ಗಣರಾಜ್ಯೋತ್ಸವ: ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಬಿಗಿ ಪೊಲೀಸ್ ಭದ್ರತೆ; ಸಂಚಾರ ಬದಲಾವಣೆ, ಹಲವೆಡೆ ಪಾರ್ಕಿಂಗ್ ನಿಷೇಧ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 75ನೇ ಗಣರಾಜ್ಯೋತ್ಸವದ ಅದ್ಧೂರಿ ಆಚರಣೆಗಾಗಿ ಮಾಣೆಕ್ಷಾ ಪರೇಡ್ ಮೈದಾನವು ಸಂಪೂರ್ಣವಾಗಿ ಸಿದ್ಧಗೊಂಡಿದೆ, 7,000 ಜನರಿಗೆ ಆಸನ ವ್ಯವಸ್ಥೆ, ಭದ್ರತಾ ಪಾರ್ಕಿಂಗ್  ಸೇರಿದಂತೆ ಹಲವು ವ್ಯವಸ್ಥೆ ಮಾಡಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 75ನೇ ಗಣರಾಜ್ಯೋತ್ಸವದ ಅದ್ಧೂರಿ ಆಚರಣೆಗಾಗಿ ಮಾಣೆಕ್ಷಾ ಪರೇಡ್ ಮೈದಾನವು ಸಂಪೂರ್ಣವಾಗಿ ಸಿದ್ಧಗೊಂಡಿದೆ, 7,000 ಜನರಿಗೆ ಆಸನ ವ್ಯವಸ್ಥೆ, ಭದ್ರತಾ ಪಾರ್ಕಿಂಗ್  ಸೇರಿದಂತೆ ಹಲವು ವ್ಯವಸ್ಥೆ ಮಾಡಲಾಗಿದೆ.

ದೇಶ ಭಕ್ತಿಯ ಪ್ರತೀಕವಾಗಿರುವ ಈ ಸಮಾರಂಭಕ್ಕೆ ಯಾವೆಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂಬುದನ್ನು ಬಿಬಿಎಂಪಿ ಆಯುಕ್ತ ತುಷಾರ್​ ಗಿರಿನಾಥ್​ ಮತ್ತು ಬೆಂಗಳೂರು ನಗರ ಪೊಲೀಸ್​ ಆಯುಕ್ತ ದಯಾನಂದ ಅವರು ಇಂದಿನ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

9 ಡಿಸಿಪಿ, 16 ಎಸಿಪಿ, 46 ಇನ್ಸ್​ಪೆಕ್ಟರ್​ಗಳು ಸೇರಿದಂತೆ 575 ಅಧಿಕಾರಿಗಳು, 1000 ಸಿಬ್ಬಂದಿ ನಿಯೋಜಿಸಿದ್ದೇವೆ. ಜೊತೆಗೆ ಆರ್ಮಡ್ ಫೋರ್ಸ್, ಶ್ವಾನದಳ ಇರಲಿದೆ. ಬ್ಯಾಗೇಜ್ ಸ್ಕ್ಯಾನರ್ ಮತ್ತು 100 ಸಿಸಿಟಿವಿಗಳನ್ನ ಅಳವಡಿಸಲಾಗಿದೆ. ವಾಹನ ಸಂಚಾರದಲ್ಲೂ ಕೆಲ ಬದಲಾವಣೆ ಮಾಡಲಾಗಿದೆ. ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಿದ್ದೇವೆ ಎಂದು ಬೆಂಗಳೂರು ಪೊಲೀಸ್​ ಆಯುಕ್ತ ಬಿ.​ ದಯಾನಂದ್ ಹೇಳಿದರು.

ಮೆರವಣಿಗೆಯಲ್ಲಿ 10 ಶಾಲಾ ತಂಡಗಳು ಸೇರಿದಂತೆ 38 ತುಕಡಿಗಳು ಭಾಗವಹಿಸಲಿವೆ ಮತ್ತು 1,500 ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಬರುವವರು 8.30ರೊಳಗೆ ಹಾಜರಿರಬೇಕು. ಯಾವ ಯಾವ ಗೇಟ್ ನಿಗದಿಯಾಗಿದೆ ಅಲ್ಲಿಂದಲ್ಲೇ ಬರಬೇಕು. ಸಿಗರೇಟ್, ಚಾಕು, ಕಪ್ಪು ಕರವಸ್ತ್ರ, ಪಟಾಕಿ ಸೇರಿ ಹಲವು ವಸ್ತುಗಳಿಗೆ ನಿಷೇಧವಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರವಹಿಸಿದ್ದೇವೆ ಎಂದರು.

ಮೈದಾನದ ಸುತ್ತಮುತ್ತ 100 ಸಿಸಿಟಿವಿಗಳನ್ನು ಅಳವಡಿಸಲಾಗಿದೆ ಮತ್ತು ಮಾಣೆಕ್ಷಾ ಪರೇಡ್ ಮೈದಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತಾ ತಪಾಸಣೆ ನಡೆಸಲಾಗಿದೆ ಎಂದು ದಯಾನಂದ್ ಅವರು ತಿಳಿಸಿದ್ದಾರೆ. ಮೈದಾನದ ಸಮೀಪವಿರುವ ಬಹುಮಹಡಿ ಕಟ್ಟಡಗಳು ಮತ್ತು ಕಾಮಗಾರಿ ಸ್ಥಳಗಳನ್ನು ಪರಿಶೀಲಿಸಲಾಗಿದೆ. ಜತೆಗೆ ನಗರದ ಎಲ್ಲ ಪೊಲೀಸ್ ಠಾಣೆಗಳಿಗೂ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮೈದಾನದ ಸುತ್ತಮುತ್ತ ಯಾವುದೇ ವಾಹನ ನಿಲುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಸಂಚಾರ ಆಯುಕ್ತ ಎ.ಎನ್.ಅನುಚೇತ್ ಅವರು ಮಾಹಿತಿ ನೀಡಿದ್ದು, ಬೆಳಗ್ಗೆ 8:30 ರಿಂದ 10:30 ರವರೆಗೆ ಕಬ್ಬನ್ ರಸ್ತೆಯ ಬಿಆರ್‌ವಿ ಜಂಕ್ಷನ್‌ನಿಂದ ಕಾಮರಾಜ್ ರಸ್ತೆ ಜಂಕ್ಷನ್‌ವರೆಗೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಅವರು ಹೇಳಿದರು.  ಇನ್‌ಫೆಂಟ್ರಿ ರಸ್ತೆಯಿಂದ ಮಣಿಪಾಲ್ ಸೆಂಟರ್ ಕಡೆಗೆ ಬರುವ ವಾಹನಗಳು ಸಫೀನಾ ಪ್ಲಾಜಾದಲ್ಲಿ ಎಡ ತಿರುವು ಪಡೆದು ಅಲೈಸ್ ಸರ್ಕಲ್ ಮತ್ತು ಡಿಸ್ಪೆನ್ಸರಿ ರಸ್ತೆಗೆ ಪ್ರವೇಶಿಸಬೇಕು. ಅದೇ ರೀತಿ ಮಣಿಪಾಲ ಜಂಕ್ಷನ್‌ನಿಂದ ಬಿಆರ್‌ವಿ ಜಂಕ್ಷನ್‌ಗೆ ಬರುವ ವಾಹನಗಳು ವೆಬ್ಸ್ ಜಂಕ್ಷನ್ ಬಳಿ ಬಲ ತಿರುವು ಪಡೆದು ಎಂಜಿ ರಸ್ತೆಯಲ್ಲಿ ಸಾಗಿ ನೇರವಾಗಿ ಮೇಯೊಗೆ ಹೋಗಬೇಕು ಎಂದಿದ್ದಾರೆ.

ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿ ನಗರ ಬಸ್ ನಿಲ್ದಾಣದವರೆಗೆ. ಕಬ್ಬನ್ ರಸ್ತೆ, ಸಿಟಿಒ ವೃತ್ತ, ಕೆಆರ್ ರಸ್ತೆ. ಎಂಜಿ ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ರಸ್ತೆವರೆಗೆ ಪಾರ್ಕಿಂಗ್ ನಿಷೇಧಿಸಲಾಗಿದೆ.

ಹೆಗ್ಗನಹಳ್ಳಿ ಕರ್ನಾಟಕ ಪಬ್ಲಿಕ್ ಸ್ಕೂಲ್ ವತಿಯಿಂದ "ಈ ದೇಶ ನಮಗಾಗಿ ಎಂದೆಂದಿಗೂ" ನಾಟಕ ನಡೆಯಲಿದ್ದು 700 ಮಕ್ಕಳು ಪ್ರದರ್ಶನ ನೀಡಲಿದ್ದಾರೆ. ಎಂಇಜಿ ಬೆಂಗಳೂರು ಮತ್ತು ಕೇಂದ್ರ ತಂಡದ ಹವಾಲ್ದಾರ್ ಅನೀಶ್ ಥಾಮಸ್ ನೇತೃತ್ವದಲ್ಲಿ ಕಳರಿಪಯಟ್ಟು. ಬೆಂಗಳೂರಿನ ಎಎಸ್ ಸಿ ಸೆಂಟರ್ ಮತ್ತು ಕಾಲೇಜು ತಂಡ ಮತ್ತು ಕ್ಯಾಪ್ಟನ್ ಜಿ.ಬಾಸ್ಕೋ ರಾಜಸಿಂಗಂ ಕಾಮರಾಜ್ ನೇತೃತ್ವದಲ್ಲಿ ದ್ವಿಚಕ್ರ ವಾಹನ ಸಾಹಸ ಪ್ರದರ್ಶನ ನಡೆಯಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com