
ಯಾದಗಿರಿ: ಮಗುವಿನ ಚಿಕ್ಕಪ್ಪ ತನ್ನ ಪ್ರೇಮ ಪ್ರಸ್ತಾಪವನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಅಪ್ರಾಪ್ತ ಬಾಲಕಿ ಮೂರು ತಿಂಗಳ ಹೆಣ್ಣು ಮಗುವನ್ನು ಬಾವಿಗೆ ಎಸೆದು ಕೊಂದಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.
ಯಾದಗಿರಿ ನಗರದ ಅಂಬೇಡ್ಕರ್ ಲೇಔಟ್‌ನಲ್ಲಿ ವಾಸವಾಗಿರುವ ನಾಗೇಶ್ ಮತ್ತು ಚಿಟ್ಟೆಮ್ಮ ದಂಪತಿಯ ಪುತ್ರಿ ಮೂರು ತಿಂಗಳ ಮಗು ಮೀನಾಕ್ಷಿ ಸಾವನ್ನಪ್ಪಿದೆ. ಆರೋಪಿ ಅಪ್ರಾಪ್ತೆ ಯಲ್ಲಪ್ಪನ ಬಳಿ ತನ್ನ ಪ್ರೀತಿಯನ್ನು ನಿವೇದಿಸಿಕೊಂಡಿದ್ದಾಳೆ. ಯಲ್ಲಪ್ಪ ಆಕೆಯನ್ನು ತಿರಸ್ಕರಿಸಿದ್ದ. ಆದರೆ ಆರೋಪಿ ಬಾಲಕಿ ಆತನಿಗೆ ಪ್ರಪೋಸ್ ಮಾಡುತ್ತಲೇ ಇದ್ದಳು. ಯಲ್ಲಪ್ಪ ನಿರಾಕರಿಸಿದ್ದರಿಂದ ಕುಪಿತಳಾದ ಅಪ್ರಾಪ್ತ ಬಾಲಕಿ ಯಾರೂ ಇಲ್ಲದ ಸಮಯದಲ್ಲಿ ಯಲ್ಲಪ್ಪನ ಅಣ್ಣನ ಮಗುವನ್ನು ಎತ್ತುಕೊಂಡು ಹೋಗಿ ಜೂನ್ 6 ರಂದು ಬಾವಿಗೆ ಎಸೆದಿದ್ದಳು.ಮಗುವಿನ ಕೊಲೆ ಆರೋಪ ಯಲ್ಲಪ್ಪನ ಮೇಲೆ ಬರಬೇಕೆಂಬುದು ಆಕೆಯ ಉದ್ದೇಶವಾಗಿತ್ತು.
ಬಳಿಕ ಮನೆಯವರು ಮಗುವಿನ ಹುಡುಕಾಟ ಆರಂಭಿಸಿದಾಗ ಆರೋಪಿ ಯಲ್ಲಪ್ಪನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಳು. ಹಸುಗೂಸು ಬಾವಿಯಲ್ಲಿ ಬಿದ್ದಿರಬಹುದು ನೋಡಿ ಎಂದು ಬಾಲಕಿಯೇ ಮೊದಲು ಹೇಳಿದ್ದಳು. ಅಲ್ಲದೇ, ಬಾಲಕಿ ಮಗುವನ್ನು ಎತ್ತಿಕೊಂಡು ಹೋಗಿರುವುದನ್ನು ನೋಡಿದವರು ಪೋಲಿಸರಿಗೆ ತಿಳಿಸಿದ್ದರು.
ತನಿಖೆ ಕೈಗೆತ್ತಿಕೊಂಡ ಯಾದಗಿರಿ ನಗರ ಪೊಲೀಸರು ಪ್ರಕರಣವನ್ನು ಭೇದಿಸಿ ಅಪ್ರಾಪ್ತ ಬಾಲಕಿಯನ್ನು ವಿಚಾರಣೆಗೊಳಪಡಿಸಿ ವಶಕ್ಕೆ ಪಡೆದಿದ್ದಾರೆ. ಮಗುವಿನ ಚಿಕ್ಕಪ್ಪನನ್ನು ಪ್ರೀತಿಸುತ್ತಿದ್ದ ಕಾರಣ ಮತ್ತು ಅವನು ಅವಳನ್ನು ತಿರಸ್ಕರಿಸಿದ್ದರಿಂದ ಅಪರಾಧ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾಳೆ. ಆರೋಪಿ ಯಲ್ಲಪ್ಪನ ಮನೆಯ ಪಕ್ಕದಲ್ಲೆ ವಾಸಿಸುತ್ತಿದ್ದಳು.
Advertisement