ಮೈಸೂರು: ಬಾಲರಾಮನ ಮೂರ್ತಿಗೆ ಶಿಲೆ ಸಿಕ್ಕ ಜಾಗದಲ್ಲಿ ರಾಮಮಂದಿರ; ಜನವರಿ 22ರಂದೇ ಭೂಮಿಪೂಜೆ- ಜಿಟಿಡಿ

ಜನವರಿ 22 ರಂದು ಬೆಳಗ್ಗೆ ಈ ದೇವಸ್ಥಾನದ ಭೂಮಿಪೂಜೆ ನಡೆಯಲಿದೆ ಎಂದು ಶಾಸಕರು ಸ್ಪಷ್ಟಪಡಿಸಿದ್ದಾರೆ. ಶಿಲೆ ಸಿಕ್ಕ  ಸ್ಥಳದ 4 ಗುಂಟೆ ಜಮೀನನ್ನು ಮಂದಿರ ನಿರ್ಮಾಣಕ್ಕೆ ಸಂತೋಷದಿಂದ ಕೊಡುವುದಾಗಿ ಜಮೀನು ಮಾಲೀಕ ರಾಮದಾಸ್ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ಜಿ.ಟಿ ದೇವೇಗೌಡ
ಜಿ.ಟಿ ದೇವೇಗೌಡ

ಮೈಸೂರು: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ‘ಬಾಲರಾಮ’ನ ಮೂರ್ತಿಯನ್ನು ಕೆತ್ತಿರುವ ಕೃಷ್ಣಶಿಲೆಯು ಸಿಕ್ಕ ಜಾಗವಾದ ತಾಲ್ಲೂಕಿನ ಜಯಪುರ ಹೋಬಳಿಯ ಹಾರೋಹಳ್ಳಿಯ ರಾಮದಾಸ್ ಅವರ ಹೊಲದಲ್ಲಿ ಶ್ರೀರಾಮ ಮಂದಿರ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಹೇಳಿದ್ದಾರೆ.

ಜನವರಿ 22 ರಂದು ಬೆಳಗ್ಗೆ ಈ ದೇವಸ್ಥಾನದ ಭೂಮಿಪೂಜೆ ನಡೆಯಲಿದೆ ಎಂದು ಶಾಸಕರು ಸ್ಪಷ್ಟಪಡಿಸಿದ್ದಾರೆ. ಶಿಲೆ ಸಿಕ್ಕ  ಸ್ಥಳದ 4 ಗುಂಟೆ ಜಮೀನನ್ನು ಮಂದಿರ ನಿರ್ಮಾಣಕ್ಕೆ ಸಂತೋಷದಿಂದ ಕೊಡುವುದಾಗಿ ಜಮೀನು ಮಾಲೀಕ ರಾಮದಾಸ್ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ಹಾರೋಹಳ್ಳಿ ಹಾಗೂ ಗುಜ್ಜೇಗೌಡನಪುರ ಗ್ರಾಮಸ್ಥರೊಂದಿಗೆ ಚರ್ಚಿಸಿ ಈ ತೀರ್ಮಾನಕ್ಕೆ ಬರಲಾಗಿದೆ. ಅಯೋಧ್ಯೆಯಲ್ಲಿ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯುವ ದಿನವಾದ ಜ.22ರಂದು ಇಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು. ಅಂದು ಬೆಳಿಗ್ಗೆ 6ರಿಂದಲೇ ಭಜನೆ ಮೊದಲಾದ ಕಾರ್ಯಕ್ರಮ ನಡೆಯಲಿದೆ. ಶ್ರೀರಾಮ ಭಕ್ತರು ಪಾಲ್ಗೊಳ್ಳಬಹುದು’ ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾಹಿತಿ ನೀಡಿದರು.

‘ಶಿಲೆಯು ಆ ಗ್ರಾಮದ ಸ.ನಂ. 196, 197ಕ್ಕೆ ಸೇರಿದ ಜಾಗದಲ್ಲಿ ಸಿಕ್ಕಿದ್ದಾಗಿದೆ. ರಾಮದಾಸ್ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಅವರಿಗೆ ಸೇರಿದ ಜಮೀನು ನನ್ನ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ನಮ್ಮೂರಿನ ಶಿಲೆಯು ಮೂರ್ತಿಯಾಗಿ ವಿಶ್ವಮಾನ್ಯತೆ ಪಡೆದಿರುವುದು ಹೆಮ್ಮೆ ತಂದಿದೆ’ ಎಂದು ತಿಳಿಸಿದರು.

‘ಶ್ರೀರಾಮ ಭಕ್ತರಾದ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಬಂದಿದ್ದಾಗ ಚಾಮುಂಡೇಶ್ವರಿ ದೇಗುಲದಲ್ಲಿ ಅರ್ಧ ತಾಸು ಧ್ಯಾನ ಮಾಡಿದ್ದರು. ಆ ತಾಯಿಯ ಆಶೀರ್ವಾದದಿಂದಲೇ ರಾಮಲಲ್ಲಾ ಮೂರ್ತಿಗೆ ಬೇಕಾದ ಶಿಲೆಯು ಆಕೆಯ ಸನ್ನಿಧಿಯಲ್ಲೆ ಸಿಕ್ಕಿದೆ’ ಎಂದರು.

‘ಶಿಲೆ ದೊರೆತ ಜಾಗವು ಈಗ ಪುಣ್ಯಕ್ಷೇತ್ರವಾಗಿದೆ. ಆದ್ದರಿಂದ ಜನರಿಂದಲೇ ದೇಣಿಗೆ ಸಂಗ್ರಹಿಸಿ ಶ್ರೀರಾಮಮಂದಿರ ಕಟ್ಟಿಸಲಾಗುವುದು. ಪ್ರತಿಷ್ಠಾಪನೆಗೆ ಆಯ್ಕೆಯಾದ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್‌ ಯೋಗಿರಾಜ್‌ ಜ.27ರ ನಂತರ ಮೈಸೂರಿಗೆ ವಾಪಸಾಗಲಿದ್ದಾರೆ ಎಂಬ ಮಾಹಿತಿ ಇದೆ. ಅವರನ್ನು ಸನ್ಮಾನಿಸಿ, ಹಾರೋಹಳ್ಳಿ ಶ್ರೀರಾಮಮಂದಿರಕ್ಕೂ ಮೂರ್ತಿ ಕೆತ್ತಿ ಕೊಡುವಂತೆ ಕೋರಲಿದ್ದೇವೆ’ ಎಂದು ತಿಳಿಸಿದರು.

ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ನಮ್ಮ ಕ್ಷೇತ್ರದ ಗ್ರಾಮದಲ್ಲೇ ಕೃಷ್ಣ ಶಿಲೆ ಸಿಕ್ಕಿದೆ. ಆ ಶಿಲೆಯಿಂದ ಮೂಡಿಬಂದ ಶ್ರೀರಾಮ ಮೂರ್ತಿ ದರ್ಶನ ಪ್ರಪಂಚದಾದ್ಯಂತ ಶಾಶ್ವತವಾಗಿದೆ. ಇಂತಹ ಅವಕಾಶ ನಮ್ಮ ಕ್ಷೇತ್ರಕ್ಕೆ ಲಭಿಸಿದ್ದರಿಂದ ನಾನೂ ಕೂಡ ಸೌಭಾಗ್ಯವಂತ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com