆ. ಎಲ್ಲರೂ ಹಾಡಿನ ರೀಲ್ಸ್ ಮಾಡುತ್ತಿದ್ದಾರೆ. ಅದರಂತೆ ಮಹಿಳೆಯೊಬ್ಬರು ಇದೇ ಹಾಡಿಗೆ ರೀಲ್ಸ್​ ಮಾಡಿದ್ದು, ಇದರಿಂದ ಮನನೊಂದ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪಿ.ಜಿ ಪಾಳ್ಯ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಮೃತನನ್ನು 33 ವರ್ಷದ ಕುಮಾರ್ ಎಂದು ಗುರುತಿಸಲಾಗಿದೆ. ಕುಮಾರ್‌ ಪತ್ನಿ ರೂಪಾ ತನ್ನ ಸೋದರಮಾವ ಹಾಗೂ ಸಹೋದರಿ ಜತೆಗೆ ಸೇರಿ ಓ ನಲ್ಲ, ನೀನಲ್ಲ.. ಕರಿಮಣಿ ಮಾಲೀಕ ನೀನಲ್ಲ ಎಂಬ ಸಾಂಗ್‌ಗೆ ರೀಲ್ಸ್‌ ಮಾಡಿ, ಸೋಶಿಯಲ್‌ ಮೀಡಿಯಾದಲ್ಲಿ ಅಪ್ಲೋಡ್‌ ಮಾಡಿದ್ದರು. ಈ ರೀಲ್ಸ್‌ ವಿಚಾರಕ್ಕೆ ಊರಲ್ಲಿ ಕುಮಾರ್‌ನನ್ನು ಕೆಲವರು ಕಾಲೆಳೆದು ಯಾರಪ್ಪಾ ಕರಿಮಣಿ ಮಾಲೀಕ ಎಂದು ಹೀಯಾಳಿಸಿದ್ದರಿಂದ ಮನನೊಂದು ಕುಮಾರ್‌ ಆತ್ಮಹತ್ಯೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com