15 ಹುದ್ದೆಗಳಿಗೆ 25 ಸಾವಿರ ಆಕಾಂಕ್ಷಿಗಳು: ಕಲ್ಯಾಣ ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗಗಳಿಗಾಗಿ ತಿಕ್ಕಾಟ!

ಕಲ್ಯಾಣ ಕರ್ನಾಟಕ ಭಾಗದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ 15 ಸೂಪರಿಂಟೆಂಡೆಂಟ್ ಹುದ್ದೆಗಳಿಗೆ ಜನವರಿ 6 ಮತ್ತು 7 ರಂದು 25,000 ಕ್ಕೂ ಹೆಚ್ಚು ಆಕಾಂಕ್ಷಿಗಳು ಪರೀಕ್ಷೆ ಬರೆಯಲಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ 15 ಸೂಪರಿಂಟೆಂಡೆಂಟ್ ಹುದ್ದೆಗಳಿಗೆ ಜನವರಿ 6 ಮತ್ತು 7 ರಂದು 25,000 ಕ್ಕೂ ಹೆಚ್ಚು ಆಕಾಂಕ್ಷಿಗಳು ಪರೀಕ್ಷೆ ಬರೆಯಲಿದ್ದಾರೆ.

ಪ್ರತಿ ವರ್ಷ ಸರ್ಕಾರದಲ್ಲಿ ಖಾಲಿ ಹುದ್ದೆಗಳ ಸಂಖ್ಯೆ ಹೆಚ್ಚುತ್ತಿದ್ದರೂ, ಅವುಗಳನ್ನು ಭರ್ತಿ ಮಾಡಲಾಗುತ್ತಿಲ್ಲ, ಇದರ ಪರಿಣಾಮವಾಗಿ ಸರ್ಕಾರದ ಪ್ರತಿ ಉದ್ಯೋಗ ನೇಮಕಾತಿ ಅಧಿಸೂಚನೆಗೆ ಭಾರಿ ತಿಕ್ಕಾಟ ಉಂಟಾಗಿದೆ.

2.56 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿಯಿದ್ದರೂ, ಪ್ರತಿ ಬಾರಿ ಇಲಾಖೆಯು ಹೆಚ್ಚಿನ ಸಂಖ್ಯೆಯ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಸಿದಾಗ, ಹಣಕಾಸು ಇಲಾಖೆಯು ತನ್ನ ಅನುಮೋದನೆಯನ್ನು ನೀಡಲು ಸಾಧ್ಯವಾಗುತ್ತಿಲ್ಲ ಅಥವಾ ಹಣಕಾಸಿನ ಅಡಚಣೆಯಿಂದಾಗಿ ಕೆಲವು ಹುದ್ದೆಗಳಿಗೆ ಒಪ್ಪಿಗೆ ನೀಡುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

2.56 ಲಕ್ಷ ಖಾಲಿ ಹುದ್ದೆಗಳಲ್ಲಿ 75,000 ಕ್ಕೂ ಹೆಚ್ಚು ಶಿಕ್ಷಣ ಇಲಾಖೆಯಲ್ಲಿ (ಉನ್ನತ ಮತ್ತು ಶಾಲಾ ಶಿಕ್ಷಣ), ಸುಮಾರು 35,000 ಆರೋಗ್ಯ ಇಲಾಖೆಯಲ್ಲಿ ಮತ್ತು 22,000 ಗೃಹ ಇಲಾಖೆಯಲ್ಲಿವೆ. ಇದಲ್ಲದೇ ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಪಶುಸಂಗೋಪನೆ, ಹಣಕಾಸು ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳಲ್ಲಿ ತಲಾ ಸುಮಾರು 10 ಸಾವಿರ ಹುದ್ದೆಗಳು ಖಾಲಿ ಇವೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಮಾತನಾಡಿ, ಗ್ರಾಮ ಪಂಚಾಯಿತಿಗಳಲ್ಲಿ ಬಿಲ್ ಕಲೆಕ್ಟರ್‌ನಂತಹ ಕೆಲವು ಹುದ್ದೆಗಳಿಗೆ ಶೈಕ್ಷಣಿಕ ಅರ್ಹತೆಯಾಗಿ ಪದವಿ ಅಗತ್ಯವಿದ್ದು, ಎಂಜಿನಿಯರ್‌ಗಳು ಮತ್ತು ಎಂಬಿಎ ಪದವೀಧರರೂ ಅರ್ಜಿ ಸಲ್ಲಿಸುತ್ತಿದ್ದಾರೆ. ಕಳೆದ ವರ್ಷ ಜಲಸಂಪನ್ಮೂಲ ಇಲಾಖೆಯಲ್ಲಿ 10 ಚಾಲಕರ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದ್ದು, 1.8 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದರು.

ಜನರು ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಪ್ರವೃತ್ತಿ ಯಾವಾಗಲೂ ಇದೆ, ಆದರೆ ಕೋವಿಡ್ ಸಾಂಕ್ರಾಮಿಕದ ನಂತರ ಹೆಚ್ಚಿನ ಜನರು ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ ಎಂದು  ಹಿರಿಯ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು. “ನಾವು ದೊಡ್ಡ ಹುದ್ದೆಗಳನ್ನು ತುಂಬಲು ಸಾಧ್ಯವಾಗುತ್ತಿಲ್ಲ. ಒಂದು ಇಲಾಖೆಯಲ್ಲಿ 100 ಹುದ್ದೆಗಳು ಖಾಲಿಯಿದ್ದರೆ, ಹಣಕಾಸು ಇಲಾಖೆ ಅನುಮತಿ ನೀಡದ ಕಾರಣ ನಾವು ಕಷ್ಟಪಟ್ಟು 10 ಹುದ್ದೆ ಮಾತ್ರ ಭರ್ತಿ ಮಾಡಲು ಸಾಧ್ಯ ಎಂದಿದ್ದಾರೆ.

ಕೆಲ ದಿನಗಳ ಹಿಂದೆ ಸರ್ಕಾರಿ ಶಾಲಾ ಶಿಕ್ಷಕರಿಗೆ ಸರ್ಕಾರ ಅರ್ಜಿ ಆಹ್ವಾನಿಸಿತ್ತು. "50,000 ಖಾಲಿ ಹುದ್ದೆಗಳಿದ್ದರೂ, ಹಣಕಾಸು ಇಲಾಖೆಯು 15,000 ಕ್ಕೆ ಮಾತ್ರ ಅನುಮತಿ ನೀಡಿತು ಮತ್ತು 1.3 ಲಕ್ಷಕ್ಕೂ ಹೆಚ್ಚು ಜನರು ಪರೀಕ್ಷೆಯನ್ನು ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com