ಈ ದಿನದ ಮುಖ್ಯಾಂಶಗಳು: 16-02-24

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಧಾನಸಭೆಯಲ್ಲಿ ಕಾಂಗ್ರೆಸ್ ಸರ್ಕಾರದ 2ನೇ ಅವಧಿಯ ಬಜೆಟ್‌ ಮಂಡಿಸಿದ್ದಾರೆ. 3,71,383 ಕೋಟಿ ರೂಪಾಯಿ ಗಾತ್ರದ ಬಜೆಟ್ ಮೂಲಕ ಹಲವು ಹೊಸ ಯೋಜನೆಗಳನ್ನು ಘೋಷಿಸಿದರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಸಿದ್ದರಾಮಯ್ಯ ದಾಖಲೆಯ 15ನೇ ಬಜೆಟ್ ಮಂಡನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಧಾನಸಭೆಯಲ್ಲಿ ಕಾಂಗ್ರೆಸ್ ಸರ್ಕಾರದ 2ನೇ ಅವಧಿಯ ಬಜೆಟ್‌ ಮಂಡಿಸಿದ್ದಾರೆ. 3,71,383 ಕೋಟಿ ರೂಪಾಯಿ ಗಾತ್ರದ ಬಜೆಟ್ ಮೂಲಕ ಹಲವು ಹೊಸ ಯೋಜನೆಗಳನ್ನು ಘೋಷಿಸಿದರು. ಗ್ಯಾರಂಟಿ ಯೋಜನೆಗಳೊಂದಿಗೆ ಉದ್ಯೋಗ ಸೃಜನ, ಶಿಕ್ಷಣ, ಆರೋಗ್ಯ, ಹಸಿವು ನಿವಾರಣೆ, ಕೃಷಿ ಮತ್ತು ನೀರಾವರಿಗೆ ಪ್ರೋತ್ಸಾಹ, ಮೂಲ ಸೌಕರ್ಯ ಸೇರಿದಂತೆ ವಿವಿಧ ವಲಯಗಳ ಅಭಿವೃದ್ಧಿಗೆ ಬಜೆಟ್ ನಲ್ಲಿ ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ. ಬಿಯರ್ ಮೇಲಿನ ಅಬಕಾರಿ ಶುಲ್ಕ ಹೆಚ್ಚಳ ಹೊರತುಪಡಿಸಿ, ಉಳಿದಂತೆ ಯಾವುದೇ ತೆರಿಗೆ ಹೊರೆಯನ್ನು ಜನಸಾಮಾನ್ಯರ ಮೇಲೆ ಹೇರಿಲ್ಲ. ಬಜೆಟ್ ನ ಪ್ರಮುಖ ಅಂಶಗಳೆಂದರೆ ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ರೂ. ಮೀಸಲು. ರಾಜ್ಯಾದ್ಯಂತ ಮಹಿಳೆಯರೇ ನಡೆಸುವ 50 ಹೋಟೆಲ್ ಕೆಫೆ ನಿರ್ಮಾಣ. ಸಿಎಂ ಸಿದ್ದು ಪ್ರತಿನಿಧಿಸುವ ವರುಣಾ ಕ್ಷೇತ್ರಕ್ಕೆ 2 ಸಾವಿರ ಕೋಟಿ ರೂ. ಮೀಸಲು. ರಾಜ್ಯದ ಆಯ್ದ ಜಿಲ್ಲೆಗಳಲ್ಲಿ ಕಿಸಾನ್ ಮಾಲ್ ಸ್ಥಾಪನೆ. ಮಾಜಿ ಸಿಎಂ ಎಸ್. ಬಂಗಾರಪ್ಪ ಸ್ಮಾರಕ ನಿರ್ಮಾಣ ಘೋಷಣೆ. ವಿಜಯಪುರದಲ್ಲಿ ತೋಟಗಾರಿಕಾ ಕಾಲೇಜು. ಸಮಗ್ರ ಕೃಷಿ ಉತ್ತೇಜಿಸುವ ಕರ್ನಾಟಕ ರೈತ ಸಮೃದ್ದಿ ಯೋಜನೆ. ಸಿರಿಧಾನ್ಯಗಳಿಗಾಗಿ 'ನಮ್ಮ ಮಿಲ್ಲೆಟ್' ಹೊಸ ಯೋಜನೆ ಪ್ರಾರಂಭ. ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ ಫೋನ್. 80 ವರ್ಷ ದಾಟಿದ ವೃದ್ಧರಿಗೆ ಆಹಾರ ಒದಗಿಸಲು 'ಅನ್ನ ಸುವಿಧಾ' ಯೋಜನೆ. ಬೆಂಗಳೂರು ಟ್ರಾಫಿಕ್ ಜಾಮ್‌ಗೆ ಸುರಂಗ ಮಾರ್ಗ ಪರಿಹಾರ. ಗ್ರಾಮೀಣ ಭಾಗದ ಪತ್ರಕರ್ತರಿಗೆ ಉಚಿತ ಬಸ್‌ಪಾಸ್ ಯೋಜನೆಯನ್ನು ಬಜೆಟ್‌ನಲ್ಲಿ ಪ್ರಕಟಿಸಿದ್ದಾರೆ.

ಸಿದ್ದರಾಮಯ್ಯ ಬಜೆಟ್ ಕುರಿತಂತೆ ವಿಪಕ್ಷಗಳು ಕಿಡಿ

ಸಿದ್ದರಾಮಯ್ಯ ಬಜೆಟ್ ಕುರಿತಂತೆ ವಿಪಕ್ಷಗಳು ಕಿಡಿಕಾರಿದೆ. ಸಿದ್ದರಾಮಯ್ಯ ಕಳಪೆ ಬಜೆಟ್​ ಮಂಡಿಸಿದ್ದಾರೆ. ನನ್ನ ಜೀವಮಾನದಲ್ಲೇ ಇಂತಹ ಕಳಪೆ ಬಜೆಟ್​ ನೋಡಿಲ್ಲ. ಹದಿನಾಲ್ಕು ಬಜೆಟ್​ಗಳನ್ನು ಮಂಡಿಸಿರುವ ಸಿದ್ದರಾಮಯ್ಯರಿಂದ ಇಂತಹ ಕಳಪೆ ಬಜೆಟ್ ನಿರೀಕ್ಷಿಸಿರಲಿಲ್ಲ ಎಂದು ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಾರಿ ಬಜೆಟ್​ನ ಬಹುತೇಕ ಅಂಶ ಕೇಂದ್ರ ಸರ್ಕಾರವನ್ನು ದೂರಲು ಮೀಸಲಿಡಲಾಗಿದೆ. ದೆಹಲಿ ಪ್ರತಿಭಟನೆಯ ಮುಂದುವರೆದ ಭಾಗವಾಗಿ ಈ ಆಯವ್ಯಯ ಮಾಡಲಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ದೇಶದಲ್ಲಿ ಅಮೃತ ಕಾಲದ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ, ಸಿದ್ದರಾಮಯ್ಯ ಬಜೆಟ್ ನೋಡಿದ್ರೆ ಅಮೃತ ಅಲ್ಲ, ವಿನಾಶ ಕಾಲ ಎನ್ನುವುದು ತಿಳಿಯುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಬಿಜೆಪಿಗರ ತಲೆಯಲ್ಲಿ ಏನು ಇಲ್ಲ. ಇವರೆಲ್ಲಾ ಸಂಸದರಾಗಲು ನಾಲಾಯಕ್ ಎಂದರು. ಈ ಬಾರಿ 3,71, 383 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಲಾಗಿದೆ. ಇದು ಕಳೆದ ಬಜೆಟ್​​ಗಿಂತ 46,630 ಕೋಟಿ ರೂ. ಹೆಚ್ಚು ಗಾತ್ರದ ಬಜೆಟ್ ಎಂದರು.

ಹೃದಯಾಘಾತದಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಾವು

ದಕ್ಷಿಣ ಕನ್ನಡದ ಉಪ್ಪಿನಂಗಡಿಯಲ್ಲಿ ಹೃದಯಾಘಾತದಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ನಡೆದಿದೆ. ಪುತ್ತೂರಿನ ಫಿಲೋಮಿನಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ 17 ವರ್ಷದ ಹಫೀಜಾ ಮೃತ ವಿದ್ಯಾರ್ಥಿನಿ. ಈಕೆ ಉಪ್ಪಿನಂಗಡಿಯ ನೆಕ್ಕಿಲಾಡಿ ಕುರ್ವೇಲು ನಿವಾಸಿಯಾದ ಉದ್ಯಮಿ ದಾವೂದ್ ಎಂಬವರ ಪುತ್ರಿ. ಪುತ್ತೂರಿನ ಫಿಲೋಮಿನಾ ಕಾಲೇಜಿನಲ್ಲಿ ಹಫೀಜಾ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ತಡ ರಾತ್ರಿವರೆಗೂ ಅಭ್ಯಾಸ ಮಾಡಿ ಮಲಗಿದ್ದಾಳೆ. ಆದರೆ ಮುಂಜಾನೆ ಎದ್ದೇಳಿಲ್ಲ. ನಂತರ ಪೋಷಕರು ಮಗಳನ್ನು ಎಚ್ಚರಿಸಲು ಮುಂದಾದಾಗ ಆಕೆ ಮೃತಪಟ್ಟಿರುವುದು ತಿಳಿದುಬಂದಿದೆ.

ಬೆಂಗಳೂರಿನಲ್ಲಿ ನಿಷೇಧಿತ ಪಿಎಫ್ಐ ಸಂಘಟನೆಯ ಮುಖಂಡನ ಬಂಧನ

ನಿಷೇಧಿತ ಪಿಎಫ್ಐ ಸಂಘಟನೆಯ ಮುಖಂಡ ದಾವಣಗೆರೆಯ ಹರಿಹರ ಮೂಲದ ತಾಹೀರ್ ಹುಸೇನ್ ಎಂಬಾತನನ್ನು ಬೆಂಗಳೂರಿನ ಕೆ.ಜಿ.ಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕೋಮು‌ ಸೌಹಾರ್ದತೆ ಕದಡುವ ಉದ್ದೇಶದಿಂದ ಕಾರ್ಯಪ್ರವೃತ್ತವಾಗಿದ್ದ ಆರೋಪದಡಿ ಪಿಎಫ್ಐ ಸಂಘಟನೆ ನಿಷೇಧಿಸಿದ ಬಳಿಕ 2022ರಲ್ಲಿ ರಾಜ್ಯಾದ್ಯಂತ ಅದರ ಸದಸ್ಯರ ಮನೆಗಳು, ಕಚೇರಿಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ಪೈಕಿ 15 ಜನರನ್ನು ಬಂಧಿಸಲಾಗಿತ್ತು. ಪಿಎಫ್ಐ ಸಂಘಟನೆಯ 19 ಮುಖಂಡರ ವಿರುದ್ಧ ಯುಎಪಿಎ ಕಾಯ್ದೆಯಡಿ ಕೆ.ಜಿ.ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com