ದಾವೋಸ್: 22 ಸಾವಿರ ಕೋಟಿ ರೂ. ಹೂಡಿಕೆ ಪ್ರಸ್ತಾವನೆಗೆ ರಾಜ್ಯದ ಅಂಕಿತ; ವಿಜಯಪುರದಲ್ಲಿ ಲುಲು ಆಹಾರ‌ ಸಂಸ್ಕರಣಾ ಘಟಕ

ಸ್ವಿಟ್ಜರ್ಲೆಂಡಿನ ಈ ನಗರದಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಸಮಾವೇಶದಲ್ಲಿ ಪಾಲ್ಗೊಂಡಿರುವ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ನೇತೃತ್ವದ ನಿಯೋಗವು ಎರಡನೆಯ ದಿನವಾದ ಮಂಗಳವಾರದಂದು ವಿವಿಧ ಕಂಪನಿಗಳೊಂದಿಗೆ 22 ಸಾವಿರ ಕೋಟಿ ರೂ. ಹೂಡಿಕೆ ಪ್ರಸ್ತಾವನೆಗಳಿಗೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದೆ.
ಸಚಿವ ಎಂಬಿ ಪಾಟೀಲ್ ನಿಯೋಗ
ಸಚಿವ ಎಂಬಿ ಪಾಟೀಲ್ ನಿಯೋಗ
Updated on

ದಾವೋಸ್: ಸ್ವಿಟ್ಜರ್ಲೆಂಡಿನ ಈ ನಗರದಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಸಮಾವೇಶದಲ್ಲಿ ಪಾಲ್ಗೊಂಡಿರುವ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ನೇತೃತ್ವದ ನಿಯೋಗವು ಎರಡನೆಯ ದಿನವಾದ ಮಂಗಳವಾರದಂದು ವಿವಿಧ ಕಂಪನಿಗಳೊಂದಿಗೆ 22 ಸಾವಿರ ಕೋಟಿ ರೂ. ಹೂಡಿಕೆ ಪ್ರಸ್ತಾವನೆಗಳಿಗೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಸಚಿವರು, `ಈ ಯೋಜನೆಗಳಲ್ಲಿ ವೆಬ್ ವರ್ಕ್ಸ್ ಕಂಪನಿಯು ಬೆಂಗಳೂರಿನಲ್ಲಿ ಸ್ಥಾಪಿಸಲಿರುವ 100 ಮೆಗಾವ್ಯಾಟ್ ಸಾಮರ್ಥ್ಯದ, 20 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆಯ ಡೇಟಾ ಸೆಂಟರ್ ಪಾರ್ಕ್ ಯೋಜನೆ ಕೂಡ ಸೇರಿದೆ. ಇದಲ್ಲದೆ ಮೈಕ್ರೋಸಾಫ್ಟ್, ಹಿಟಾಚಿ, ಲುಲು ಗ್ರೂಪ್, ಹ್ಯೂಲೆಟ್ ಪೆಕಾರ್ಡ್ (ಎಚ್.ಪಿ), ಹನಿವೆಲ್, ಐನಾಕ್ಸ್, ವೋಲ್ವೋ, ನೆಸ್ಲೆ, ಕಾಯಿನ್ ಬೇಸ್, ಟಕೇಡಾ ಫಾರ್ಮಾ, ಬಿಎಲ್ ಆಗ್ರೋ ಇತ್ಯಾದಿ ಕಂಪನಿಗಳೊಂದಿಗೆ 2,000 ಕೋಟಿ ರೂ. ಮೌಲ್ಯದ ಹೂಡಿಕೆ ತಿಳಿವಳಿಕೆ ಪತ್ರಗಳಿಗೆ ಸಹಿ ಹಾಕಲಾಗಿದೆ’ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಹೂಡಿಕೆಗೆ ಮುಂದಾಗಿರುವ ಮೈಕ್ರೋಸಾಫ್ಟ್ ಕಂಪನಿಯು ಕೌಶಲ್ಯಾಭಿವೃದ್ಧಿ ಮತ್ತು ಸುಗಮ ಆಡಳಿತ ಉಪಕ್ರಮಗಳ ತರಬೇತಿ ಕೊಡಲಿದೆ. ಹಿಟಾಚಿ ಕಂಪನಿಯು ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಸೇವೆ, ಶಿಕ್ಷಣ ಮತ್ತು ಇ-ಗವರ್ನೆನ್ಸ್ ಕ್ಷೇತ್ರಗಳಲ್ಲಿ ಬಂಡವಾಳ ತೊಡಗಿಸಲಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಲುಲು ಸಮೂಹವು ಹಣ್ಣು ಮತ್ತು ತರಕಾರಿ ಸಂಸ್ಕರಣೆ ಕ್ಷೇತ್ರದಲ್ಲಿ ಹೆಜ್ಜೆ ಗುರುತು ಮೂಡಿಸಲು ಉತ್ಸುಕವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಒಡಂಬಡಿಕೆಗಳು ಕಾರ್ಯರೂಪಕ್ಕೆ ಬರುವ ಮೂಲಕ ರಾಜ್ಯವು ತಂತ್ರಜ್ಞಾನ ಮತ್ತು ಆರ್ಥಿಕ ಅಭಿವೃದ್ಧಿಯ ಹೊಸ ಯುಗವನ್ನು ಕಾಣಲಿದೆ. ಜೊತೆಗೆ, ಮಾರುಕಟ್ಟೆಯಲ್ಲಿ ಇರುವ ಅವಕಾಶಗಳನ್ನು ಅತ್ಯಾಧುನಿಕ ಮೂಲಸೌಲಭ್ಯಗಳ ಮೂಲಕ ಗರಿಷ್ಠ ಮಟ್ಟದಲ್ಲಿ ಸದ್ಬಳಕೆ ಮಾಡಿಕೊಳ್ಳಲು ಇದರಿಂದ ಸಾಧ್ಯವಾಗಲಿದೆ. ಈ ಹೂಡಿಕೆಗಳಿಂದ ಉತ್ತರ ಕರ್ನಾಟಕದ ವಿಜಯಪುರ, ಕಲಬುರಗಿ ಸೇರಿದಂತೆ ಹಲವು ಭಾಗಗಳು ಮುಂಚೂಣಿಗೆ ಬರಲಿದ್ದು, ಈ ಯೋಜನೆಗಳಿಗೆ ಸರಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಅವರು ವಿವರಿಸಿದ್ದಾರೆ.

ಮೈಕ್ರೋಸಾಫ್ಟ್ ಕಂಪನಿಯು ಡಿಜಿಟಲ್ ಉತ್ಪಾದಕತೆ, ಉದ್ಯಮಶೀಲತೆ ಮತ್ತು ಸಂವಹನಕ್ಕೆ ಸಂಬಂಧಿಸಿದಂತೆ ತನ್ನ `ಮೈಕ್ರೋಸಾಫ್ಟ್ ರೈಸ್’ ಡಿಜಿಟಲ್ ಸ್ಕಿಲ್ಲಿಂಗ್ ಸೌಲಭ್ಯದ ಮೂಲಕ 70 ಗಂಟೆಗಳ ವರ್ಚುಯಲ್ ತರಬೇತಿ ಕೊಡಲಿದೆ. ಜೊತೆಗೆ ಅಭ್ಯರ್ಥಿಗಳಿಗೆ ಮೈಕ್ರೋಸಾಫ್ಟ್ ಟ್ರೈನಿಂಗ್ ಪ್ಲಾಟ್ ಫಾರಂ ಮೂಲಕ 150 ಗಂಟೆಗಳ ಹೆಚ್ಚುವರಿ ಕೌಶಲ್ಯಾಭಿವೃದ್ಧಿ ಪಠ್ಯ ಸಾಮಗ್ರಿ ಸಿಗಲಿದೆ. ಇದರಿಂದ ರಾಜ್ಯದ ಯುವಜನರಿಗೆ ಕ್ಲೌಡ್, ಎಐ, ಸೈಬರ್ ಸೆಕ್ಯುರಿಟಿ ಕ್ಷೇತ್ರಗಳಲ್ಲಿ ಅವಕಾಶಗಳು ಸಿಗಲಿವೆ ಎಂದು ಸಚಿವರು ಹೇಳಿದ್ದಾರೆ.

ಹನಿವೆಲ್ ಕಂಪನಿಯು ಐಒಟಿ (ಇಂಟರ್ನೆಟ್ ಆಫ್ ಥಿಂಗ್ಸ್) ಮೂಲಕ ಸಂಚಾರ ನಿರ್ವಹಣೆ, ತ್ಯಾಜ್ಯ ನಿರ್ವಹಣೆ ಮುಂತಾದುವುಗಳನ್ನು ನಿಭಾಯಿಸಲಿದೆ. ಲುಲು ಸಮೂಹವು 300 ಕೋಟಿ ರೂ. ಹೂಡಿಕೆಯೊಂದಿಗೆ ವಿಜಯಪುರ ಜಿಲ್ಲೆಯಲ್ಲಿ ಆಹಾರ ಸಂಸ್ಕರಣೆಯಲ್ಲಿ ತೊಡಗಿಕೊಳ್ಳಲು ಉತ್ಸುಕವಾಗಿದೆ. ಹಾಗೆಯೇ ಟಕೇಡಾ ಫಾರ್ಮಾ, ಬೆಂಗಳೂರಿನಲ್ಲಿ ತನ್ನ ಗ್ಲೋಬಲ್ ಕೆಪಾಸಿಟಿ ಸೆಂಟರ್ ತೆರೆಯಲು ಮುಂದೆ ಬಂದಿದೆ ಎಂದು ಪಾಟೀಲ ತಿಳಿಸಿದ್ದಾರೆ.

ಈ ಶೃಂಗಸಭೆಯಲ್ಲಿ ತಾವು ವೆಬ್ ವರ್ಕ್ಸ್ ಸಂಸ್ಥಾಪಕ ನಿಖಿಲ್ ರತಿ, ಐನಾಕ್ಸ್ ಕಂಪನಿಯ ಸಿದ್ಧಾರ್ಥ ಜೈನ್, ಹನಿವೆಲ್ ಕಂಪನಿಯ ಮುಖ್ಯಸ್ಥ ಅನಂತ್ ಮಹೇಶ್ವರಿ, ಲುಲು ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಯೂಸುಫ್ ಅಲಿ ಮುಂತಾದವರೊಂದಿಗೆ ವಿಸ್ತೃತ ಮಾತುಕತೆ ನಡೆಸಿರುವುದಾಗಿ ಪ್ರಕಟಣೆಯಲ್ಲಿ ಹೇಳಿದ್ದಾರೆ.

ದಾವೋಸ್ ಗೆ ತೆರಳಿರುವ ನಿಯೋಗದಲ್ಲಿ ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್,ಕೆ.ಅತೀಕ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಐಟಿಬಿಟಿ ಕಾರ್ಯದರ್ಶಿ ಏಕ್ ರೂಪ್ ಕೌರ್, ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಡಾ.ಮಹೇಶ್ ಇದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com