'ಜನ ಸರ್ಟಿಫಿಕೇಟ್ ಕೊಟ್ಟಿದ್ದಾರೆ, ಬಿಜೆಪಿ ಸುಳ್ಳಿನ ಪಕ್ಷ, ಕೇಂದ್ರದಿಂದ ತಾರತಮ್ಯ': ಸದನದಲ್ಲಿ ಸಿದ್ದರಾಮಯ್ಯ ಗುಡುಗು

ಸುಳ್ಳು ಹೇಳುವುದು ಬಿಜೆಪಿಯವರು, ನಾವಲ್ಲ, ಸುಳ್ಳು ಹೇಳುವುದು ಬಿಜೆಪಿಯವರಿಗೆ ಕರಗತವಾಗಿದೆ, ಇದು ರಾಜ್ಯದ ಜನತೆಗೆ ಕೂಡ ಅರ್ಥವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಸದನದಲ್ಲಿ ಸಿಎಂ ಸಿದ್ದರಾಮಯ್ಯ
ಸದನದಲ್ಲಿ ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ಸುಳ್ಳು ಹೇಳುವುದು ಬಿಜೆಪಿಯವರು, ನಾವಲ್ಲ, ಸುಳ್ಳು ಹೇಳುವುದು ಬಿಜೆಪಿಯವರಿಗೆ ಕರಗತವಾಗಿದೆ, ಇದು ರಾಜ್ಯದ ಜನತೆಗೆ ಕೂಡ ಅರ್ಥವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ. ಇಂದು ಮಂಗಳವಾರ ವಿಧಾನಸಭೆಯ ಬಜೆಟ್​ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸಿ ಮಾತನಾಡಿದ ಅವರು, ನಾವು ರಾಜ್ಯಪಾಲರಿಂದ ಸುಳ್ಳು ಹೇಳಿಸಿದ್ದೇವೆ ಎಂಬುದಾಗಿ ಬಿಜೆಪಿಯವರು ಆರೋಪ ಮಾಡಿದ್ದಾರೆ.

ರಾಜ್ಯಪಾಲರ ಭಾಷಣ ನೀರಸ ಭಾಷಣ ಎಂದು ಆರೋಪಿಸಿದ್ದಾರೆ. ರಾಜ್ಯಪಾಲರು ಒಳ್ಳೆಯವರು. ಅವರ ಬಾಯಿಂದ ನೀವು ಏನೇನೋ ಹೇಳಿಸಿದಿರಿ ಎಂದು ಮಾಜಿ ಸಿಎಂ ಬೊಮ್ಮಾಯಿ ಆರೋಪಿಸಿದ್ದಾರೆ. ಆದರೆ, ರಾಜ್ಯಪಾಲರು ಸತ್ಯವನ್ನೇ ಹೇಳಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.

ಬಿಜೆಪಿಯವರು ಹೇಳುತ್ತಿರುವುದು ಸುಳ್ಳು ಅಂತ ಜನರಿಗೆ ಅರ್ಥವಾಗಿದೆ. ಬಿಜೆಪಿ ಸುಳ್ಳಿನ ಪಕ್ಷ ಎಂದರು. ಇದೇ ವೇಳೆ, ಮಧ್ಯ ಪ್ರವೇಶಿಸಿದ ಬೊಮ್ಮಾಯಿ, ನಮ್ಮದು ಸುಳ್ಳಿನ ಪಕ್ಷವಾದ್ರೆ, ಕಾಂಗ್ರೆಸ್ ಏನು ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾನು ನಿಮ್ಮನ್ನು ಕೆಣಕಲು ಹೋಗಲ್ಲ. ನಾವೇನು ಅಂತ ಜನ ಸರ್ಟಿಫಿಕೇಟ್ ಕೊಟ್ಟಿದ್ದಾರೆ ಎಂದರು.

ಸದನದಲ್ಲಿ ಸಿಎಂ ಸಿದ್ದರಾಮಯ್ಯ
ಲೋಕಸಭೆ ಚುನಾವಣೆಗೆ ಸಿಎಂ ಸಿದ್ದರಾಮಯ್ಯ ರಣಕಹಳೆ: ಮೋದಿ ಗ್ಯಾರಂಟಿ ಕದ್ದಿದ್ದಾರೆ ಎಂದು ಆಕ್ರೋಶ!

ಕೇಂದ್ರ ಸರ್ಕಾರಕ್ಕೆ 17 ಪತ್ರಗಳನ್ನು ಬರೆದಿದ್ದೆವು. ಅದರಲ್ಲಿ ಒಂದು ಪತ್ರಕ್ಕೆ ಮಾತ್ರ ಅಮಿತ್ ಶಾ, ‘ನಿಮ್ಮ ಪತ್ರ ತಲುಪಿದೆ’ ಎಂದು ಉತ್ತರಿಸಿದ್ದರು. ಬೇರೆ ಯಾವ ಪತ್ರಗಳಿಗೂ ಉತ್ತರ ನೀಡಿಲ್ಲ ಎಂದು ಸಿಎಂ ಹೇಳಿದರು.

ಜನ ತೀರ್ಪು ಕೊಟ್ಟಾಗಿದೆ. ಬಿಜೆಪಿಯವರನ್ನು ವಿರೋಧ ಪಕ್ಷ ಸ್ಥಾನದಲ್ಲಿ ಕೂರಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದಾಗ, ಕಳೆದ ಸಲ ಜನ ನಿಮ್ಮನ್ನು ವಿಪಕ್ಷ ಸ್ಥಾನದಲ್ಲಿ ಕೂರಿಸಿರಲಿಲ್ವಾ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಪ್ರಶ್ನಿಸಿದರು. ಕೂಡಲೇ ಸಿದ್ದರಾಮಯ್ಯ, ಅದನ್ನು ನಾನು ಒಪ್ಕೊಂಡಿದ್ದೇನೆ. 2018 ರಲ್ಲಿ ಜನರ ತೀರ್ಪು ತಲೆಬಾಗಿ ಒಪ್ಕೊಂಡಿದ್ದೇವೆ, ಈಗ ನೀವೂ ಒಪ್ಪಿಕೊಳ್ಳಿ ಎಂದರು.

28 ಸ್ಥಾನ ಗೆಲ್ಲುತ್ತೇವೆ, ಮೋದಿ ಮತ್ತೆ ಪ್ರಧಾನಿ ಆಗುತ್ತಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಧ್ಯ ಪ್ರವೇಶಿಸಿ ಹೇಳಿದರು. ಇದಕ್ಕೆ ತಿರುಗೇಟು ನೀಡಿದ ಸಿಎಂ, ನಿಮಗೆ ಲೋಕಸಭೆಗೆ ಅಭ್ಯರ್ಥಿಗಳೇ ಇಲ್ಲ. ಕಳೆದ ಸಲ ಬೊಮ್ಮಾಯಿ ಮತ್ತೆ ಸಿಎಂ ಆಗುತ್ತಾರೆ ಎಂದು ಹೇಳಿದ್ರಿ,‌ ರ್ಯಾಲಿ, ಸಮಾವೇಶ ಎಲ್ಲ ಮಾಡಿದ್ರಿ, ಆಮೇಲೆ ಏನಾಯ್ತು, ಅಭ್ಯರ್ಥಿಗಳಿಲ್ಲದೆ ಈ ಬಾರಿ ಜೆಡಿಎಸ್ ನವರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೀರಿ ಎಂದು ಟೀಕಿಸಿದರು.

ಕೇಂದ್ರದಿಂದ ಅನುದಾನ ತಾರತಮ್ಯ: ನಾವು 4.30 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ತೆರಿಗೆ ಕೊಟ್ಟಿದ್ದೇವೆ. 37,257 ಕೋಟಿ ಮಾತ್ರ ನಮಗೆ ತೆರಿಗೆ ಪಾಲು ಬರುತ್ತಿದೆ. 13,500 ಕೋಟಿ ರೂಪಾಯಿ ಕೇಂದ್ರದ ಯೋಜನೆಗಳಿಗೆ ಬರುತ್ತಿದೆ. ಒಟ್ಟು 50,257 ಕೋಟಿ ರೂ. ಮಾತ್ರ ನಮಗೆ ಸಿಗುತ್ತಿದೆ ಎಂದರು, ಇದಕ್ಕೆ ಬಿಜೆಪಿ ಶಾಸಕರು ಅಂಕಿಅಂಶ ಬಹಿರಂಗಪಡಿಸಿ ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಸಿಎಂ, ನಾನು ತಪ್ಪು ಹೇಳಿಲ್ಲ, ತಪ್ಪು ಹೇಳಿದ್ರೆ ತೆಗೆಸಿ ಎಂದು ಪ್ರತಿ ಸವಾಲು ಹಾಕಿದರು.

ಕಾಂಗ್ರೆಸ್ ಸಂಸದ ಡಿಕೆ ಸುರೇಶ್​ ದೇಶವಿಭಜನೆ ಹೇಳಿಕೆ ಬಗ್ಗೆ ಬಿಜೆಪಿ ನಾಯಕರು ತೆಗೆದಿರುವ ತೀವ್ರ ವಿವಾದವನ್ನು ಸದನದಲ್ಲಿ ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ, ಮೋದಿ ಗುಜರಾತ್​ ಸಿಎಂ ಆಗಿದ್ದಾಗ ಏನು ಹೇಳಿದ್ದರು ಎಂದು ಪ್ರಶ್ನಿಸಿದರು. ಇದೇ ವೇಳೆ, ವಿಧಾನಸಭೆಯಲ್ಲಿ ಆಡಳಿತ-ವಿಪಕ್ಷ ಸದಸ್ಯರ ಗದ್ದಲ ಜೋರಾಯಿತು. ಮೋದಿ ಅವರ ಅಂದಿನ ಹೇಳಿಕೆಯನ್ನು ಸಿದ್ದರಾಮಯ್ಯ ಓದಿ ಹೇಳಿದರು. ನಮ್ಮ ಸಂಸದರಿಗೆ ಧೈರ್ಯ ಇಲ್ವಾ? ಮೋದಿ ಬಳಿ ಹೋಗಿ ಕೇಳುವುದಕ್ಕೆ ಧೈರ್ಯ ಇಲ್ವಾ ಎಂದು ಪ್ರಶ್ನಿಸಿದರು.

ವಿಧಾನಸಭೆಯಲ್ಲಿ ಸರ್ಕಾರದ ಉತ್ತರವನ್ನು ಕೇಳಿದ ಬಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com