
ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಅವರ ಸಿಐಡಿ ಪೊಲೀಸ್ ಕಸ್ಟಡಿ ಅವಧಿ ಅಂತ್ಯಗೊಂಡಿದ್ದು, ಬುಧವಾರ ಕೋರ್ಟ್ ಮತ್ತೆ ನ್ಯಾಯಾಂಗ ಬಂಧನ ವಿಧಿಸಿದೆ.
ಸೂರಜ್ ರೇವಣ್ಣ ಅವರ ಪೊಲೀಸ್ ಕಸ್ಟಡಿ ಅವಧಿ ಇಂದು ಕೊನೆಗೊಂಡಿತ್ತು. ಹೀಗಾಗಿ ಪೊಲೀಸರು ಆರೋಪಿಯನ್ನು 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ಕೋರ್ಟ್ ಸೂರಜ್ ರೇವಣ್ಣಗೆ ಜುಲೈ 18ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.
ಅಸಹಜ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಸೂರಜ್ ರೇವಣ್ಣ ವಿರುದ್ಧ ಮತ್ತೊಂದು ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಯನ್ನು ಸಿಐಡಿ ಪೊಲೀಸರು ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆದಿದ್ದರು.
ಕಳೆದ ವಾರ ಸಿಐಡಿ ಸೂರಜ್ ರೇವಣ್ಣ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿತ್ತು ಮತ್ತು ಅವರ ಡಿಎನ್‌ಎ ಮಾದರಿಗಳನ್ನೂ ಸಂಗ್ರಹಿಸಿದೆ.
ಜೂನ್ 23ರಂದು ಬಂಧಿತರಾಗಿದ್ದ ರೇವಣ್ಣ ಅವರನ್ನು ಪುರುಷತ್ವ ಸಾಮರ್ಥ್ಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅಲ್ಲದೆ ಸೂರಜ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿರುವ ಇಬ್ಬರು ಸಂತ್ರಸ್ತರ ಡಿಎನ್‌ಎ ಮಾದರಿಗಳನ್ನೂ ಸಿಐಡಿ ಸಂಗ್ರಹಿಸಿದೆ.
ಮೊದಲ ಪ್ರಕರಣದಲ್ಲಿ, ಜೂನ್ 16 ರಂದು ತಮ್ಮ ತೋಟದ ಮನೆಯಲ್ಲಿ ಸೂರಜ್ ರೇವಣ್ಣ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಹಾಸನ ಜಿಲ್ಲೆಯ ಯುವಕ ಆರೋಪಿಸಿದ್ದಾರೆ.
ಎರಡನೇ ಪ್ರಕರಣದಲ್ಲಿ, ಮೂರು ವರ್ಷಗಳ ಹಿಂದೆ, ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ 36 ಜೆಡಿಎಸ್ ನಾಯಕ ತನ್ನನ್ನು ಲೈಂಗಿಕವಾಗಿ ನಿಂದಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
Advertisement