ಹೊಟ್ಟೆಕಿಚ್ಚಿಗೆ ಹಿಂದೂ ಕಾರ್ಯಕರ್ತನ ಬಂಧನ ಎಂದ ಪ್ರಹ್ಲಾದ್ ಜೋಶಿ; ಅವರೇನು ಕಾನೂನು ತಜ್ಞರಾ ಎಂದ ಸಿದ್ದರಾಮಯ್ಯ

ಹುಬ್ಬಳ್ಳಿಯಲ್ಲಿ ಪೊಲೀಸರು ಕರಸೇವ ಕಾರ್ಯಕರ್ತ ಶ್ರೀಕಾಂತ್ ಪೂಜಾರಿಯನ್ನು ಬಂಧಿಸಿದ್ದಾರೆ. ಇದು ಸರ್ಕಾರದ ದ್ವೇಷ ವರ್ತನೆಯಲ್ಲದೆ ಬೇರೇನೂ ಅಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ-ಸಂಸದ ಪ್ರಹ್ಲಾದ್ ಜೋಶಿ
ಸಿಎಂ ಸಿದ್ದರಾಮಯ್ಯ-ಸಂಸದ ಪ್ರಹ್ಲಾದ್ ಜೋಶಿ

ವಿಜಯಪುರ: ಹುಬ್ಬಳ್ಳಿಯಲ್ಲಿ ಪೊಲೀಸರು ಕರಸೇವ ಕಾರ್ಯಕರ್ತ ಶ್ರೀಕಾಂತ್ ಪೂಜಾರಿಯನ್ನು ಬಂಧಿಸಿದ್ದಾರೆ. ಇದು ಸರ್ಕಾರದ ದ್ವೇಷ ವರ್ತನೆಯಲ್ಲದೆ ಬೇರೇನೂ ಅಲ್ಲ. ರಾಮಮಂದಿರದ ಉದ್ಘಾಟನೆಯ ಹೊಟ್ಟೆಕಿಚ್ಚಿಗೆ ಪ್ರತೀಕಾರ ತೀರಿಸಿಕೊಳ್ಳಲಾಗುತ್ತಿದೆ. ಹೊಟ್ಟೆ ಕಿಚ್ಚಿನಿಂದ ಈ ರೀತಿ ಕಾಂಗ್ರೆಸ್ ವರ್ತಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಹುಬ್ಬಳ್ಳಿ ವಿಚಾರವಾಗಿ ಕಾನೂನು, ರಾಜಕೀಯ, ಸಾಮಾಜಿಕ ಹೋರಾಟ ಮಾಡುತ್ತೇವೆ. ಡಿಜೆ ಹಳ್ಳಿ ಕೆಜಿ ಹಳ್ಳಿ ಹಾಗೂ ಹುಬ್ಬಳ್ಳಿ ಪೊಲೀಸ್​ ಠಾಣೆ ದ್ವಂಸ ಕೇಸ್​ನಲ್ಲಿದ್ದವರನ್ನು ಬಿಡಲು ಪತ್ರ ಬರೆಯುತ್ತೀರಿ. ಸಿದ್ದರಾಮಯ್ಯ ಏನು ಮಾಡುತ್ತಿದ್ದಿರಾ? ಐಸಿಸ್ ಸರ್ಕಾರ ಮಾಡಲು ಹೊರಟಿದ್ದೀರಾ? ನೀವು ಮೊಘಲ್ ಸರ್ಕಾರ, ಇಸ್ಲಾಮಿಕ್ ಸರ್ಕಾರ, ಐಸಿಸ್ ಸರ್ಕಾರ ನಡೆಸುತ್ತಿದ್ದೀರಾ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ವಿಜಯಪುರ ನಗರದ ಸೈನಿಕ ಶಾಲಾ ಆವರಣದಲ್ಲಿರುವ ಹೆಲಿಪ್ಯಾಡ್ ನಲ್ಲಿ ಇಂದು ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​ಗೆ ರಾಮ ಮಂದಿರ ಆಗಬೇಕಾಗಿರಲಿಲ್ಲ. ರಾಮ ಮಂದಿರದ ಕಲ್ಪನೆಯೂ ಅವರಿಗೆ ಇರಲಿಲ್ಲ. ಕಾಂಗ್ರೆಸ್‌ಗೆ ಹೊಟ್ಟೆ ಕಿಚ್ಚು, ಆತಂಕ ಶುರುವಾಗಿದೆ. ರಾಮ ಮಂದಿರಕ್ಕೆ ಹೋಗಬೇಕೋ ಅಥವಾ ಬೇಡವೋ ಎಂಬ ಗೊಂದಲದಲ್ಲಿ ಕಾಂಗ್ರೆಸ್​ನವರು ಇದ್ದಾರೆ ಎಂದು ವಾಗ್ದಾಳಿ ಮಾಡಿದರು.

ರಾಮ ಮಂದಿರಕ್ಕೆ ವಿರೋಧ ಮಾಡಿದ್ದರು. ರಾಮ ಬರೀ ಕಲ್ಪಿತ ವ್ಯಕ್ತಿ ಎಂದು ವಾದ ಮಾಡಿದ್ದರು. ರಾಮಮಂದಿರವನ್ನು ಪ್ರಧಾನಿ ಮೋದಿಯವರು ಉದ್ಘಾಟನೆ ಮಾಡುವುದರ ಬಗ್ಗೆ ಕಾಂಗ್ರೆಸ್​ನವರು ಖ್ಯಾತೆ ತೆಗೆಯುತ್ತಿದ್ದಾರೆ. ಇದನ್ನು ಜನರು ಒಪ್ಪದೆ ಇದ್ದಾಗ ಹಳೆ‌ ಕೇಸ್ ಓಪನ್ ಮಾಡಿಸುತ್ತಿದ್ದಾರೆ. ಈಗ ರಾಮ ಮಂದಿರ ಹಳೆ ಕೇಸ್ ತೆಗೆದು ಅರೆಸ್ಟ್ ಮಾಡಿಸುತ್ತಿದ್ದಾರೆ. ಅರೆಸ್ಟ್ ಮಾಡಿಸುವ ನೀಚ ಕೃತ್ಯಕ್ಕೆ ಕಾಂಗ್ರೆಸ್​ ಕೈ ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಕೊಪ್ಪಳದಲ್ಲಿ ಇಂದು ಪ್ರತಿಕ್ರಿಯೆ ನೀಡಿದ್ದಾರೆ. ಅಪರಾಧಿ ಯಾವಾಗಲೂ ಅಪರಾಧಿನೇ. ಕೋರ್ಟ್ ನಲ್ಲಿ ಖುಲಾಸೆಗೊಳ್ಳುವವರೆಗೂ ಅವರು ಅಪರಾಧಿನೇ. ಸಮಯ ಆದ ತಕ್ಷಣ ಅಪರಾಧ ಹೋಗುವುದಿಲ್ಲ, ಪ್ರಹ್ಲಾದ್ ಜೋಶಿಯವರಿಗೆ ಕಾನೂನು ಗೊತ್ತಿದೆಯೇ ಎಂದು ಕೇಳಿದರು.

ಸಮಯ ಆದ ತಕ್ಷಣ ಕೋರ್ಟ್ ನಿಂದ ಅಪರಾಧ ಹೋಗುವುದಿಲ್ಲ. ಹಳೆ ಕೇಸುಗಳನ್ನು ಚುಪ್ತ ಮಾಡಿ ಎಂದು ಗೃಹ ಸಚಿವರು ಹೇಳಿದ್ದಾರೆ. ಅದಕ್ಕೋಸ್ಕರ ಹಳೆ ಕೇಸಿನಲ್ಲಿರುವವರನ್ನು ಬಂಧಿಸಿದ್ದಾರೆ. ಅಪರಾಧಿಗಳಿಗೆ ಬೆಂಬಲ ನೀಡುತ್ತಿರುವ ಬಿಜೆಪಿಯವರದ್ದು ನೀಚತನ ಕೃತ್ಯ ಎಂದರು.

ಈ ವಿಚಾರ ಬಗ್ಗೆ ಪೊಲೀಸ್ ನವರ ಜೊತೆ ವಿಚಾರ ಮಾಡಬೇಕು. ಪೊಲೀಸರು ಗೃಹ ಸಚಿವರು ಹೇಳಿದಂತೆ ಮಾಡಿದ್ದಾರೆ. ಪ್ರಹ್ಲಾದ್ ಜೋಶಿಯವರು ಕಾನೂನು ತಜ್ಞರೇ, ಅವರೇ ಕೋರ್ಟ, ಪ್ರಹ್ಲಾದ್ ಜೋಶಿಯವರು ಹೇಳಿದ್ದು ವೇದವಾಕ್ಯನೇ, ಪ್ರಹ್ಲಾದ್ ಜೋಶಿಯವರು ರಾಜಕೀಯವಾಗಿ ಮಾತನಾಡುತ್ತಾರೆಯೇ ಹೊರತು ಕಾನೂನು ರೀತಿ ಮಾತನಾಡುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com