
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ಚಿತ್ರರಂಗದ ನಿರ್ದೇಶಕ ಮಿಲನ ಪ್ರಕಾಶ್ ಅವರನ್ನು ಪೊಲೀಸರು ಶುಕ್ರವಾರ ವಿಚಾರಣೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ, ಅವರ ಆಪ್ತೆ ಪವಿತ್ರಾ ಗೌಡ ಸೇರಿದಂತೆ 15 ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ರೇಣುಕಾಸ್ವಾಮಿ ಹತ್ಯೆಯಾದ ಬೆನ್ನಲ್ಲೇ ದರ್ಶನ್ ಡೆವಿಲ್ ಚಿತ್ರದ ಶೂಟಿಂಗ್‌ಗೆ ತೆರಳಿದ್ದರು. ಮಿಲನ ಪ್ರಕಾಶ್ ಈ ಚಿತ್ರದ ನಿರ್ದೇಶಕರಾಗಿದ್ದು, ನಗರದ ಬಸವೇಶ್ವರ ಪೊಲೀಸ್ ಠಾಣೆಯಲ್ಲಿ ಹಾಜರಾಗಿ ಹೇಳಿಕೆಯನ್ನು ದಾಖಲಿಸಿದ್ದಾರೆ. ಬೆಂಗಳೂರು ಮಾಜಿ ಉಪಮೇಯರ್ ಮೋಹನ್ ರಾಜ್ ಕೂಡಾ ಪೊಲೀಸರ ಮುಂದೆ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ.
ಈ ನಡುವೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ ಅವರಿಗೆ ಪತ್ರ ಬರೆದಿದ್ದು, ಪವಿತ್ರಗೌಡ ದರ್ಶನ್ ಅವರ ಪತ್ನಿ ಅಲ್ಲ, 2003ರಲ್ಲಿ ದರ್ಶನ್ ಮತ್ತು ನಾನು ಮದುವೆ ಆಗಿದ್ದೀವಿ. 19-05-2003 ರಲ್ಲಿ ದರ್ಶನ್ ಅವರ ಧರ್ಮಪತ್ನಿಯಾಗಿದ್ದೀನಿ. ನಮ್ಮಿಬ್ಬರಿಗೆ ಒಬ್ಬ ಮಗ ಇದ್ದಾನೆ ಎಂದು ಬರೆದಿದ್ದಾರೆ.
ಪವಿತ್ರಗೌಡ ಸಂಜಯ್ ಸಿಂಗ್ ಎಂಬುವವರನ್ನು ಮದುವೆ ಆಗಿದ್ದಾರೆ. ಅವರಿಬ್ಬರಿಗೂ ಒಬ್ಬಳು ಹೆಣ್ಣು ಮಗಳಿದ್ದಾಳೆ. ನೀವು ಮಾಧ್ಯಮಗೋಷ್ಠಿಯಲ್ಲಿ ದರ್ಶನ್ ಅವರ ಪತ್ನಿ ಪವಿತ್ರಗೌಡ ಅಂತ ಹೇಳಿದ್ದೀರಿ. ಅದೇ ರೀತಿ ಗೃಹಸಚಿವರೂ ಕೂಡ ಒಮ್ಮೆ ಅದನ್ನೇ ಉಚ್ಚರಣೆ ಮಾಡಿದ್ದಾರೆ. ಹೀಗಾಗಿ ಪೊಲೀಸ್ ರೆಕಾರ್ಡ್ ಅಲ್ಲಿ ಪವಿತ್ರಗೌಡ ದರ್ಶನ್ ಅವರ ಪತ್ನಿ, ದರ್ಶನ್ ಅವರನ್ನು ಮದುವೆಯಾಗಿದ್ದಾರೆ ಎಂದು ಉಲ್ಲೇಖಿಸಬೇಡಿ, ಯಾವುದೇ ದಾಖಲೆಗಳಲ್ಲಿ ದರ್ಶನ್ ಅವರ ಪತ್ನಿ ಎಂದು ಬರೆಯಬೇಡಿ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ ಆರೋಪದ ಮೇಲೆ ಚಿತ್ರದುರ್ಗದ ದರ್ಶನ್ ಅವರ ಅಭಿಮಾನಿ ರೇಣುಕಾಸ್ವಾಮಿ ಅವರನ್ನು ಜೂನ್ 8 ರಂದು ಹತ್ಯೆ ಮಾಡಲಾಗಿತ್ತು.
Advertisement