
ಮಂಗಳೂರು: ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಕಪಾಳಮೋಕ್ಷ ಮಾಡಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಡಾ.ವೈ ಭರತ್ ಶೆಟ್ಟಿ ಅವರ ವಿರುದ್ಧ ಕಾವೂರು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಕಾಂಗ್ರೆಸ್ ಕಾರ್ಪೊರೇಟರ್ ಅನಿಲ್ ಕುಮಾರ್ ನೀಡಿದ ದೂರಿನ ಆಧಾರದ ಮೇಲೆ ಭರತ್ ಶೆಟ್ಟಿ ವಿರುದ್ಧ ಬಿಎನ್‌ಎಸ್ ಸೆಕ್ಷನ್ 353 (2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಹೇಳಿದ್ದಾರೆ.
ಸಂಸತ್ತಿನಲ್ಲಿ ಹಿಂದೂಗಳ ಕುರಿತು ರಾಹುಲ್ ಗಾಂಧಿ ನೀಡಿದ ಹೇಳಿಕೆ ಖಂಡಿಸಿ ಸೋಮವಾರ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಬಿಜೆಪಿ ಶಾಸಕರ ವಿರುದ್ಧ ಕೇಸ್ ದಾಖಲಿಸಲಾಗಿದೆ.
ರಾಹುಲ್ ಗಾಂಧಿ ಅವರನ್ನು ಸಂಸತ್ತಿನ ಒಳಗೆ ಲಾಕ್ ಮಾಡಿ ಕಪಾಳಮೋಕ್ಷ ಮಾಡಬೇಕು. ಅಗತ್ಯ ಬಿದ್ದರೆ ಹಿಂದೂಗಳು ಆಯುಧಗಳನ್ನು ಹಿಡಿಯಲು ಸಿದ್ಧರಿದ್ದಾರೆ ಎಂದು ಭರತ್ ಶೆಟ್ಟಿ ಅವರು ಹೇಳಿದ್ದರು.
ಇನ್ನು ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಶಾಸಕರ ಹೇಳಿಕೆಯನ್ನು ಖಂಡಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಅವರು, ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಭರತ್ ಶೆಟ್ಟಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಜಿ ಪರಮೇಶ್ವರ ಅವರಿಗೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ.
“ರಾಹುಲ್ ಗಾಂಧಿ ಬಗ್ಗೆ ಶೆಟ್ಟಿ ಮಾತನಾಡಿರುವ ರೀತಿ ಕರಾವಳಿ ಕರ್ನಾಟಕದ ಎಲ್ಲಾ ಶಾಸಕರು ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಿದೆ. ಅವರು ಕೇವಲ ಹಿಂಸಾಚಾರವನ್ನು ಬೆಂಬಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದರು.
Advertisement