
ಬೆಂಗಳೂರು: ಮುಡಾ ಅಕ್ರಮ ಆರೋಪ ತನಿಖೆಯನ್ನು ಸಿಬಿಐಗೆ ವಹಿಸಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಅಕ್ರಮದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂಬ ಬಿಜೆಪಿ ಆಗ್ರಹದ ಬಗ್ಗೆ ಇಂದು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ವಿರೋಧ ಪಕ್ಷದವರು ಕೇಳುತ್ತಾರೆ ಎಂದು ಎಲ್ಲವನ್ನೂ ಸಿಬಿಐಗೆ ಕೊಡಲು ಆಗಲ್ಲ ಎಂದರು.
ಹೊಸ ಕಾಯಿದೆಗಳ ಚರ್ಚೆ: ಹೊಸ ಕಾಯಿದೆಗಳಿಗೆ ರಾಜ್ಯ ಸರ್ಕಾರದ ವಿರೋಧ ವಿಚಾರವಾಗಿ ಮಾತನಾಡಿದ ಪರಮೇಶ್ವರ್, ಇವುಗಳನ್ನು ಕಾನೂನು ಪ್ರಕಾರ ತರಬೇಕು ಎಂಬ ವಿಚಾರ ಕಾನೂನು ಸಚಿವರು ತಂದಿದ್ದಾರೆ. ಚರ್ಚೆ ಮಾಡುತ್ತೇವೆ. ಸಾಮಾನ್ಯ ಜನರಿಗೆ ನ್ಯಾಯ ಸಿಗಬೇಕು ಅನ್ನೋ ಕಾನ್ಸೆಪ್ಟ್ ಅದು. ಅದನ್ನು ಇವತ್ತು ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡ್ತೀವಿ ಎಂದರು.
ಸಿಎಂ ಸಿದ್ದರಾಮಯ್ಯ ಅವರು ಆರೋಪದ ಬಗ್ಗೆ ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ. ಎಲ್ಲವನ್ನೂ ಸಿಬಿಐ ತನಿಖೆಗೆ ಕೊಟ್ಟರೆ ಇಲ್ಲೇನು ಮಾಡುವ ಹಾಗಿಲ್ಲವೇ? ಸದನದಲ್ಲಿ ಯಾವ ವಿಷಯ ಚರ್ಚೆಗೆ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ. ಸ್ಪೀಕರ್ಗೆ ಯಾವ ವಿಚಾರದ ಬಗ್ಗೆ ಪತ್ರ ಕೊಡ್ತಾರೋ ನೋಡೋಣ. ಬಿಜೆಪಿಯವರಿಗೆ ನಾವು ಉತ್ತರ ಕೊಡುತ್ತೇವೆ, ಹಿಂಜರಿಯುವುದಿಲ್ಲ ಎಂದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (MUDA) ನಡೆದಿರುವ ನಿವೇಶನ ಹಂಚಿಕೆ ಹಗರಣ ಮತ್ತು ಅಕ್ರಮಗಳ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂಬ ಪ್ರತಿಪಕ್ಷ ಬಿಜೆಪಿ ನಾಯಕರ ಆಗ್ರಹಕ್ಕೆ ಸಿಎಂ ಸಿದ್ದರಾಮಯ್ಯ ಸಹ ತಿರುಗೇಟು ನೀಡಿದ್ದಾರೆ.
ವಿಧಾನ ಸೌಧದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ನನ್ನ ಅಧಿಕಾರ ಅವಧಿಯಲ್ಲಿ ಏಳು ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದೆ. ಹಿಂದೆ ಅವರೇ ಅಧಿಕಾರದಲ್ಲಿದ್ದಾಗ ಯಾವ ಪ್ರಕರಣವನ್ನು ಸಿಬಿಐಗೆ ಹಸ್ತಾಂತರ ಮಾಡಿದ್ದರು, ಒಂದನ್ನೂ ಕೊಟ್ಟಿಲ್ಲ, ಹೀಗಿರುವಾಗ ಇಂದು ಅವರಿಗೆ ಕೇಳಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಏನಿದು ಮುಡಾ ಹಗರಣ?
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(MUDA) ಅಭಿವೃದ್ಧಿಪಡಿಸಿರುವ ಬಡಾವಣೆಗಳ ನಿವೇಶನ ಹಂಚಿಕೆ ಮತ್ತು ರೈತರಿಗೆ ನೀಡಬೇಕಾಗಿದ್ದ ಪರಿಹಾರ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಮೈಸೂರಿನ ಜಿಲ್ಲಾಧಿಕಾರಿ ಕಳೆದ ಒಂದು ವರ್ಷದಿಂದ 15ಕ್ಕಿಂತ ಹೆಚ್ಚು ಬಾರಿ ಸರ್ಕಾರಕ್ಕೆ ಪತ್ರ ಬರೆದು ತನಿಖೆ ನಡೆಸುವಂತೆ ವಿನಂತಿ ಮಾಡಿಕೊಂಡರೂ ಸರ್ಕಾರ ನಿರ್ಲಕ್ಷ್ಯ ಮಾಡಿದೆ ಎಂದು ಹೇಳಲಾಗಿದೆ.
Advertisement