ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಬಹುಕೋಟಿ ರೂಪಾಯಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಇಂದು ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ವಶಕ್ಕೆ ಪಡೆದಿದೆ. ನಗರದ ಡಾಲರ್ಸ್ ಕಾಲೋನಿಯಲ್ಲಿರುವ ಅವರ ನಿವಾಸದಿಂದ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗಾಗಿ ಶಾಂತಿನಗರದ ಕಚೇರಿಗೆ ಇಡಿ ಅಧಿಕಾರಿಗಳು ಕರೆದೊಯ್ದಿದ್ದರು. ನಿರಂತರ 7 ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ಇಡಿ ಅಧಿಕಾರಿಗಳು ನಾಗೇಂದ್ರರನ್ನು ವಶಕ್ಕೆ ಪಡೆದಿದ್ದಾರೆ. ಮತ್ತೊಂದೆಡೆ, ಪ್ರಕರಣ ಸಂಬಂಧ ರಾಯಚೂರು ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ಗೆ SIT ನೋಟಿಸ್ ನೀಡಿದ್ದರಿಂದ ಅವರು ಇಂದು ವಿಚಾರಣೆಗೆ ಹಾಜರಾದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಹೈದರಾಬಾದ್‌ನಲ್ಲಿ ಪ್ರಕರಣದ ಪ್ರಮುಖ ಆರೋಪಿ ಸತ್ಯನಾರಾಯಣ ವರ್ಮಾ ಖರೀದಿಸಿದ್ದ 3.3 ಕೋಟಿ ರೂಪಾಯಿ ಮೌಲ್ಯದ ಲಂಬೋರ್ಗಿನಿಯನ್ನು ವಶಪಡಿಸಿಕೊಂಡಿತ್ತು. ಅಲ್ಲದೆ ವಶಪಡಿಸಿಕೊಂಡಿದ್ದ ಕಾರನ್ನು ಡೀಲರ್‌ಗೆ ಹಿಂತಿರುಗಿಸಿ ಹಣವನ್ನೂ ಜಪ್ತಿ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಖ್ಯಾತ ನಿರೂಪಕಿ, ನಟಿ ಅಪರ್ಣಾ ಅವರು ನಿನ್ನೆ ರಾತ್ರಿ ಶ್ವಾಸಕೋಶ ಕ್ಯಾನ್ಸರ್‌ನಿಂದ ನಿಧನರಾಗಿದ್ದು, ಅವರ ಅಂತ್ಯಸಂಸ್ಕಾರ ಇಂದು ಬನಶಂಕರಿ ವಿದ್ಯುತ್ ಚಿತಾಗಾರದಲ್ಲಿ ನೆರವೇರಿತು. ಕುಟುಂಬಸ್ಥರು, ಆಪ್ತರು, ಚಿತ್ರರಂಗದ ಗಣ್ಯರು ಸೇರಿ ನೂರಾರು ಜನರ ಸಮ್ಮುಖದಲ್ಲಿ ಪೊಲೀಸ್ ಗೌರದೊಂದಿಗೆ, ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಅವರ ಅಂತ್ಯಕ್ರಿಯೆ ನಡೆಯಿತು. ಇದಕ್ಕೂ ಮುನ್ನ, ಬನಶಂಕರಿಯಲ್ಲಿರುವ ಅಪರ್ಣಾ ಅವರ ಸ್ವಗೃಹದಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಚಿತ್ರರಂಗದ ಪ್ರಮುಖರು ಮತ್ತು ಗಣ್ಯರು ಅಂತಿಮ ದರ್ಶನ ಪಡೆದರು. ಬೆಂಗಳೂರಿನ ನಮ್ಮ ಮೆಟ್ರೋಗೆ ಧ್ವನಿ ನೀಡಿದ್ದ ಅಪರ್ಣಾ ಅವರಿಗೆ BMRCL ಶ್ರದ್ಧಾಂಜಲಿ ಸಲ್ಲಿಸುವ ಚಿಕ್ಕ ಆಡಿಯೋ ತುಣುಕನ್ನು ಇಂದು ರೈಲುಗಳಲ್ಲಿ ಪ್ರಸಾರಾ ಮಾಡಿತು.
ಮುಡಾ ನಿವೇಶನ ಹಂಚಿಕೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಬೆಂಗಳೂರಿನಲ್ಲಿಂದು 'ಮೈಸೂರು ಚಲೋ' ಪ್ರತಿಭಟನೆ ನಡೆಸಿದರು. ಇಂದು ಬೆಳಿಗ್ಗೆ ಮೈಸೂರು ರಸ್ತೆಯ ಕದಂಬ ಹೋಟೆಲ್ ಬಳಿ ಪ್ರತಿಭಟನೆ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತಿತರ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು. ಪೊಲೀಸರು ವಶಕ್ಕೆ ಪಡೆಯುವ ಸಾಧ್ಯತೆ ಇದ್ದಿದ್ದರಿಂದ ಮೈಸೂರಿನಲ್ಲಿ ನಡೆದ ಪ್ರತಿಭಟನೆಗೆ ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಶಾಸಕ ಅಶ್ವಥ್ ನಾರಾಯಣ್ ಗೂಡ್ಸ್ ವಾಹನದಲ್ಲಿ ಬಂದರು. ಈ ವೇಳೆ ಮಾತನಾಡಿದ ಅಶೋಕ್, ಸಿಎಂ ಸಿದ್ದರಾಮಯ್ಯ ಈ ದೇಶ ಕಂಡ ಬ್ರಹ್ಮಾಂಡ ಭ್ರಷ್ಟಾಚಾರಿ ಎಂದು ಆರೋಪಿಸಿದರು. ಮೈಸೂರಿನಲ್ಲಿ ಸೈಟು ಬೇಕು ಅಂತ 80 ಸಾವಿರ ಜನ ಅರ್ಜಿ ಹಾಕಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಕುಟುಂಬ ಹಾಗೂ ಬೆಂಬಲಿಗರಿಗೆ ಮಾತ್ರ ಸೈಟ್ ಕೊಟ್ಟಿದ್ದಾರೆ. ಮುಡಾದಲ್ಲಿ ಬೃಹತ್ ಹಗರಣವೇ ನಡೆದಿದೆ. ಹೀಗಾಗಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಅಶೋಕ್ ಆಗ್ರಹಿಸಿದರು.
ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿಯಲ್ಲಿ ಮಣ್ಣು ಕುಸಿದು ಓರ್ವ ಕಾರ್ಮಿಕ ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ನಡೆದಿದೆ. ಹಟ್ಟಿ ಚಿನ್ನದ ಗಣಿಯ ಮಲ್ಲಪ್ಪ ಶಾಫ್ಟ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ 48 ವರ್ಷದ ಮೌನೇಶ್ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನಾಲ್ವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬನ್ನೇರುಘಟ್ಟದ ಹಕ್ಕಿಪಿಕ್ಕಿ ಕಾಲೋನಿಯ ದೊಡ್ಡಬಂಡೆ ಬಳಿ ಕಾಡಾನೆ ದಾಳಿಯಲ್ಲಿ ಫಾರೆಸ್ಟ್ ವಾಚರ್ 46 ವರ್ಷದ ಚಿಕ್ಕಮಾದಯ್ಯ ಮೃತಪಟ್ಟಿದ್ದಾರೆ. ಮಧ್ಯರಾತ್ರಿ 12.30ರ ಸುಮಾರಿಗೆ ಕಾಡಾನೆ ದಾಳಿ ಮಾಡಿದ್ದು ಗಂಭೀರವಾಗಿ ಗಾಯಗೊಂಡಿದ್ದ ಚಿಕ್ಕಮಾದಯ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸಾಕಾನೆಗಳನ್ನು ಕಾಡಿಗೆ ಬಿಟ್ಟಿದ್ದಾಗ ಅವುಗಳ ಜೊತೆ ಸೇರಿಕೊಂಡಿದ್ದ ಕಾಡಾನೆ ಚಿಕ್ಕಮಾದಯ್ಯ ಮತ್ತು ಮತ್ತೊಬ್ಬ ಸಿಬ್ಬಂದಿ ಮೇಲೆ ದಾಳಿ ಮಾಡಿತ್ತು. ಸಿಬ್ಬಂದಿ ಕಾಡಾನೆ ದಾಳಿಯಿಂದ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ.
Advertisement