
ಗದಗ: ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಸಲುವಾಗಿ 20 ಅಡಿ ಎತ್ತರದಲ್ಲಿ ಬ್ಯಾನರ್ ಕಟ್ಟಲು ಹೋಗಿ ವಿದ್ಯುತ್ ತಂತಿಯಿಂದ ವಿದ್ಯುತ್ ಪ್ರವಹಿಸಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಸೂರಣಗಿ ಗ್ರಾಮದ ಮೂವರು ಯುವಕರು ದಾರುಣವಾಗಿ ಮೃತಪಟ್ಟು ಅವರ ಕುಟುಂಬದವರಿಗೆ ನಟ ಯಶ್ ಸಾಂತ್ವನ ಹೇಳಲು ಹೋಗಿದ್ದ ಸಮಯದಲ್ಲಿ ಮತ್ತೊಂದು ಘೋರ ದುರಂತ ನಡೆಯಿತು.
ಚಿತ್ರನಟ ಯಶ್ ಸೂರಣಗಿಗೆ ಭೇಟಿ ನೀಡಿ ವಾಪಸ್ಸು ಹುಬ್ಬಳ್ಳಿಗೆ ಹೋಗುವಾಗ ನಿಖಿಲ್ ಎಂಬ ಯುವಕ ಓಡಿಸುತ್ತಿದ್ದ ಬೈಕ್ ಗೆ ನಟನ ಬೈಕ್ ಬೆಂಗಾವಲು ಪಡೆ ವಾಹನಕ್ಕೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆ ಎಂಬ ವದಂತಿ ಹಬ್ಬಿತ್ತು. ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಗದಗ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಬಿಎಸ್ ನೇಮಗೌಡರ್ ಸ್ಪಷ್ಟನೆ ನೀಡಿದ್ದಾರೆ.
ಯಶ್ ಬೆಂಗಾವಲು ಪಡೆಯ ಭಾಗವಾಗಿದ್ದ ಯಾವುದೇ ವಾಹನ ನಿಖಿಲ್ ಅಪಘಾತಕ್ಕೆ ಕಾರಣವಲ್ಲ, ಯಶ್ ಅವರು ಬಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಗಾಯಾಳುಗಳನ್ನು ಭೇಟಿ ಮಾಡಿ ಅವರ ಯೋಗಕ್ಷೇಮ ವಿಚಾರಿಸಿ ಹೋದ ಮೇಲೆ ನಮ್ಮ ಇನ್ನೊಂದು ಕರ್ತವ್ಯಕ್ಕೆ ಹೋಗುತ್ತಿದ್ದ ವಾಹನಕ್ಕೆ ನಿಖಿಲ್ ಓಡಿಸುತ್ತಿದ್ದ ಬೈಕ್ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಬೈಕ್ ಮತ್ತು ಪೊಲೀಸ್ ಜೀಪೊಂದರ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಈ ಜೀಪು ಬೆಂಗಾವಲು ಪಡೆಯಲ್ಲಿರಲಿಲ್ಲ, ಯಶ್ ಅವರು ಬಂದಾಗ ಡ್ಯೂಟಿಯಲ್ಲಿರಲಿಲ್ಲ. ಬೇರೆ ಕೆಲಸದ ನಿಮಿತ್ತ ತೆರಳಿದ್ದ ಜೀಪು ಹೆಡ್ ಕ್ವಾರ್ಟರ್ ಗೆ ಮರಳುವಾಗ ಅಪಘಾತ ಸಂಭವಿಸಿದೆ ಎಂದು ಹೇಳಿದರು.
ಯಶ್ ಇದ್ದ ಕಾರನ್ನು ನಿಖಿಲ್ ಹಿಂಬಾಲಿಸಿಕೊಂಡು ಹೋಗುವಾಗ ದುರಂತ ಸಂಭವಿಸಿತು ಎಂಬ ವದಂತಿಗೆ ಸಹ ಸ್ಪಷ್ಟನೆ ನೀಡಿದ ಎಸ್ ಪಿ ನೇಮಗೌಡ್, ಯಶ್ ಕಾರಿನ ಹಿಂದೆ ಪೊಲೀಸ್ ವಾಹನಗಳಿದ್ದ ಕಾರಣ ಯಾರೂ ಚೇಸ್ ಮಾಡಲು ಸಾಧ್ಯವಿರಲಿಲ್ಲ, ಅವರು ವಾಪಸ್ಸು ಹೋದ ಎಷ್ಟೋ ಹೊತ್ತಿನ ನಂತರ ಅಪಘಾತ ಸಂಭವಿಸಿದೆ ಎಂದು ತಿಳಿಸಿದರು.
Advertisement