KRS ಅಣೆಕಟ್ಟು ಸುತ್ತಮುತ್ತ 20 ಕಿಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿರ್ಬಂಧ: ಹೈಕೋರ್ಟ್ ಮಹತ್ವದ ಆದೇಶ

ಕೆಆರ್​​​​ಎಸ್ ಅಣೆಕಟ್ಟೆಯ ಸುತ್ತಮುತ್ತ ಗಣಿಗಾರಿಕೆಗೆ ನಿರ್ಬಂಧ ಹೇರಿ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಕೃಷ್ಣರಾಜಸಾಗರ ಅಣೆಕಟ್ಟೆಯ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ನಿರ್ಬಂಧ ಹೇರಲಾಗಿದೆ
ಕೆಆರ್ ಎಸ್ ಜಲಾಶಯ
ಕೆಆರ್ ಎಸ್ ಜಲಾಶಯ

ಬೆಂಗಳೂರು: ಕೆಆರ್​​​​ಎಸ್ ಅಣೆಕಟ್ಟೆಯ ಸುತ್ತಮುತ್ತ ಗಣಿಗಾರಿಕೆಗೆ ನಿರ್ಬಂಧ ಹೇರಿ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಕೃಷ್ಣರಾಜಸಾಗರ ಅಣೆಕಟ್ಟೆಯ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ನಿರ್ಬಂಧ ಹೇರಲಾಗಿದೆ. ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ, ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ಪೀಠ ಆದೇಶ ನೀಡಿದೆ.

ಕೃಷ್ಣರಾಜಸಾಗರ ಡ್ಯಾಮ್ ಈಗಾಗಲೇ ಸಂಕಷ್ಟದಲ್ಲಿದೆ, ಕೆ ಆರ್ ಎಸ್ ಡ್ಯಾಂ ಬಳಿ ಹಲವು ಭಾರಿ ದೊಡ್ಡ ಶಬ್ಬಗಳು ಕೇಳಿ ಬಂದಿದೆ. ಅಣೆಕಟ್ಟಿನ ಬಳಿ ಗಣಿಗಾರಿಕೆ ನಡೆಸಿದರೆ ಅಪಾಯವಾಗುವ ಸಂಭವವಿದೆ ಎಂದು ಹೈಕೋರ್ಟ್ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ.

ಕೃಷ್ಣ ರಾಜ ಸಾಗರ ಅಣೆಕಟ್ಟನ್ನು 1924 ರಲ್ಲಿ ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಿಗೆ ಜೀವ ನೀಡುವ ನದಿಯಾದ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಯಿತು. ಅತ್ಯಂತ ಫಲವತ್ತಾದ ಮೈಸೂರು ಮತ್ತು ಮಂಡ್ಯದಲ್ಲಿ ನೀರಾವರಿಗೆ ಪ್ರಮುಖ ನೀರಿನ ಮೂಲವಾಗಿದೆ.

ಕೆಆರ್‌ಎಸ್‌ ಜಲಾಶಯಕ್ಕೆ ಹಾನಿ ಮಾಡುವುದು ತಡೆಗಟ್ಟಬೇಕಿದೆ. ಇಲ್ಲಿ ಕೆಆರ್‌ಎಸ್‌ ಸುರಕ್ಷತೆ ಮುಖ್ಯವಾಗಿದೆ ಎಂದು ಅಭಿಪ್ರಾಯಪಟ್ಟ ಮುಖ್ಯ ನ್ಯಾಯಮೂರ್ತಿ ಪಿ.ಬಿ ವರಾಳೆ ಮತ್ತು ನ್ಯಾ. ಕೃಷ್ಣ ಎಸ್ ದೀಕ್ಷಿತ್ ಅವರನ್ನು ಒಳಗೊಂಡ ವಿಭಾಗೀಯ ಪೀಠವು, ಸರ್ಕಾರದ ನಿರ್ದೇಶನದಂತೆ ವೈಜ್ಞಾನಿಕ ಸಮೀಕ್ಷೆಗೆ ಆದೇಶಿಸಲಾಗಿದೆ. ಹೀಗಾಗಿ, ಅಲ್ಲಿಯವರೆಗೆ ಗಣಿಗಾರಿಕೆಗೆ ಅನುಮತಿಸುವುದಿಲ್ಲ ಎಂದು ಹೇಳಿತು. ಈ ನಿಷೇಧವು ಅಸ್ತಿತ್ವದಲ್ಲಿರುವ ಗಣಿಗಾರಿಕೆ ಪರವಾನಗಿಗಳ ಮೇಲೂ ಅನ್ವಯಿಸುತ್ತದೆ. ಅಣೆಕಟ್ಟು ಸುರಕ್ಷತಾ ಕಾಯ್ದೆ, 2021 ರ ಅಸ್ತಿತ್ವ ಮತ್ತು ಅದರ ಅಡಿಯಲ್ಲಿ ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳನ್ನು ನ್ಯಾಯಾಲಯದ ಗಮನಕ್ಕೆ ತರದ ಕಾರಣ ಹಿಂದಿನ ಸುತ್ತಿನ ವ್ಯಾಜ್ಯದಲ್ಲಿ 20 ಕಿಮೀ ವ್ಯಾಪ್ತಿಯೊಳಗೆ ಗಣಿಗಾರಿಕೆಗೆ ಅನುಮತಿ ನೀಡಲಾಗಿತ್ತು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಕೆಆರ್​​​​ಎಸ್ ಡ್ಯಾಂ ನಿರ್ಮಾಣಕ್ಕೆ ಜನರು ರಕ್ತ, ಬೆವರು ಹರಿಸಿದ್ದಾರೆ. ತೀ.ತಾ. ಶರ್ಮರ ಸರ್.ಎಂ. ವಿಶ್ವೇಶ್ವರಯ್ಯ ಕುರಿತ ಪುಸ್ತಕದಲ್ಲಿ ಈ ಬಗ್ಗೆ ಉಲ್ಲೇಖವಿದೆ. ಕೆಆರ್​​​​ಎಸ್​ಗೆ ಧಕ್ಕೆಯಾಗುವ ಯಾವುದೇ ಚಟುವಟಿಕೆಗೆ ಅವಕಾಶವಿಲ್ಲ. ಮೂರು ರಾಜ್ಯಗಳು ಕಾವೇರಿ ನೀರಿಗಾಗಿ ಹೋರಾಡುತ್ತಿವೆ. ಆದರೆ ಕೆಆರ್​​​​ಎಸ್ ಅಣೆಕಟ್ಟೆ ಸಂರಕ್ಷಣೆಗೆ ಪ್ರಯತ್ನಿಸುತ್ತಿಲ್ಲ. ಅಣೆಕಟ್ಟೆಗೆ ತೊಂದರೆಯಾದರೆ ಆಗುವ ಅನಾಹುತಗಳ ಅರಿವಿದೆಯೇ? ಅಣೆಕಟ್ಟೆಗೆ ತೊಂದರೆಯಾದರೆ ಇಡೀ ರಾಜ್ಯಕ್ಕೇ ಗಂಭೀರ ಆಪತ್ತು ಬರಲಿದೆ. ಹೀಗಾಗಿ ಕೆಆರ್​​​​ಎಸ್ ಅಣೆಕಟ್ಟೆ ಬಳಿ ಗಣಿಗಾರಿಕೆಗೆ ನಿರ್ಬಂಧ ವಿಧಿಸಲಾಗಿದೆ ಎಂದು ನ್ಯಾಯಪೀಠ ಹೇಳಿದೆ.

ಕೆ.ಆರ್.ಎಸ್ ಸುತ್ತಮುತ್ತ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧ ಮಾಡಿ ಹೊರಡಿಸಿರುವ ಹೈಕೋರ್ಟ್ ಮುಖ್ಯ ವಿಭಾಗೀಯ ಪೀಠದ ಆದೇಶ ಅತ್ಯಂತ ಸೂಕ್ತವಾಗಿದೆ. ಇಂಥದ್ದೊಂದು ಮಹತ್ವದ ಆದೇಶವನ್ನು ನೀಡಿರುವ ಹೈಕೋರ್ಟಿನ ನ್ಯಾಯಮೂರ್ತಿಗಳಾದ ಮಾನ್ಯ ಶ್ರೀ ಪಿ.ಬಿ. ವರಾಳೆ ಹಾಗೂ ಶ್ರೀ ಕೃಷ್ಣ.ಎಸ್. ದೀಕ್ಷಿತ್ ಅವರಿಗೆ ಧನ್ಯವಾದಗಳನ್ನು ಅರ್ಪಿಸುವೆ ಎಂದು ಸುಮಲತಾ ಪ್ರತಿಕ್ರಿಯಿಸಿದ್ದಾರೆ. ಕೆ.ಆರ್.ಎಸ್ ಸುತ್ತಮುತ್ತ ಗಣಿಗಾರಿಕೆ ನಿಷೇಧಿಸಬೇಕು ಎನ್ನುವ ನನ್ನ ಬಹುದಿನದ ಹೋರಾಟಕ್ಕೆ ಈ ಆದೇಶ ಮತ್ತಷ್ಟು ಬಲ ತಂದಿದೆ. ನಾವೆಲ್ಲರೂ ಕೆ.ಆರ್.ಎಸ್ ಅನ್ನು ಉಳಿಸಿಕೊಳ್ಳಬೇಕಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com