ಡೆಂಗ್ಯೂ ಅಬ್ಬರ: ಮೆಡಿಕಲ್‌ ಎಮರ್ಜೆನ್ಸಿ ಘೋಷಿಸಿ MP ಡಾ. ಸಿಎನ್ ಮಂಜುನಾಥ್; ಟೀ ಪುಡಿಯಲ್ಲಿ ಕೃತಕ ಬಣ್ಣ ಬಳಕೆಗೆ ನಿಷೇಧ? ಸ್ಪಾವೊಂದರಿಂದ ಹಣ ವಸೂಲಿ ಯತ್ನ: ಸುದ್ದಿ ವಾಹಿನಿ ಸಿಇಒ ಬಂಧನ! ಇವು ಇಂದಿನ ಪ್ರಮುಖ ಸುದ್ದಿಗಳು 07-06-24

ಡೆಂಗ್ಯೂ ಅಬ್ಬರ: ಮೆಡಿಕಲ್‌ ಎಮರ್ಜೆನ್ಸಿ ಘೋಷಿಸಿ MP ಡಾ. ಸಿಎನ್ ಮಂಜುನಾಥ್; ಟೀ ಪುಡಿಯಲ್ಲಿ ಕೃತಕ ಬಣ್ಣ ಬಳಕೆಗೆ ನಿಷೇಧ? ಸ್ಪಾವೊಂದರಿಂದ ಹಣ ವಸೂಲಿ ಯತ್ನ: ಸುದ್ದಿ ವಾಹಿನಿ ಸಿಇಒ ಬಂಧನ! ಇವು ಇಂದಿನ ಪ್ರಮುಖ ಸುದ್ದಿಗಳು 07-06-24

1. ಡೆಂಗ್ಯೂ ಜ್ವರದ ಅಬ್ಬರ: ಕೂಡಲೇ ಮೆಡಿಕಲ್‌ ಎಮರ್ಜೆನ್ಸಿ ಘೋಷಿಸಿ ಎಂದು ಬಿಜೆಪಿ ಸಂಸದ ಡಾ. ಸಿಎನ್ ಮಂಜುನಾಥ್

ರಾಜ್ಯದಲ್ಲಿ ಡೆಂಗ್ಯೂ ಜ್ವರದ ಅಬ್ಬರ ಹೆಚ್ಚಾಗುತ್ತಿದೆ. ಹಾಸನದಲ್ಲಿ ಮಕ್ಕಳ ಸಾವಿನ ನಂತರ ಬೆಂಗಳೂರಿನಲ್ಲಿ ಡೆಂಗ್ಯೂಗೆ 11 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಅಂಜನಾಪುರದ 11 ವರ್ಷದ ಬಾಲಕ ಗಗನ್ ನಿನ್ನೆ ತಡರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಈಮಧ್ಯೆ, ಡೆಂಗ್ಯೂ ಜ್ವರದ ಆತಂಕದ ನಡುವೆ ಕೂಡಲೇ ಮೆಡಿಕಲ್‌ ಎಮರ್ಜೆನ್ಸಿ ಘೋಷಿಸಿ ಎಂದು ಬಿಜೆಪಿ ಸಂಸದ ಡಾ. ಸಿಎನ್ ಮಂಜುನಾಥ್ ಹೇಳಿದ್ದಾರೆ. ಡೆಂಗ್ಯೂ ಜ್ವರಕ್ಕೆ ನಿಖರವಾದ ಚಿಕಿತ್ಸೆ ಇಲ್ಲ. ಇದರ ಜೊತೆಗೆ ಇತರ ಕಾಯಿಲೆಗಳು ಬರುತ್ತವೆ. ಕೋವಿಡ್‌ ಪ್ಯಾಂಡಮಿಕ್‌ ಕಾಯಿಲೆ ತರ ಇದು ಎಂಡಮೆಕ್‌ ಕಾಯಿಲೆ. ಕೋವಿಡ್‌ ಮಾದರಿಯಲ್ಲಿ ಇದಕ್ಕೆ ಚಿಕಿತ್ಸೆ ನೀಡಬೇಕು ಎಂದರು. ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ್, ಡೆಂಗ್ಯೂ ಜ್ವರದ ನಿಯಂತ್ರಣ ಅಂದ್ರೆ ಸೊಳ್ಳೆಯ ನಿಯಂತ್ರಣ. ಸೊಳ್ಳೆ ನಿಯಂತ್ರಣವಾದ್ರೆ ಮಾತ್ರ ಡೆಂಗ್ಯೂ ನಿಯಂತ್ರಣ ಆಗಲಿದೆ. ಮಳೆಗಾಲದ ಪ್ರಾರಂಭದಲ್ಲಿ ಸೊಳ್ಳೆಯಿಂದ ಹರಡುವ ಕಾಯಿಲೆ ಇದು. ಡೆಂಗ್ಯೂ ತಡೆಗಟ್ಟದಿದ್ರೆ ಚಿಕನ್ ಗುನ್ಯಾ, ಝಿಕಾ ವೈರಸ್ ಬರಬಹುದು ಎಂದು ಎಚ್ಚರಿಸಿದ್ದಾರೆ.

2. SCSP/TSP ಅಡಿ 39 ಸಾವಿರ ಕೋಟಿ ರೂ. ವೆಚ್ಚದ ಪ್ರಸ್ತಾವನೆಗೆ ಕ್ರಿಯಾ ಯೋಜನೆ ಅನುಮೋದನೆ

2024-25ನೇ ಆರ್ಥಿಕ ವರ್ಷದಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆಯಡಿ 39 ಸಾವಿರ ಕೋಟಿ ರೂ. ವೆಚ್ಚ ಮಾಡುವ ಪ್ರಸ್ತಾವನೆಯ ಕ್ರಿಯಾ ಯೋಜನೆಗೆ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ರಾಜ್ಯ ಅಭಿವೃದ್ಧಿ ಪರಿಷತ್ ಅನುಮೋದನೆ ನೀಡಿದೆ. ಪರಿಷತ್ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ರಾಜ್ಯ ಸರ್ಕಾರದ 34 ಇಲಾಖೆಗಳಿಗೆ ಕ್ರಿಯಾ ಯೋಜನೆಯಲ್ಲಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನ ಹಂಚಿಕೆ ಮಾಡಲಾಗಿದೆ. ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, SCSP ಅಡಿ ರೂ. 27,673.96 ಕೋಟಿ, TSP ಅಡಿಯಲ್ಲಿ ರೂ.11,447.51 ಕೋಟಿ ವ್ಯಯಿಸಲಾಗುವುದು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 3,900 ಕೋಟಿ ಹೆಚ್ಚಿನ ವೆಚ್ಚ ಮಾಡಲಾಗುತ್ತದೆ ಎಂದರು.

3. ಕಾರುಗಳ ಮಧ್ಯೆ ಮೂವರು ಸಾವು

ಶಿವಮೊಗ್ಗದಲ್ಲಿ ಎರಡು ಕಾರುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿ ಐವರು ಗಾಯಗೊಂಡಿದ್ದಾರೆ. ಈ ಪೈಕಿ ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ. ಶಿವಮೊಗ್ಗ ತಾಲೂಕಿನ ಮುದ್ದಿನಕೊಪ್ಪ ಟ್ರೀ ಪಾರ್ಕ್ ನ ಲಯನ್ ಸಫಾರಿ ಬಳಿ ದುರ್ಘಟನೆ ಸಂಭವಿಸಿದೆ. ಶಿವಮೊಗ್ಗದಿಂದ ಸಾಗರ ಕಡೆ ತೆರಳುತ್ತಿದ್ದ ಇನೋವಾ ಕಾರು ಹಾಗೂ ಸಾಗರದಿಂದ ಶಿವಮೊಗ್ಗದ ಕಡೆ ಬರುತ್ತಿದ್ದ ಸ್ವಿಫ್ಟ್ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಎರಡು ಕಾರುಗಳು ತೀವ್ರವಾಗಿ ಛಿದ್ರಗೊಂಡಿವೆ. ಸ್ಪಾವೊಂದರಿಂದ ಹಣ ವಸೂಲಿ ಯತ್ನ: ಸುದ್ದಿ ವಾಹಿನಿ ಸಿಇಒ ಬಂಧನ

4. ಸ್ಪಾವೊಂದರಿಂದ ಹಣ ವಸೂಲಿ ಯತ್ನ: ಸುದ್ದಿ ವಾಹಿನಿ ಸಿಇಒ ಬಂಧನ

ಇಂದಿರಾನಗರ 100 ಅಡಿ ರಸ್ತೆಯಲ್ಲಿರುವ ಪ್ರಸಿದ್ಧ ಸ್ಪಾವೊಂದರಿಂದ ಹಣ ವಸೂಲಿ ಮಾಡಲು ಯತ್ನಿಸಿದ ಆರೋಪದ ಮೇಲೆ ಸ್ಥಳೀಯ ಸುದ್ದಿ ವಾಹಿನಿಯ ಸಿಇಒ ಆರ್.ವೆಂಕಟೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸ್ಪಾ ವ್ಯವಸ್ಥಾಪಕರಾದ ಎಚ್. ಶಿವಶಂಕರ್ ನೀಡಿದ ದೂರಿನ ಹಿನ್ನೆಲೆಯಲ್ಲಿ ರಾಜಾನುಕುಂಟೆ ನಿವಾಸಿ ಆರ್.ವೆಂಕಟೇಶ್ ನನ್ನು ಜೀವನ್ ಭೀಮಾ ನಗರ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಕೋರ್ಟ್ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಜೂನ್ 26ರಂದು ಹೊಸದಾಗಿ ಕೆಲಸಕ್ಕೆ ಸೇರಿದ್ದ ಮಹಿಳೆಯೊಬ್ಬರು ಗ್ರಾಹಕ ಸಂದೇಶ್ ಎಂಬುವರಿಕೆ ಮಸಾಜ್ ಮಾಡಿದ್ದು ಮರುದಿನ ಆಕೆ ಕೆಲಸಕ್ಕೆ ಬಾರದೆ ಫೋನ್ ಸ್ವೀಚ್ ಆಫ್ ಮಾಡಿಕೊಂಡಿದ್ದಳು. ಅದೇ ದಿನ ಚಾನೆಲ್‌ನ ಮೈಕ್ ಹಿಡಿದಿದ್ದ ಯುವತಿ ಸೇರಿದಂತೆ ಮೂವರು ಸ್ಪಾಗೆ ಪ್ರವೇಶಿಸಿ ಮಾಲೀಕನಿಗೆ ವಿಡಿಯೋ ತೋರಿಸಿ ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದೀರಾ ಎಂದು ಆರೋಪಿಸಿ 15 ಲಕ್ಷ ರೂ. ನೀಡುವಂತೆ ಬೆದರಿಕೆ ಹಾಕಿದ್ದರು.

5. ಟೀ ಪುಡಿಯಲ್ಲಿ ಕೃತಕ ಬಣ್ಣ ಬಳಕೆಗೆ ನಿಷೇಧ

ಟೀ ಪುಡಿಯಲ್ಲಿ ಕೃತಕ ಬಣ್ಣ, ರುಚಿ ಹೆಚ್ಚಿಸುವ ರಾಸಾಯನಿಕ ಬಳಕೆ ಹಿನ್ನೆಲೆ ಕೃತಕ ಬಣ್ಣ, ರಾಸಾಯನಿಕ ಇರುವ ಟೀ ಪುಡಿ ಬ್ಯಾನ್‌ ಮಾಡಲು ಚಿಂತನೆ ನಡೆಸಲಾಗಿದೆ. ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ತೀರ್ಮಾನ ಮಾಡಲಾಗಿದ್ದು, ಶೀಘ್ರವೇ ಬ್ಯಾನ್ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆ ಇದೆ. ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಟೀ ಪುಡಿ ಮಾದರಿ ಸಂಗ್ರಹಿಸಲಾಗಿತ್ತು. ಬೆಂಗಳೂರಿನಲ್ಲಿ ಸಂಗ್ರಹಿಸಿದ್ದ 49 ಟೀ ಪುಡಿ ಸ್ಯಾಂಪಲ್ಸ್‌ ಪೈಕಿ 45 ಟೀ ಪುಡಿ ಸ್ಯಾಂಪಲ್ಸ್ ಅಸುರಕ್ಷಿತವಾಗಿರುವುದು ಕಂಡು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com