‘ಬಯೋಕಾನ್ ಹೆಬ್ಬಗೋಡಿ’ ಮೆಟ್ರೋ ನಿಲ್ದಾಣದ ಹೆಸರು ಬದಲಾವಣೆ ಇಲ್ಲ: ಬಿಎಂಆರ್‌ಸಿಎಲ್

ಹೆಬ್ಬಗೋಡಿ ನಮ್ಮ ಮೆಟ್ರೋ ಸ್ಟೇಷನ್‌ಗೆ 'ಬಯೋಕಾನ್‌ ಹೆಬ್ಬಗೋಡಿ ಮೆಟ್ರೋ ನಿಲ್ದಾಣ' ಎಂಬ ನಾಮಫಲಕ ಹಾಕುತ್ತಿದ್ದಂತೆ ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ‘ಬಯೋಕಾನ್ ಹೆಬ್ಬಗೋಡಿ’ ಮೆಟ್ರೊ ನಿಲ್ದಾಣವನ್ನು ಹೆಬ್ಬಗೋಡಿ ನಿಲ್ದಾಣ...
ಮೆಟ್ರೋ ರೈಲು ಸಾಂದರ್ಭಿಕ ಚಿತ್ರ
ಮೆಟ್ರೋ ರೈಲು ಸಾಂದರ್ಭಿಕ ಚಿತ್ರ

ಬೆಂಗಳೂರು: ಹೆಬ್ಬಗೋಡಿ ನಮ್ಮ ಮೆಟ್ರೋ ಸ್ಟೇಷನ್‌ಗೆ 'ಬಯೋಕಾನ್‌ ಹೆಬ್ಬಗೋಡಿ ಮೆಟ್ರೋ ನಿಲ್ದಾಣ' ಎಂಬ ನಾಮಫಲಕ ಹಾಕುತ್ತಿದ್ದಂತೆ ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ‘ಬಯೋಕಾನ್ ಹೆಬ್ಬಗೋಡಿ’ ಮೆಟ್ರೊ ನಿಲ್ದಾಣವನ್ನು ಹೆಬ್ಬಗೋಡಿ ನಿಲ್ದಾಣ ಎಂದು ಮರುನಾಮಕರಣ ಮಾಡಬೇಕು ಎಂದು ಹೆಬ್ಬಗೋಡಿನ ನಿವಾಸಿಗಳು ಒತ್ತಾಯಿಸಿದ್ದಾರೆ. ಆದರೆ ‘ಬಯೋಕಾನ್ ಹೆಬ್ಬಗೋಡಿ’ಮೆಟ್ರೋ ನಿಲ್ದಾಣದ ಹೆಸರು ಬದಲಾಯಿಸುವ ಪ್ರಶ್ನೆಯೇ ಇಲ್ಲ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ(ಬಿಎಂಆರ್‌ಸಿಎಲ್) ಬುಧವಾರ ಸ್ಪಷ್ಟಪಡಿಸಿದೆ.

ಬಿಎಂಆರ್‌ಸಿಎಲ್‌ ಸ್ಥಳೀಯರ ಒಪ್ಪಿಗೆ ಪಡೆಯದೆ ಏಕಪಕ್ಷೀಯವಾಗಿ ನಿಲ್ದಾಣಕ್ಕೆ ಬಯೋಕಾನ್ ಹೆಸರಿಡುವ ನಿರ್ಧಾರ ಕೈಗೊಂಡಿದೆ ಎಂದು ಆರೋಪಿಸಿ ಹೆಬ್ಬಗೋಡಿ ನಗರಸಭೆ ಸದಸ್ಯರು ಮಂಗಳವಾರ ಬೃಹತ್‌ ಪ್ರತಿಭಟನೆ ನಡೆಸಿದರು. ನಿಲ್ದಾಣದ ಹೆಸರಿನಿಂದ ಬಯೋಕಾನ್ ತೆಗೆದುಹಾಕುವವರೆಗೂ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಸ್ಥಳೀಯರ ವಿರೋಧದ ಹಿನ್ನೆಲೆಯಲ್ಲಿ ನಿಲ್ದಾಣದ ಹೆಸರು ಬದಲಾಯಿಸುವ ಬಗ್ಗೆ ಪ್ರತಿಕ್ರಿಯಿಸಿದ BMRCL ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್, ಪ್ರದೇಶದ ಹೆಸರಿನ ಜೊತೆಗೆ ಬಯೋಕಾನ್ ಹೆಸರು ಸೇರಿಸಲಾಗಿದೆ. ಇದು BMRCL ನ ‘ಹೆಸರಿಸುವ ಹಕ್ಕು’ ನೀತಿಯ ಅಡಿಯಲ್ಲಿ ಬರುತ್ತದೆ, ಇದನ್ನು ಸರ್ಕಾರವು ಒಪ್ಪಿದೆ ಎಂದು ಹೇಳಿದ್ದಾರೆ.

ಯಾವುದೇ ಸಂಸ್ಥೆಯು ಮೆಟ್ರೋದ ಯಾವುದೇ ನಿಲ್ದಾಣಕ್ಕೆ 65 ಕೋಟಿ ರೂಪಾಯಿ ಪಾವತಿಸುತ್ತದೆಯೋ ಆ ನಿಲ್ದಾಣಕ್ಕೆ 30 ವರ್ಷಗಳವರೆಗೆ ಆ ಸಂಸ್ಥೆಯ ಹೆಸರು ಇಡುವ ಹಕ್ಕನ್ನು ಪಡೆಯುತ್ತದೆ. ಇದು ಮೆಟ್ರೊ ಕಾಮಗಾರಿಗೆ ಖಾಸಗಿ ನಿಧಿಯನ್ನು ಕ್ರೋಢೀಕರಿಸುವ ಮತ್ತು ಸರ್ಕಾರದ ಮೇಲಿನ ಹೊರೆ ತಗ್ಗಿಸುವ ಕ್ರಮವಾಗಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com