36 ಸರ್ಕಾರಿ ಅಧಿಕಾರಿಗಳಿಗೆ ವಂಚಿಸಿದ ನಕಲಿ ಲೋಕಾಯುಕ್ತ ಇನ್ಸ್ ಪೆಕ್ಟರ್ ಬಂಧನ

ಸರ್ಕಾರಿ ಅಧಿಕಾರಿಯೊಬ್ಬರು ನೀಡಿದ ದೂರಿನ ಮೇರೆಗೆ ಕೇಂದ್ರ ಅಪರಾಧ ವಿಭಾಗದ (CCB) ಪೊಲೀಸರು ನಕಲಿ ಲೋಕಾಯುಕ್ತ ಅಧಿಕಾರಿಯನ್ನು ಬಂಧಿಸಿದ್ದಾರೆ. ಆರೋಪಿ ಶ್ರೀನಾಥ್ ರೆಡ್ಡಿ (34ವ) ಆಂಧ್ರಪ್ರದೇಶ ಮೂಲದವನಾಗಿದ್ದು, 2007ರಿಂದ ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದನು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸರ್ಕಾರಿ ಅಧಿಕಾರಿಯೊಬ್ಬರು ನೀಡಿದ ದೂರಿನ ಮೇರೆಗೆ ಕೇಂದ್ರ ಅಪರಾಧ ವಿಭಾಗದ (CCB) ಪೊಲೀಸರು ನಕಲಿ ಲೋಕಾಯುಕ್ತ ಅಧಿಕಾರಿಯನ್ನು ಬಂಧಿಸಿದ್ದಾರೆ. ಆರೋಪಿ ಶ್ರೀನಾಥ್ ರೆಡ್ಡಿ (34ವ) ಆಂಧ್ರಪ್ರದೇಶ ಮೂಲದವನಾಗಿದ್ದು, 2007ರಿಂದ ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದನು. ಈ ಹಿಂದೆ ಬೀಗ ಹಾಕಿರುವ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. 

ಈತ ಕೆಲವು ತೆಲುಗು ಚಲನಚಿತ್ರಗಳನ್ನು ನೋಡಿ ಸ್ಫೂರ್ತಿ ಪಡೆದು ಕ್ರಿಮಿನಲ್ ಕೃತ್ಯಗಳಲ್ಲಿ, ಅಪರಾಧಗಳಲ್ಲಿ ತೊಡಗುತ್ತಿದ್ದ. ನಂತರ ಸರ್ಕಾರಿ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ತನ್ನ ಕುಕೃತ್ಯ ಮುಂದುವರಿಸಿದ್ದ. 10ನೇ ತರಗತಿವರೆಗೆ ವ್ಯಾಸಂಗ ಮಾಡಿರುವ ಆರೋಪಿ 36 ಸರ್ಕಾರಿ ಅಧಿಕಾರಿಗಳಿಗೆ ವಂಚನೆ ಮಾಡಿದ್ದು, ಇದುವರೆಗೆ ಒಬ್ಬರು ಮಾತ್ರ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿ ಶ್ರೀನಾಥ್ ರೆಡ್ಡಿ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲೂ ಸರ್ಕಾರಿ ಅಧಿಕಾರಿಗಳಿಗೆ ವಂಚಿಸಿದ್ದಾನೆ ಎನ್ನಲಾಗಿದೆ. ಈತನ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿದೆ.

ಲೋಕಾಯುಕ್ತ ಇನ್ಸ್ ಪೆಕ್ಟರ್ ಚಂದ್ರಶೇಖರ್ ಎಂದು ಹೇಳಿಕೊಂಡು ರೆಡ್ಡಿ ಸರ್ಕಾರಿ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಹಣ ವಸೂಲಿ ಮಾಡುತ್ತಿದ್ದ. ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿದ್ದ. ಅವರ ಪ್ರಕರಣಗಳನ್ನು ಮುಚ್ಚಲು ಹಣ ನೀಡುವಂತೆ ಧಮಕಿ ಹಾಕುತ್ತಿದ್ದ. ಅವರು ಕಾಡಿಬೇಡಿದ ನಂತರ ಲೋಕಾಯುಕ್ತದ ತಾಂತ್ರಿಕ ವಿಭಾಗ ಯಾವುದೇ ವಿಚಾರಣೆ ನಡೆಸದೆ ಬಿ ರಿಪೋರ್ಟ್ ಸಲ್ಲಿಸಲಿದೆ ಎಂದು ಭರವಸೆ ನೀಡುತ್ತಿದ್ದ. ಹೀಗೆ ಶ್ರೀನಾಥ್ ರೆಡ್ಡಿಯಿಂದ ಕರೆ ಸ್ವೀಕರಿಸುತ್ತಿದ್ದ ಸರ್ಕಾರಿ ಅಧಿಕಾರಿ ರಾಮದಾಸ್ ದೂರು ದಾಖಲಿಸಿದ್ದಾರೆ.

ಲೋಕಾಯುಕ್ತದಲ್ಲಿ ಎಡಿಜಿಪಿ ಶ್ರೇಣಿಯ ಅಧಿಕಾರಿ ಎಂದು ಹೇಳಿಕೊಂಡು ರೆಡ್ಡಿ ಕೇಶವ ರಾವ್ ಹೆಸರನ್ನೂ ಬಳಸಿಕೊಂಡಿದ್ದನು. ಈತನ ವಿರುದ್ಧ ಎಲೆಕ್ಟ್ರಾನಿಕ್ ಸಿಟಿ, ಬೇಗೂರು, ಹೆಬ್ಬಗೋಡಿ, ಅತ್ತಿಬೆಲೆ, ಜಿಗಣಿ ಸೇರಿದಂತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಲವು ಪ್ರಕರಣಗಳಿವೆ. ಸಿದ್ದಾಪುರ ಹಾಗೂ ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ಈತ ಸರ್ಕಾರಿ ಅಧಿಕಾರಿಗಳನ್ನು ವಂಚಿಸಿದ್ದಾನೆ ಎನ್ನಲಾಗಿದೆ.

ಬಂಧನದ ನಂತರ ರೆಡ್ಡಿ ಅವರು ತನಿಖಾಧಿಕಾರಿಗಳಿಗೆ ಕರ್ನಾಟಕದಲ್ಲಿ 36 ಅಧಿಕಾರಿಗಳಿಗೆ ವಂಚಿಸಿದ್ದಾನೆ ಎಂದು ತಿಳಿದುಬಂದಿದೆ. ಸಂತ್ರಸ್ತರಿಂದ ಆತ ಸಂಗ್ರಹಿಸಿದ ಒಟ್ಟು ಮೊತ್ತವನ್ನು ಪೊಲೀಸರು ಇನ್ನೂ ಖಚಿತಪಡಿಸಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com