ಅಯೋಧ್ಯೆಯಲ್ಲಿ ಗುಡಿಯೊಂದರಲ್ಲಿ ಎರಡು ಗೊಂಬೆಗಳನ್ನಿಟ್ಟು ರಾಮ ರಾಮ ಎನ್ನುತ್ತಿದ್ದರು, ಭಕ್ತಿಯ ವಾತಾವರಣ ಅಲ್ಲಿರಲಿಲ್ಲ: ಕೆ ಎನ್ ರಾಜಣ್ಣ
ತುಮಕೂರು: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಕಾಂಗ್ರೆಸ್ ನ ಹಲವು ನಾಯಕರು ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಸಹಕಾರ ಸಚಿವ ಕೆಎನ್ ರಾಜಣ್ಣ, ತುಮಕೂರಿನಲ್ಲಿ ನಿನ್ನೆ ನಡೆದ ಹಿಂದುಳಿದ ವರ್ಗಗಳ ಒಕ್ಕೂಟದ ಸಮಾರಂಭದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಕೆಡವಿದ್ದ ನಂತರ ಅಲ್ಲಿಗೆ ಹೋಗಿದ್ದೆ. ಗುಡಿಯೊಂದರಲ್ಲಿ ಎರಡು ಗೊಂಬೆಗಳನ್ನಿಟ್ಟು ರಾಮ ರಾಮ ಎನ್ನುತ್ತಿದ್ದರು. ನಮ್ಮೂರಿನ ದೇವಸ್ಥಾನಗಳಿಗೆ ಹೋದಾಗ ಸಿಗುವ ಭಕ್ತಿಯ ಮತ್ತು ಧನಾತ್ಮಕ ಅನುಭೂತಿ ಅಲ್ಲಿರಲಿಲ್ಲ. ಅಯೋಧ್ಯೆಯ ರಾಮಲಲ್ಲಾನ ಬಗ್ಗೆ ನನಗೆ ಏನೂ ಅನಿಸಲೇ ಇಲ್ಲ ಎಂದು ಹೇಳಿದ್ದಾರೆ.
ನಮ್ಮಲ್ಲಿ ಸಾವಿರಾರು ವರ್ಷಗಳ ಇತಿಹಾಸವಿರುವ ಅನೇಕ ರಾಮ ದೇಗುಲಗಳಿವೆ. ಆದರೆ, ಬಿಜೆಪಿ ಚುನಾವಣೆಗಾಗಿ ದೇಗುಲ ಕಟ್ಟುತ್ತಿದೆ. ಬಿಜೆಪಿ ಜನರನ್ನು ಮೋಸ ಮಾಡುತ್ತಿದೆ ಎಂದು ರಾಜಣ್ಣ ಟೀಕಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಏಕವಚನದಲ್ಲಿ ನಿಂದಿಸಿದ್ದಕ್ಕೆ ತಿರುಗೇಟು ನೀಡಿದ ರಾಜಣ್ಣ, ಚುನಾವಣೆಗೆ ಆರು ತಿಂಗಳಿರುವಾಗ ಬಂದು ಹೀಗೆಲ್ಲ ಹೇಳಿಕೆ ಕೊಡುತ್ತಾನೆ. ನಾಲ್ಕೂವರೆ ವರ್ಷ ಮಲಗಿರುತ್ತಾನೆ. ಅದೆಲ್ಲಿರುತ್ತಾನೋ, ಈಗ ಬಂದು ಹಿಂದುತ್ವ ಹಿಂದುತ್ವ ಎಂದು ಚುನಾವಣೆ ಮುಗಿದ ನಂತರ ಪತ್ತೆ ಇರುವುದಿಲ್ಲ ಎಂದು ಟೀಕಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ