
ಬೆಂಗಳೂರು: ಅಯೋಧ್ಯೆಯಲ್ಲಿ ರಾಮ ದೇವಾಲಯದ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಗೈರು ಹಾಜರಾಗುತ್ತಿರುವುದರಲ್ಲಿ ಅಚ್ಚರಿಯೇನಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.
ಕಾಂಗ್ರೆಸ್ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ಆರಂಭದಿಂದಲೂ ಕಾಂಗ್ರೆಸ್ ರಾಮ ಮಂದಿರದ ವಿರುದ್ಧವಿತ್ತು ಎಂದು ಆರೋಪಿಸಿದ್ದಾರೆ.
ರಾಮಮಂದಿರ ಉದ್ಘಾಟನೆಯ ವಿಷಯವನ್ನು ಕಾಂಗ್ರೆಸ್ ಹಾಗೂ ಆರ್ ಎಸ್ಎಸ್ ರಾಜಕೀಯ, ಚುನಾವಣೆಯ ಲಾಭಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಮಂದಿರ ಉದ್ಘಾಟನೆ ಆಹ್ವಾನವನ್ನು ತಿರಸ್ಕರಿಸಿದೆ.
1992 ರಲ್ಲಿ ಬಾಬ್ರಿ ಮಸೀದಿ ಧ್ವಂಸಗೊಂಡಾಗ ಮರುದಿನವೇ ಬಿಜೆಪಿ ಆಡಳಿತವಿದ್ದ ರಾಜ್ಯ ಸರ್ಕಾರಗಳನ್ನು ಕಾಂಗ್ರೆಸ್ ಸರ್ಕಾರ ವಜಾಗೊಳಿಸಿತ್ತು. ಪ್ರತಿ ಬಾರಿಯೂ ಕಾಂಗ್ರೆಸ್ ಪಕ್ಷ ರಾಮ ಜನ್ಮಭೂಮಿ ಚಳುವಳಿಯ ವಿರುದ್ಧವೇ ಇದೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಭಗವಾನ್ ರಾಮಚಂದ್ರನನ್ನು ಕಾಂಗ್ರೆಸ್ ಎಂದಿಗೂ ನಂಬುವುದಿಲ್ಲ ಎಂದು ಆರೋಪಿಸಿದ ವಿಜಯೇಂದ್ರ, ಜನವರಿ 22 ರಂದು ಕರ್ನಾಟಕ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಅಧೀನದಲ್ಲಿರುವ ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಹಿಂಪಡೆಯುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೇಂದ್ರದಲ್ಲಿ ತಾವು ಅಧಿಕಾರಕ್ಕೆ ಬರುವುದಿಲ್ಲ ಎಂಬುದನ್ನು ಮನಗಂಡಿರುವ ಕಾಂಗ್ರೆಸ್ ಮತ್ತು INDIA ಬಣ ಸಂಪೂರ್ಣ ಅಸಮಾಧಾನಗೊಂಡಿವೆ ಎಂದು ವಿಜಯೇಂದ್ರ ಹೇಳಿದ್ದಾರೆ.
"ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಸತತ ಮೂರನೇ ಅವಧಿಗೆ ಮತ್ತೆ ಅಧಿಕಾರಕ್ಕೆ ಬರುವ ಮೂಲಕ ಇತಿಹಾಸವನ್ನು ಸೃಷ್ಟಿಸಲಿದ್ದಾರೆ ಎಂಬುದನ್ನು ಅವರು ಅರಿತುಕೊಂಡಿದ್ದಾರೆ" ಎಂದು ಅವರು ಹೇಳಿದರು.
Advertisement