
ಉಡುಪಿ: ಉಡುಪಿ ನಗರದಲ್ಲಿ ಹಲವೆಡೆ ಭಾರಿ ಮಳೆಯಾಗಿದ್ದು, ಕರಂಬಳ್ಳಿ ವಾರ್ಡ್ ನ ವೆಂಕಟರಮಣ ಲೇಔಟ್ ಹಲವು ಮನೆಗಳು ಜಲಾವೃತಗೊಂಡಿವೆ.
ಮಳೆ ನೀರು ಚರಂಡಿಗಳು ಮುಚ್ಚಿ ಹೋಗಿರುವ ಕಾರಣದಿಂದ ಈ ಸಮಸ್ಯೆ ಉಂಟಾಗಿದೆ ಎಂದು ಸ್ಥಳೀಯರು ದೂರಿದ್ದು, ಪೌರಾಡಳಿತ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು. ನಗರದ ಕಲ್ಸಂಕ ಬಳಿಯ ಅಂಗಡಿಗಳಿಗೆ ಸಹ ಮಳೆ ನೀರು ನುಗ್ಗಿದೆ.
ಗುಂಡಿಬೈಲಿನ ಪಡಿಗಾರು ರಸ್ತೆಯಲ್ಲಿ ಪಿಜಿಯಲ್ಲಿರುವ ವಿದ್ಯಾರ್ಥಿಗಳಿಗೂ ಈ ಸಮಸ್ಯೆ ತಟ್ಟಿದ್ದು, ಅವರು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವಂತಾಗಿದೆ.
ಭಾರೀ ಮಳೆಯ ಮುನ್ನೆಚ್ಚರಿಕೆ ಹಾಗೂ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಜುಲೈ 9 ರಂದು ಶಾಲಾ-ಪಿಯು ಕಾಲೇಜುಗಳಿಗೆ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಕೆ.ರಜೆ ಘೋಷಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಸೋಮವಾರ ಧಾರಾಕಾರ ಮಳೆ ಸುರಿದಿದ್ದು, ಹಲವೆಡೆ ಪ್ರವಾಹ ಉಂಟಾಗಿದೆ. ಭಾರೀ ಮಳೆಗೆ ನಗರದ ಕನ್ನರ್ಪಾಡಿ ಬಳಿ ಕಾರೊಂದು ಕೊಚ್ಚಿ ಹೋಗಿದೆ. ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದು, ಘಟನೆಯಲ್ಲಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ವಿಭಾಗದ ಸಿಬ್ಬಂದಿ ನಂತರ ಜಲಾವೃತ ಪ್ರದೇಶದಿಂದ ಕಾರನ್ನು ಹೊರತೆಗೆದಿದ್ದಾರೆ. ಸಾರ್ವಜನಿಕರು ಜಾಗೃತರಾಗಿ ಮತ್ತು ಸುರಕ್ಷಿತವಾಗಿರಲು ಉಡುಪಿ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಬೈಂದೂರು ತಾಲೂಕಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವಾರು ಭತ್ತದ ಗದ್ದೆಗಳು ಪ್ರವಾಹದ ನೀರಿನಲ್ಲಿ ಮುಳುಗಿವೆ. ತಗ್ಗರ್ಸೆ, ಮಕ್ಕಿಗದ್ದೆ, ಶಿರೂರು, ಕರಾವಳಿ, ಯಡ್ತರೆ, ದೊಂಬೆ ಮುಂತಾದ ಪ್ರದೇಶಗಳಲ್ಲಿ ತೀವ್ರ ಪ್ರವಾಹ ಉಂಟಾಗಿದೆ. ಹೊಸೂರು, ತೂದಳ್ಳಿ, ಆಲಂದೂರು, ಗಂಗನಾಡು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರವಾಹದಿಂದಾಗಿ ಕೃಷಿ ಪ್ರದೇಶಗಳು ಹಾನಿಗೀಡಾಗಿವೆ. ಮುಂಜಾನೆಯಿಂದಲೇ ಧಾರಾಕಾರ ಮಳೆ ಸುರಿದಿದ್ದರಿಂದ ಗ್ರಾಮೀಣ ಭಾಗಗಳಲ್ಲಿ ಶಾಲೆಗಳಿಗೆ ಹೋಗುವ ಮಕ್ಕಳು ತೀವ್ರ ತೊಂದರೆ ಅನುಭವಿಸಿದರು.
ಸೋಮವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಕಾರ್ಕಳ ತಾಲೂಕಿನಲ್ಲಿ 63.9 ಮಿ.ಮೀ ಮಳೆ ಸುರಿದಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿನ ಮಳೆ ನಿಗಾ ಕೋಶ ನೀಡಿದ ಅಂಕಿ-ಅಂಶಗಳು ತಿಳಿಸಿವೆ. ಇದೇ ಅವಧಿಯಲ್ಲಿ ಕುಂದಾಪುರ ತಾಲೂಕಿನಲ್ಲಿ 138.6 ಮಿ.ಮೀ, ಉಡುಪಿ- 118 ಮಿ.ಮೀ, ಬೈಂದೂರು- 147.3 ಮಿ.ಮೀ, ಬ್ರಹ್ಮಾವರ- 104 ಮಿ.ಮೀ, ಕಾಪು- 79.5 ಮಿ.ಮೀ, ಹೆಬ್ರಿ- 95.8 ಮಿ.ಮೀ ಮಳೆಯಾಗಿದೆ. ಜಿಲ್ಲೆಯಲ್ಲಿ ಸರಾಸರಿ 110 ಮಿಮೀ ಮಳೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 10 ಮನೆಗಳು ಭಾಗಶಃ ಹಾನಿಯಾಗಿದ್ದು, ಒಂದು ಮನೆ ಸಂಪೂರ್ಣ ಹಾನಿಗೀಡಾಗಿದೆ.
Advertisement