ಅಯೋಧ್ಯೆ ರಾಮ ಮಂದಿರ: ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ 'ರಾಮ ಲಲ್ಲಾ' ವಿಗ್ರಹ ಪ್ರತಿಷ್ಠಾಪನೆಗೆ ನಿರ್ಧಾರ- ಟ್ರಸ್ಟ್ ಅಧಿಕೃತ ಘೋಷಣೆ
ಬೆಂಗಳೂರು: ಇಡೀ ದೇಶವೇ ಕುತೂಹಲದಿಂದ ಕಾಯುತ್ತಿರುವ ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾ ಕುರಿತು ಮತ್ತೊಂದು ಸಂತಸದ ಸುದ್ದಿ ಹೊರಬಿದ್ದಿದೆ. ಹೌದು, ಜನವರಿ 22 ರಂದು ನಡೆಯಲಿರುವ ಸಮಾರಂಭದಲ್ಲಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ 'ರಾಮ ಲಲ್ಲಾ' ಮೂರ್ತಿ ಪ್ರತಿಷ್ಠಾಪನೆಗೆ ನಿರ್ಧರಿಸಲಾಗಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಸೋಮವಾರ ಖಚಿತಪಡಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ದೇವಾಲಯ ಟ್ರಸ್ಟ್, ಪ್ರಸಿದ್ಧ ಶಿಲ್ಪಿ ಅರುಣ್ ಯೋಗಿರಾಜ್ ಕೃಷ್ಣಶಿಲೆಯಿಂದ ಕೆತ್ತಿರುವ ವಿಗ್ರಹವನ್ನು ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲಾಗುವುದು ಎಂದು ತಿಳಿಸಿದೆ.
ಅಯೋಧ್ಯೆಯ ಭವ್ಯವಾದ ಶ್ರೀರಾಮ ಮಂದಿರದಲ್ಲಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಗೆ ಆಯ್ಕೆ ಮಾಡಲಾಗಿದ್ದು, ಇದು ರಾಜ್ಯದ ಸಮಸ್ತ ರಾಮಭಕ್ತರ ಹೆಮ್ಮೆ ಹಾಗೂ ಸಂತಸವನ್ನು ಇಮ್ಮಡಿಗೊಳಿಸಿದೆ. ಶಿಲ್ಪಿ ಯೋಗಿರಾಜ್ ಅರುಣ್’ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ 'ರಾಮ ಲಲ್ಲಾ' ವಿಗ್ರಹ ಕೆತ್ತಲು ಆಯ್ಕೆ ಮಾಡಿದ ಮೂವರು ಶಿಲ್ಪಿಗಳಲ್ಲಿ ಅರುಣ್ ಯೋಗಿರಾಜ್ ಒಬ್ಬರು. ಹೆಸರಾಂತ ಶಿಲ್ಪಿಯಾಗಿರುವ ಇವರು ಕೇದಾರನಾಥದಲ್ಲಿರುವ ಆದಿ ಶಂಕರಾಚಾರ್ಯ ಮತ್ತು ಸುಭಾಷ್ ದೆಹಲಿಯ ಇಂಡಿಯಾ ಗೇಟ್ ಬಳಿ ಇಡಲಾಗಿರುವ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಕೆತ್ತಿಸಿದ್ದಾರೆ. ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ರಾಮಮಂದಿರ ಉದ್ಘಾಟನೆಗೆ ಸಜ್ಜಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ