ಯಶ್ ಹುಟ್ಟುಹಬ್ಬ: ಕಟೌಟ್ ಕಟ್ಟುವಾಗ ವಿದ್ಯುತ್ ಪ್ರವಹಿಸಿ ಮೂವರು ಅಭಿಮಾನಿಗಳ ಸಾವು

ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಅಂಗವಾಗಿ ಲೋಹದ ಕಟೌಟ್ ಹಾಕುವಾಗ ವಿದ್ಯುತ್ ವೈರ್ ತಗುಲಿ ಮೂವರು ಯುವಕರು ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಭಾನುವಾರ  ತಡರಾತ್ರಿ ನಡೆದಿದೆ.
ಯಶ್  ಬ್ಯಾನರ್ ಕಟ್ಟುತ್ತಿರುವ ಚಿತ್ರ
ಯಶ್ ಬ್ಯಾನರ್ ಕಟ್ಟುತ್ತಿರುವ ಚಿತ್ರ
Updated on

ಗದಗ: ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಅಂಗವಾಗಿ ಲೋಹದ ಕಟೌಟ್ ಹಾಕುವಾಗ ವಿದ್ಯುತ್ ವೈರ್ ತಗುಲಿ ಮೂವರು ಯುವಕರು ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಭಾನುವಾರ  ತಡರಾತ್ರಿ ನಡೆದಿದೆ.

ಮೃತರನ್ನು ಸೂರಣಗಿ ಗ್ರಾಮದ ಹನುಮಂತ ಹರಿಜನ (21), ಮುರಳಿ ನಡುವಿನಮನಿ (20) ಮತ್ತು ನವೀನ್ ಗಾಜಿ (19) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ಇತರ ಮೂವರಾದ ಮಂಜುನಾಥ್ ಹರಿಜನ, ಪ್ರಕಾಶ್ ಮ್ಯಾಗೇರಿ ಮತ್ತು ದೀಪಕ್ ಹರಿಜನ ಲಕ್ಷ್ಮೇಶ್ವರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಸ್ಯಾಂಡಲ್‌ವುಡ್ ನಟ ಯಶ್ ಅವರ ಜನ್ಮದಿನ ಆಚರಿಸಲು ಯೋಜಿಸಿದ್ದ ಗ್ರಾಮದ ಒಟ್ಟು 10 ಯುವಕರು, ಸುಮಾರು 25 ಅಡಿ ದೊಡ್ಡ ಲೋಹದ ಕಟೌಟ್ ನಿಲ್ಲಿಸುತ್ತಿದ್ದರು. ಕೆಲ ಯುವಕರು ಲೋಹದ ಕಟೌಟ್ ಎತ್ತಿದಾಗ ವಿದ್ಯುತ್ ತಂತಿ ತಗುಲಿದೆ. ಇದರಿಂದಾಗಿ ವಿದ್ಯುತ್ ಪ್ರವಹಿಸಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಸ್ಥಳದಲ್ಲಿದ್ದ ಉಳಿದ ಯುವಕರು ಮೂವರನ್ನು ಪ್ರಾಣಾಪಾಯದಿಂದ ರಕ್ಷಿಸಲು ತೀವ್ರ ಕಸರತ್ತು ನಡೆಸಿದ್ದಾರೆ. 

ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಗಾಯಗೊಂಡಿದ್ದ ಯುವಕರನ್ನು ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಲಕ್ಷ್ಮೇಶ್ವರ ಪಟ್ಟಣದ ತಾಲೂಕು ಆಸ್ಪತ್ರೆಗೆ ಸ್ಥಳಾಂತರಿಸಲು ನೆರವಾದರು. ಸೂರಣಗಿ ಲಕ್ಷ್ಮೇಶ್ವರ ಪಟ್ಟಣದಿಂದ 13 ಕಿ.ಮೀ ದೂರದಲ್ಲಿದ್ದು, ವಾಹನದಿಂದ ಗಾಯಾಳುಗಳನ್ನು ತಾಲೂಕು ಆಸ್ಪತ್ರೆಗೆ ಸ್ಥಳಾಂತರಿಸಿದರು.

ಸೋಮವಾರ ಬೆಳಗ್ಗೆ 10-30ರಲ್ಲಿ ಸೂರಣಗಿ ಗ್ರಾಮಕ್ಕೆ ಮೂವರು ಯುವಕರ ಮೃತದೇಹಗಳನ್ನು ತಂದು  ಅಂತ್ಯಕ್ರಿಯೆ ನೆರವೇರಿಸಿದರು. ಗ್ರಾಮದ ಇತರೆ ಮಕ್ಕಳು, ಮಹಿಳೆಯರು ಭಯಭೀತರಾಗಿದ್ದ ಕಾರಣ ಹಿರಿಯರು ಸೇರಿ ಬೇಗನೆ ಶವಸಂಸ್ಕಾರ ಮಾಡಲು ತೀರ್ಮಾನಿಸಿದರು.

ಈ ಮಧ್ಯೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್, ಮೃತರ ಕುಟುಂಬಕ್ಕೆ ಪರಿಹಾರ ನೀಡುವ ಕುರಿತು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡುವುದಾಗಿ ತಿಳಿಸಿದರು. ಸೂರಣಗಿ ಗ್ರಾಮಕ್ಕೆ ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ ಭೇಟಿ ನೀಡಿ ಮೃತರ ಕುಟುಂಬಕ್ಕೆ ಪರಿಹಾರ ನೀಡುವ ಕುರಿತು ಭರವಸೆ ನೀಡಿದರು.

ಗಾಯಗೊಂಡಿರುವ ಮೂವರೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಇಬ್ಬರು ಬಹುತೇಕ ಚೇತರಿಸಿಕೊಂಡಿದ್ದಾರೆ ಎಂದು ಲಕ್ಷ್ಮೇಶ್ವರ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಸೂರಣಗಿ ಗ್ರಾಮಸ್ಥ ಸುರೇಶ ಶಿರಸಂಗಿ ಮಾತನಾಡಿ, ‘ಹಿಂದೆ ಬೇರೆ ಬೇರೆ ಪ್ರದೇಶಗಳಲ್ಲಿ ಕಟೌಟ್‌ ಹಾಕುತ್ತಿದ್ದರು ಆದರೆ ಕೆಲ ಯುವಕರು ಕಟೌಟ್‌ ಜಾಗ ಬದಲಿಸಲು ಮುಂದಾಗಿದ್ದು, ಲೋಹದ  ಕಟೌಟ್‌ ಹಾಕಲು ಯತ್ನಿಸಿದಾಗ ವಿದ್ಯುತ್ ಅವಘಡ ನಡೆದಿದೆ. ವಿದ್ಯುತ್ ಸ್ಪರ್ಶದಿಂದ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಮತ್ತು ಮತ್ತೋರ್ವ ಕೆಲವು ಸೆಕೆಂಡುಗಳ ಕಾಲ ನರಳಾಡಿದನು. ಈ ಘಟನೆಯನ್ನು ನೋಡಿದ ಇತರ ಯುವಕರು ಕಿರುಚಲು ಪ್ರಾರಂಭಿಸಿದ್ದಾಗಿ ತಿಳಿಸಿದರು.

ಏನಾಯಿತು ಎಂದು ನೋಡಲು ಹೊರಗೆ ಬಂದ ಗ್ರಾಮಸ್ಥರು, ಮೂವರು ಯುವಕರು ನೋವಿನಿಂದ ಚೀರಾಡುತ್ತಿರುವುದನ್ನು ಕಂಡು ವಾಹನ ಮೂಲಕ ಲಕ್ಷ್ಮೇಶ್ವರ ಪಟ್ಟಣಕ್ಕೆ ಸ್ಥಳಾಂತರಿಸಿದರು. ಬ್ಯಾನರ್ ಹಾಕುವ ಮೊದಲು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದರು. ಆದರೂ, ಯಶ್ ಹುಟ್ಟಹಬ್ಬದ ಸಂಭ್ರಮದಲ್ಲಿದ್ದ ಯುವಕರು ಆ ಮಾತಿಗೆ ನಿರ್ಲಕ್ಷ್ಯ ವಹಿಸಿದ್ದರು. ಕೇವಲ ಒಂದು ನಿಮಿಷದಲ್ಲಿ ವಿದ್ಯುತ್ ಸ್ಪರ್ಶಿಸಿ ನೋಡ ನೋಡುತ್ತಿದ್ದಂತೆ ಮೂವರು ಸ್ಥಳದಲ್ಲಿಯೇ ಅಸುನೀಗಿದರು ಎಂದು ಘಟನೆ ಕುರಿತು ವಿವರಿಸಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com