
ಬೆಂಗಳೂರು: ಬನ್ನೇರುಘಟ್ಟ ಉಳಿಸಲು ಪರಿಸರ ಹೋರಾಟಗಾರರು ಸಹಿ ಅಭಿಯಾನ ಆರಂಭಿಸಿದ್ದಾರೆ. ‘ಬನ್ನೇರುಘಟ್ಟ ಉಳಿಸಿ- 6 ಲೇನ್ ಫ್ಲೈಓವರ್ ನಿಲ್ಲಿಸಿ’ ಎಂಬ ಮನವಿಗೆ ಇದುವರೆಗೂ 16,606 ಮಂದಿ ಸಹಿ ಹಾಕಿದ್ದಾರೆ. ಜಟ್ಕಾ ಸಂಸ್ಥೆ ಅರ್ಜಿಯನ್ನು ಆನ್‌ಲೈನ್ ಪೋರ್ಟಲ್‌ನಲ್ಲಿ ಸಲ್ಲಿಸಲಾಗಿದೆ, ಭಾರತದಾದ್ಯಂತ ತಳಮಟ್ಟದ ನಾಗರಿಕ ಶಕ್ತಿಯನ್ನು ನಿರ್ಮಿಸಲು ಬದ್ಧವಾಗಿರುವ ಸಂಸ್ಥೆ ಇದಾಗಿದೆ.
ಬನ್ನೇರುಘಟ್ಟ ಮತ್ತು ಜಿಗಣಿ ರಸ್ತೆಯನ್ನು ಸಂಪರ್ಕಿಸುವ ಪ್ರಸ್ತುತ ರಸ್ತೆಯ 3.85 ಕಿಮೀ ವ್ಯಾಪ್ತಿಯಲ್ಲಿ ಸ್ಯಾಟಲೈಟ್ ಟೌನ್‌ಶಿಪ್ ರಿಂಗ್ ರೋಡ್ (ಎಸ್‌ಟಿಆರ್‌ಆರ್) ಭಾಗವಾಗಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದೊಳಗೆ ಉದ್ದೇಶಿತ 6 ಪಥದ ಮೇಲ್ಸೇತುವೆ ನಿರ್ಮಾಣವನ್ನು ವಿರೋಧಿಸಿ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಗೆ ಕನಿಷ್ಠ 50,000 ಸಹಿ ಪಡೆಯುವ ಗುರಿಯನ್ನು ಹೊಂದಿದೆ.
ಯೋಜನೆಗಾಗಿ ಸುಮಾರು 1,288 ಮರಗಳನ್ನು ಕಡಿಯಬೇಕಾಗಿದೆ. ಹೀಗಾಗಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಗೆ ಗಮನಹರಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನೆಗೆ ಅನುಮತಿ ನೀಡದಂತೆ ತಡೆಹಿಡಿಯಲು ಅರಣ್ಯ ಸಲಹಾ ಸಮಿತಿಯನ್ನು (FAC) ಒತ್ತಾಯಿಸಲು ಕಾರ್ಯಕರ್ತರು ಮನವಿ ಮಾಡಿದ್ದಾರೆ.
ಈ ಯೋಜನೆಯು ರಾಷ್ಟ್ರೀಯ ವನ್ಯಜೀವಿ ಮಂಡಳಿಯಿಂದ (NBWL) ಅನುಮತಿ ಪಡೆದಿದೆ. ಸಂರಕ್ಷಿತ ಅರಣ್ಯ ಪ್ರದೇಶದ 27 ಎಕರೆ 18 ಗುಂಟೆಗಳನ್ನು ಮತ್ತು ಉದ್ಯಾನದ ಬಫರ್ ವಲಯದಲ್ಲಿ 14 ಎಕರೆ ಭೂಮಿ ಈ ಯೋಜನೆಗೆ ಒಳಗೊಳ್ಳುತ್ತದೆ. ಪ್ರಸ್ತಾವಿತ ಮೇಲ್ಸೇತುವೆಯಿಂದ, ಟ್ರಾಫಿಕ್ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಲಾಗಿದೆ,ಆದರೆ ಸೂಕ್ಷ್ಮ ಪರಿಸರ ವ್ಯವಸ್ಥೆಗೆ ಅಪಾಯವನ್ನುಂಟುಮಾಡುತ್ತದೆ ಮತ್ತು ವನ್ಯಜೀವಿಗಳ ನೈಸರ್ಗಿಕ ಆವಾಸಸ್ಥಾನಕ್ಕೆ ಅಡ್ಡಿಪಡಿಸುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ರಾಷ್ಟ್ರೀಯ ಉದ್ಯಾನವನವು ನಿರ್ಣಾಯಕ ಜೀವವೈವಿಧ್ಯದ ಹಾಟ್‌ಸ್ಪಾಟ್ ಆಗಿದೆ, ಏಷ್ಯನ್ ಆನೆಗಳು, ಭಾರತೀಯ ಗೌರ್, ಸಾಂಬಾರ್ ಜಿಂಕೆಗಳಂತಹ ಅಳಿವಿನಂಚಿನಲ್ಲಿರುವ ಜಾತಿಗಳಿಗೆ ನೆಲೆಯಾಗಿದೆ. ಉದ್ದೇಶಿತ ಮೇಲ್ಸೇತುವೆಯನ್ನು ಎಚ್ಚರಿಕೆಯಿಂದ ಯೋಜಿಸಿ ಕಾರ್ಯಗತಗೊಳಿಸಿದರೇ, ಈ ಪರಿಸರ ವ್ಯವಸ್ಥೆಯನ್ನು ಹಾನಿಗೊಳ್ಳದಂತೆ ಮಾಡಬಹುದು, ಇದು ಜೀವವೈವಿಧ್ಯದ ನಷ್ಟ ಮತ್ತು ಪರಿಸರ ಅವನತಿಯನ್ನು ತಪ್ಪಿಸುತ್ತದೆ ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
Advertisement