
ಬೆಂಗಳೂರು: ರಾಜ್ಯದ 9 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ ನಡೆದಿದ್ದು, 56 ಪ್ರದೇಶಗಳಲ್ಲಿ 11 ಸರ್ಕಾರಿ ಅಧಿಕಾರಿಗಳು ಹಾಗೂ ಇಂಜಿನಿಯರ್ ಗಳ ಮನೆಗಳಲ್ಲಿ ಶೋಧ ಕಾರ್ಯಾಚರಣೆ ನಡೆದಿದೆ. ದಾಳಿ ವೇಳೆ ಒಟ್ಟು 45.14 ಕೋಟಿ ರೂಪಾಯಿ ಅಕ್ರಮ ಸಂಪತ್ತು ಪತ್ತೆಯಾಗಿದೆ.
ಸುಮಾರು 100 ಮಂದಿ ಅಧಿಕಾರಿಗಳು ದಾಳಿ ನಡೆಸಿ ಭ್ರಷ್ಟ ಅಧಿಕಾರಿಗಳ ಅಕ್ರಮ ಆದಾಯವನ್ನು ಬಯಲಿಗೆಳೆದಿದ್ದಾರೆ.
ಬೆಳಗಾವಿಯ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಡಿ ಮಹದೇವ್ ಬನ್ನೂರು, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಕಾರ್ಯಪಾಲಕ ಇಂಜಿನಿಯರ್ ಡಿ.ಹೆಚ್ ಉಮೇಶ್, ದಾವಣಗೆರೆಯ ಬೆಸ್ಕಾಂ ವಿಜಿಲೆನ್ಸ್ ಪೊಲೀಸ್ ಠಾಣೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಂ ಎಸ್ ಪ್ರಭಾಕರ್, ಬೆಳಗಾವಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶೇಖರ್ ಗೌಡ, ಕುರಡಗಿ, ನಿವೃತ್ತ ಪಿಡಬ್ಲ್ಯುಡಿ ಮುಖ್ಯ ಎಂಜಿನಿಯರ್ ಎಂ.ರವೀಂದ್ರ ಮತ್ತು ಲೋಕಾಯುಕ್ತ ಮುಖ್ಯ ಎಂಜಿನಿಯರ್ ಕೆ.ಜಿ.ಜಗದೀಶ ಸೇರಿದಂತೆ ಇನ್ನಿತರ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆದಿದೆ ಎಂದು ಲೋಕಾಯುಕ್ತ ಪ್ರಕಟಣೆಯಲ್ಲಿ ತಿಳಿಸಿದೆ.
ಮಂಡ್ಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ನಿವೃತ್ತ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಶಿವರಾಜು, ರಾಮನಗರದ ಹಾರೋಹಳ್ಳಿ ತಹಶೀಲ್ದಾರ್ ವಿಜಯಣ್ಣ, ನೀರಾವರಿ ಇಲಾಖೆಯ ಅಧೀಕ್ಷಕ ಎಂಜಿನಿಯರ್ ಮಹೇಶ್ ಕೆ, ಪಂಚಾಯಿತಿ ಕಾರ್ಯದರ್ಶಿ ಎನ್.ಎಂ.ಜಗದೀಶ್ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಹದೇವಪುರ ವಿಭಾಗದ ಕಂದಾಯ ಅಧಿಕಾರಿ ಬಸವರಾಜ ಮಾಗಿ ಲೋಕಾಯುಕ್ತ ದಾಳಿ ಎದುರಿಸಿದ ಅಧಿಕಾರಿಗಳಾಗಿದ್ದಾರೆ.
ಲೋಕಾಯುಕ್ತ ಕಚೇರಿಯ ಪ್ರಕಾರ, ಗುರುವಾರ ದಾಳಿ ನಡೆಸಿದವರಲ್ಲಿ ಶೇಖರ್ ಗೌಡ ಕುರಡಗಿ ಅವರು ತಮ್ಮ ಘೋಷಿತ ಆದಾಯದ ಪ್ರಮಾಣಕ್ಕಿಂತ ಹೆಚ್ಚಾದ 7.88 ಕೋಟಿ ರೂಪಾಯಿ ಮೌಲ್ಯದ ಅತ್ಯಧಿಕ ಆಸ್ತಿಯನ್ನು ಹೊಂದಿದ್ದಾರೆ ಎಂಬುದು ಕಂಡುಬಂದಿದೆ.
ಉಮೇಶ್, ರವೀಂದ್ರ, ಕೆ ಜಿ ಜಗದೀಶ್ ಮತ್ತು ಶಿವರಾಜು ಅವರು ಐದು ಕೋಟಿ ರೂ.ಗಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂದು ಅದು ಹೇಳಿದೆ.
ಒಟ್ಟಾರೆಯಾಗಿ, 11 ಅಧಿಕಾರಿಗಳು 45.14 ಕೋಟಿ ರೂಪಾಯಿ ಮೌಲ್ಯದ ಡಿಎ ಹೊಂದಿರುವುದು ಕಂಡುಬಂದಿದೆ ಎಂದು ಲೋಕಾಯುಕ್ತ ಹೇಳಿಕೆ ತಿಳಿಸಿದೆ.
Advertisement