
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ನಡೆದಿರುವ ಅಕ್ರಮಗಳ ಕುರಿತು ಸಿಬಿಐ ತನಿಖೆ ನಡೆಸಬೇಕೆಂಬ ಬಿಜೆಪಿಯ ಬೇಡಿಕೆಯನ್ನು ಸ್ಪಷ್ಟವಾಗಿ ತಿರಸ್ಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದು ಸಿಬಿಐಗೆ ಕೊಡುವ ಪ್ರಕರಣ ಅಲ್ಲ ಎಂದು ಗುರುವಾರ ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ಮುಡಾ ಹಗರಣದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, ನಾನು ನನ್ನ ಅವಧಿಯಲ್ಲಿ 7 ಪ್ರಕರಣಗಳನ್ನು ಸಿಬಿಐಗೆ ಕೊಟ್ಟಿದ್ದೇನೆ. ನಾವು ಹಲವು ಪ್ರಕರಣ ಸಿಬಿಐಗೆ ಕೊಡುವಂತೆ ಕೇಳಿದ್ದೆವು. ಅವರೇನಾದ್ರು(ಬಿಜೆಪಿಯವರು) ಒಂದಾದ್ರು ಕೊಟ್ಟಿದ್ರಾ? ಎಂದು ಪ್ರಶ್ನಿಸಿದರು.
"ಇದು ಸಿಬಿಐಗೆ ಕೊಡುವ ಪ್ರಕರಣ ಅಲ್ಲ. ಮುಡಾ ಹಗರಣ ಆರೋಪದ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ. ಹಾಗಂತ, ಎಲ್ಲವನ್ನೂ ಸಿಬಿಐ ಗೆ ಕೊಡಲು ಸಾಧ್ಯವಿಲ್ಲ. ಬಿಜೆಪಿಗರು ಕೇಳ್ತಾರೆ ಅಂತಾ ಎಲ್ಲವನ್ನೂ ಸಿಬಿಐ ಗೆ ಕೊಡಲು ಆಗಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಇದೇ ವೇಳೆ ಇಂಧನ ಸಚಿವ ಕೆ.ಜೆ. ಜಾರ್ಜ್ ಮಾತನಾಡಿ, "ಮುಡಾ ನಿವೇಶನ ಹಂಚಿಕೆಗೆ 50:50 ಅನುಪಾತದ ಆದೇಶ ಮಾಡಿದ್ದು, ಈಗ ನಮ್ಮ ಸರ್ಕಾರ ಅಲ್ಲ. ಯಾರ ಕಾಲದಲ್ಲಿ ಸೈಟುಗಳು ಹಂಚಿಕೆ ಆಗಿವೆ?. ಬಿಜೆಪಿ ಕಾಲದಲ್ಲಿ ಒಂದಾದರೂ ಸಿಬಿಐಗೆ ನೀಡಿದ ಉದಾಹರಣೆ ಇದೆಯಾ?. ತನಿಖೆ ನಡೆಯುತ್ತಿದೆ, ತನಿಖೆ ಆದಮೇಲೆ ಎಲ್ಲ ವಿವರ ಹೊರ ಬರುತ್ತದೆ. ನ್ಯಾಯಯುತವಾಗಿ ಹಂಚಿಕೆ ಮಾಡಿದ್ದಕ್ಕೂ ಸಿಬಿಐಗೆ ನೀಡಿ ಎಂದರೆ ಹೇಗೆ? ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಗಳ ತವರು ಜಿಲ್ಲೆಯಾದ ಮೈಸೂರಿನಲ್ಲಿ ಬಿಜೆಪಿ ಇಂದು ಸಹ ಪ್ರತಿಭಟನೆ ನಡೆಸಿ ಮುಡಾ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಅವರನ್ನು ತಡೆದು ಬಸ್‌ನಲ್ಲಿ ಕರೆದೊಯ್ದರು.
ನಗರಾಭಿವೃದ್ಧಿ ಖಾತೆ ಸಚಿವ ಬಿ ಎಸ್ ಸುರೇಶ್(ಬೈರತಿ ಸುರೇಶ್) ನಾಲ್ವರು ಸದಸ್ಯರ ಸಮಿತಿಯಿಂದ ತನಿಖೆಗೆ ಆದೇಶಿಸಿದ್ದಾರೆ. ಹಗರಣ ಸಂಬಂಧ ರಾಜೀನಾಮೆ ನೀಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಬುಧವಾರ ಹೇಳಿದ್ದರು.
Advertisement