ಫ್ಯಾಸಿಸ್ಟ್ ಶಕ್ತಿಗಳ ಹೆಚ್ಚಳದ ಆತಂಕ: ವಿದ್ಯಾರ್ಥಿಗಳಿಗೆ ಗಾಂಧೀಜಿ ಪ್ರಬಂಧ ಸ್ಪರ್ಧೆ ಆಯೋಜಿಸಲು ಸಿಎಂ ಸಿದ್ದರಾಮಯ್ಯ ಸೂಚನೆ

ಎಲ್ಲಾ ಶಾಲೆಗಳ 6 ನೇ ತರಗತಿ ನಂತರದ ವಿದ್ಯಾರ್ಥಿಗಳಿಗೆ ಗಾಂಧೀಜಿ ವಿಚಾರ ಕುರಿತ ಪ್ರಬಂಧ ಸ್ಪರ್ಧೆ ಆಯೋಜಿಸಲು ಸೂಚಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ದೇಶದಲ್ಲಿ ಫ್ಯಾಸಿಸ್ಟ್ ಶಕ್ತಿಗಳ ಹೆಚ್ಚಳದ ಆತಂಕ ಹಾಗೂ ಮಹಾತ್ಮಾ ಗಾಂಧೀಜಿಯವರು ಪ್ರಸ್ತಾಪಿಸಿದ ಪರಿಹಾರಗಳ ಕುರಿತು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಬೋರ್ಡ್ ಪರೀಕ್ಷೆಗೆ ತಯಾರಿ ನಡೆಸುತ್ತಿರುವ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಕಾಲೇಜಿನ ವಿದ್ಯಾರ್ಥಿಗಳು, ಸ್ನಾತಕೋತ್ತರ ಪದವೀಧರರು ಮತ್ತು ಸಂಶೋಧನಾ ಸಹೋದ್ಯೋಗಿಗಳು ಸೇರಿದಂತೆ 6 ನೇ ತರಗತಿಯಿಂದ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲು ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ.  21ನೇ ಶತಮಾನದ ಕಳವಳಗಳು ಮತ್ತು ಗಾಂಧಿ ಚಿಂತನೆಗಳು ನೀಡಿದ ಪರಿಹಾರಗಳು' ಎಂಬ ವಿಷಯವನ್ನು ಸೂಚಿಸಿದ್ದಾರೆ.

ಈ ಕುರಿತ ಮುಖ್ಯಮಂತ್ರಿ ಪತ್ರದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಹತ್ಯೆಯಾಗಿ ಏಳೂವರೆ ದಶಕಗಳು ಕಳೆದಿವೆ, ಗಾಂಧೀಜಿ ತಮ್ಮ ಜೀವನದುದ್ದಕ್ಕೂ ಶಾಂತಿ, ಅಹಿಂಸೆ, ಸತ್ಯತೆ, ವಿಕೇಂದ್ರೀಕರಣ, ಸಾಮಾಜಿಕ ನ್ಯಾಯ ಮತ್ತು ಇತರ ಮಾನವೀಯ ನಿಲುವುಗಳನ್ನು ಆಚರಿಸಿ ಪ್ರತಿಪಾದಿಸಿದ್ದರು. ದೇಶದ ವೈವಿಧ್ಯತೆ ಮತ್ತು ಎಲ್ಲರನ್ನೂ ಒಳಗೊಂಡು ಬಾಳುವ ಅನಿವಾರ್ಯತೆಯನ್ನು ಪ್ರತಿಪಾದಿಸಿದ್ದರು. ಇಂತಹ ಮಹಾನ್ ವ್ಯಕ್ತಿಯನ್ನು ಕೆಲವು ದುರುಳರು ಪಿತೂರಿ ಮಾಡಿ ಹತ್ಯೆ ಮಾಡಿದರು ಎಂದಿದ್ದಾರೆ. 

"ಮಹಾತ್ಮ ಗಾಂಧಿಯವರ ಹತ್ಯೆಯ ನಂತರವೂ ದೇಶ ನಿರಂತರವಾಗಿ ಅವರ ಆದರ್ಶಗಳನ್ನು ಸಾಧ್ಯವಾದ ಮಟ್ಟಿಗೆ ಅನುಷ್ಠಾನ ಮಾಡಿಕೊಂಡೇ ಬಂದಿದೆ.  ಆದರೆ ಇತ್ತೀಚೆಗೆ, ಹಿಂಸೆ ಮತ್ತು ದ್ವೇಷವನ್ನು ಪ್ರತಿಪಾದಿಸುವ, ವಿಕೇಂದ್ರಿಕರಣವನ್ನು ದಮನಿಸಿ ಕೇಂದ್ರೀಕರಣಕ್ಕೆ ಒತ್ತು ನೀಡುವ ದೀನ ದಲಿತರು, ಮಹಿಳೆಯರು, ಆದಿವಾಸಿಗಳು, ರೈತರು, ಕಾರ್ಮಿಕರು ಮತ್ತು ಯುವಕರ ಹಕ್ಕುಗಳನ್ನು ಕಿತ್ತುಕೊಳ್ಳುವ ಪ್ರವೃತ್ತಿಯುಳ್ಳ ಶಕ್ತಿಗಳು ಕ್ರಿಯಾಶೀಲವಾಗುತ್ತಿವೆ.ಮಹಾತ್ಮ ಗಾಂಧೀಜಿ ವಿರುದ್ಧ 
ಮತ್ತು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸದ ಶಕ್ತಿಗಳು ಪ್ರವರ್ಧಮಾನಕ್ಕೆ ಬರಲು ಯತ್ನಿಸುತ್ತಿವೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. 

ಇಂದು ಜಾಗತಿಕ ಪರಿಸರದ ಬಿಕ್ಕಟ್ಟುಗಳು, ಕೃತಕ ಬುದ್ಧಿಮತ್ತೆ ಮತ್ತು ಹಿಂಸಾ ವಿನೋದಾ ಮುಂತಾದವುಗಳಿಂದಾಗಿ  ಮನುಷ್ಯರು ಈ ಭೂಮಿಯ ಮೇಲಿಂದ ಅಳಿಸಿ ಹೋಗುವ ದುಸ್ಥಿತಿಗೆ ತಲುಪಿಯಾಗಿದೆ ಎಂದು ಸ್ಟಿಫನ್ ಹಾಕಿಂಗ್ ಆತಂಕ  ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ದೊಡ್ಡ ಭಾಷೆಗಳು ಸಣ್ಣ ಸಣ್ಣ ಭಾಷೆಗಳನ್ನು ನುಂಗಿ ಹಾಕುತ್ತಿವೆ. ಯಾವುದೇ ಸಮಾಜ ಅಥವಾ ಸಮುದಾಯ ತನ್ನ ಭಾಷೆಯನ್ನು ಕಳೆದುಕೊಳ್ಳುವುದೆಂದರೆ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ ಎಂಬುದು ಅರ್ಥ ಎಂಬುದು ಈಗಾಗಲೇ ಸಾಬೀತಾದ ವಿಚಾರವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಆದರೆ,  ಗಾಂಧೀಜಿ ಅವರ ಚಿಂತನೆಗಳಲ್ಲಿ ಬಹುತೇಕ ಪರಿಹಾರವಿದೆ. ಈ ಹಿನ್ನೆಲೆಯಲ್ಲಿ 21ನೇ ಶತಮಾನದ ಕಳವಳಗಳು ಮತ್ತು ಗಾಂಧಿ ಚಿಂತನೆಗಳು ನೀಡಿದ ಪರಿಹಾರಗಳು ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದರೆ, ವಿದ್ಯಾರ್ಥಿಗಳಿಗೆ ಗಾಂಧೀಜಿ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲಾ-ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಸ್ಪರ್ಧೆಯನ್ನು ಆಯೋಜಿಸಬಹುದು ಎಂದು ಸಿದ್ದರಾಮಯ್ಯ ಪತ್ರದಲ್ಲಿ ತಿಳಿಸಿದ್ದಾರೆ.

ಸ್ಪರ್ಧೆಗಳಲ್ಲಿ ವಿಜೇತರಿಗೆ ಸೂಕ್ತ ಬಹುಮಾನ ನೀಡಲು ಮತ್ತು ಭಾಗವಹಿಸುವವರಿಗೆ ಪ್ರಮಾಣಪತ್ರ ನೀಡಲು ಕ್ರಮ ವಹಿಸುವುದು, ಈ ನಿಟ್ಟಿನಲ್ಲಿ ಸೂಕ್ತ ಯೋಜನೆ ರೂಪಿಸಿ ಈ ತಿಂಗಳ ಅಂತ್ಯದೊಳಗೆ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ಸಿಎಂ ಕೋರಿದ್ದಾರೆ. ಈ ಬೆಳವಣಿಗೆ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com