ಕೊಪ್ಪಳ: 1992ರ ಕರಸೇವೆ ಗಲಭೆ ಪ್ರಕರಣವೊಂದರಲ್ಲಿ ಪಾಲ್ಗೊಂಡ ಹಿಂದೂ ಕಾರ್ಯಕರ್ತ ಶ್ರೀಕಾಂತ ಪೂಜಾರಿಯನ್ನು ಬಂಧಿಸಿರುವ ಬಗ್ಗೆ ಕೊಪ್ಪಳದಲ್ಲಿ ಇಂದು ಮಂಗಳವಾರ ಸಿಎಂ ಸಿದ್ದರಾಮಯ್ಯ ಮಾಧ್ಯಮ ಪ್ರತಿನಿಧಿಗಳಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ತಪ್ಪು ಮಾಡಿದವರಿಗೆ ಶಿಕ್ಷೆ ನೀಡಲೇಬೇಕು. ಹಳೆ ಕೇಸುಗಳನ್ನು ವಿಲೇವಾರಿ ಮಾಡಿ ಎಂದು ಹೇಳಿದ್ದೇವೆ.ಅದರಲ್ಲಿ ಪೊಲೀಸ್ ನವರು ಕ್ರಮ ತೆಗೆದುಕೊಂಡಿದ್ದಾರಷ್ಟೆ, ನಾವು ಯಾವುದೇ ದ್ವೇಷ ರಾಜಕಾರಣವಾಗಲಿ, ನಿರಪರಾಧಿಗಳನ್ನು ಬಂಧಿಸುವಂತಹ ಕ್ರಮ ತೆಗೆದುಕೊಳ್ಳುವುದಿಲ್ಲ. ಕೋರ್ಟ್ ನಿರ್ದೇಶನ ಪ್ರಕಾರವೇ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಆಹ್ವಾನ ಇದ್ದವರು ಹೋಗಲಿ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೊಳ್ಳುತ್ತಿರುವ ದಿನವಾದ ಜನವರಿ 22ರಂದು ಸರ್ಕಾರಿ ರಜೆ ನೀಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ ಎಂಬ ಮಾತಿಗೆ ಸಿಎಂ, ಕೇಂದ್ರ ಸರ್ಕಾರ ಬೇಕಿದ್ದರೆ ಕೊಡಲಿ, ಅವರು ಸಮಾರಂಭ ಮಾಡುವವರು, ನಮಗೆ ಗೊತ್ತಿಲ್ಲ ಎಂದರು.
ರಾಮಮಂದಿರ ಉದ್ಘಾಟನೆ ಸಮಾರಂಭಕ್ಕೆ ಯಾರಿಗೆ ಆಹ್ವಾನ ಕೊಟ್ಟಿದ್ದಾರೋ, ಬಿಟ್ಟಿದ್ದಾರೋ ಗೊತ್ತಿಲ್ಲ, ಹೋಗುವವರು ಹೋಗಲಿ, ಹೋಗದವರು ಇಲ್ಲ ಅಷ್ಟೆ. ಹೋಗುವುದು ಬಿಡುವುದು ಅವರವರಿಗೆ ಬಿಟ್ಟಿದ್ದು ಎಂದರು.
ಬರ ಪರಿಹಾರ ಮೊತ್ತ ವಿತರಣೆ ಆರಂಭ: ಬರ ಪರಿಹಾರಕ್ಕೆ ಹಣ ನೀಡುವ ಕಾರ್ಯ ಆರಂಭವಾಗಿದೆ. ಮೊದಲನೆ ಹಂತದಲ್ಲಿ 2 ಸಾವಿರ ರೂಪಾಯಿಯವರೆಗೆ ತಾತ್ಕಾಲಿಕ ಪರಿಹಾರ ನೀಡುತ್ತೇವೆ. ಆಧಾರ್ ಲಿಂಕ್ ಆಗದೆ ಪರಿಹಾರ ಮೊತ್ತ ಫಲಾನುಭವಿಗಳಿಗೆ ಸಿಗಲು ಸ್ವಲ್ಪ ವಿಳಂಬ ಆಗಿದೆ ಎಂದರು.
Advertisement