ತಮಿಳುನಾಡಿಗೆ ದಿನ 8 ಸಾವಿರ ಕ್ಯೂಸೆಕ್ಸ್ ನೀರು: ಸರ್ವಪಕ್ಷ ಸಭೆಯಲ್ಲಿ ತೀರ್ಮಾನ; ವಕ್ಫ್ ಬೋರ್ಡ್ ನಲ್ಲಿ ಅಕ್ರಮ ಹಣ ವರ್ಗಾವಣೆ; KSRTC ಬಸ್ ದರ ಏರಿಕೆ? ಇವು ಇಂದಿನ ಪ್ರಮುಖ ಸುದ್ದಿಗಳು 14-07-24

ತಮಿಳುನಾಡಿಗೆ ದಿನ 8 ಸಾವಿರ ಕ್ಯೂಸೆಕ್ಸ್ ನೀರು: ಸರ್ವಪಕ್ಷ ಸಭೆಯಲ್ಲಿ ತೀರ್ಮಾನ; ವಕ್ಫ್ ಬೋರ್ಡ್ ನಲ್ಲಿ ಅಕ್ರಮ ಹಣ ವರ್ಗಾವಣೆ; KSRTC ಬಸ್ ದರ ಏರಿಕೆ? ಇವು ಇಂದಿನ ಪ್ರಮುಖ ಸುದ್ದಿಗಳು 14-07-24

1. ತಮಿಳುನಾಡಿಗೆ 8 ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಸರ್ವಪಕ್ಷ ಸಭೆಯಲ್ಲಿ ತೀರ್ಮಾನ

ತಮಿಳುನಾಡಿಗೆ ಜುಲೈ 12ರಿಂದ 31ರವರೆಗೆ ಪ್ರತಿ ದಿನ 1 ಟಿಎಂಸಿ ನೀರು ಹರಿಸಬೇಕು ಎಂಬ ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶದ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಸರ್ವಪಕ್ಷ ಸಭೆ ನಡೆಯಿತು. ಸಭೆಯಲ್ಲಿ ಸದ್ಯಕ್ಕೆ ತಮಿಳುನಾಡಿಗೆ ಪ್ರತಿನಿತ್ಯ 8000 ಕ್ಯುಸೆಕ್‌ ನೀರು ಬಿಡಲು ತೀರ್ಮಾನ ಮಾಡಲಾಗಿದೆ. ಸಭೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಭೆಯಲ್ಲಿ ವಸ್ತು ಸ್ಥಿತಿ ಬಗ್ಗೆ ಚರ್ಚೆಯಾಗಿದೆ. ಜುಲೈ 11ರಂದು ನಡೆದ CWRC ಸಭೆಯಲ್ಲಿ ಜುಲೈ 12ರಿಂದ 20 ದಿನ ತಮಿಳುನಾಡಿಗೆ ಪ್ರತಿ ನಿತ್ಯ 1TMC ನೀರನ್ನು ಬಿಡಲು ಆದೇಶ ಮಾಡಿತ್ತು. ಜೂನ್ ನಲ್ಲಿ 9.14 ಟಿಎಂಸಿ ಹಾಗೂ ಜುಲೈನಲ್ಲಿ 31.24 ಟಿಎಂಸಿ ಸೇರಿ ಒಟ್ಟಾರೆ ಸುಮಾರು 40.43 ಟಿಎಂಸಿ ನೀರು ಬಿಡಬೇಕು. ನಾವು ಈವರೆಗೂ 5 ಟಿಎಂಸಿವರೆಗೂ ನೀರು ಬಿಟ್ಟಿದ್ದೇವೆ ಎಂದರು. ಅಲ್ಲದೆ CWRC ಆದೇಶದ ವಿರುದ್ಧ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸುವ ತೀರ್ಮಾನಕ್ಕೆ ಬರಲಾಗಿದೆ ಎಂದರು.

2. ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ನಲ್ಲೂ ಅಕ್ರಮವಾಗಿ ಹಣ ವರ್ಗಾವಣೆ

ವಾಲ್ಮೀಕಿ ನಿಗಮದ ಬಹುಕೋಟಿ ಹಗರಣದ ಬೆನ್ನಲ್ಲೇ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ನಲ್ಲೂ ಅಕ್ರಮವಾಗಿ ಹಣ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದೆ. ಸುಮಾರು 4 ಕೋಟಿ ರೂ. ಹಣ ಅಕ್ರಮ ವರ್ಗಾವಣೆ ಸಂಬಂಧ ಮಾಜಿ ಸಿಇಒ ಝುಲ್ಫಿಕಾರುಲ್ಲಾ ವಿರುದ್ಧ ವಕ್ಫ್ ಮಂಡಳಿ ಹಾಲಿ ಸಿಇಒ ಮೀರ್ ಅಹ್ಮದ್ ಅಬ್ಬಾಸ್ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಹಿಂದಿನ ಸಿಇಒ ರಾಜ್ಯದ ಬೊಕ್ಕಸಕ್ಕೆ ಒಟ್ಟು 8.03 ಕೋಟಿ ರೂಪಾಯಿ ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಕರ್ನಾಟಕ ವಕ್ಸ್ ಮಂಡಳಿಯ ಗುಲ್ಬರ್ಗಾ ದರ್ಗಾಕ್ಕೆ ಸೇರಿದ ಆಸ್ತಿಯನ್ನು ಸರ್ಕಾರ ಒತ್ತುವರಿ ಮಾಡಿಕೊಂಡು ಮಂಡಳಿಗೆ 2.29 ಕೋಟಿ ಹಣವನ್ನು ನೀಡಿತ್ತು. ಜತೆಗೆ ಮಂಡಳಿಗೆ ಮುಜರಾಯಿ ಕಡೆಯಿಂದ 1.79 ಕೋಟಿ ಹಣವು ಬಂದಿತ್ತು. ಈ ಹಣವನ್ನು ಬೆನ್ಸೆನ್‌ ಟೌನ್‌ನ ಇಂಡಿಯನ್ ಬ್ಯಾಂಕ್‌ನ ಖಾತೆಗೆ ಜಮೆ ಮಾಡಲಾಗಿತ್ತು. ಆದರೆ ಈ ಹಣವನ್ನು 2016ರಲ್ಲಿ ಚಿಂತಾಮಣಿಯ ವಿಜಯ ಬ್ಯಾಂಕ್‌ ನಲ್ಲಿರುವ ವಕ್ಫ್ ಮಂಡಳಿ ಹೆಸರಿನ ಖಾತೆಗೆ ಹಣ ವರ್ಗಾವಣೆಯಾಗಿದೆ ಎಂದು ಆರೋಪಿಸಿದ್ದಾರೆ.

3. ಪ್ರಿಯಕರನ ಜೊತೆ ವಿವಾಹಿತೆ ಆತ್ಮಹತ್ಯೆ

ಬರ್ತ್ ಡೇ ಪಾರ್ಟಿ ಮಾಡಲು ಹೊರಟಿದ್ದ ಇಬ್ಬರು ಯುವಕರು ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಹೊರವಲಯಲ್ಲಿ ಅಪಘಾತ ನಡೆದಿದ್ದು ಬೆಂಗಳೂರಿನ ಕೆಂಪಾಪುರದ ನಿವಾಸಿಗಳಾದ ಸಿದ್ಧಾರ್ಥ್ ಮತ್ತು ಹರ್ಷ ಸಾವನ್ನಪ್ಪಿದ್ದಾರೆ. ಸೂಲಿಬೆಲೆ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮತ್ತೊಂಡೆದೆ ಆಷಾಢಕ್ಕೆ ತವರು ಮನೆಗೆ ಬಂದ ವಿವಾಹಿತೆಯೊಬ್ಬಳು ಪ್ರಿಯಕರನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ನಡೆದಿದೆ. ವಿವಾಹಿತ ಮಹಿಳೆ ಅನುಷಾ ಮತ್ತು ಆಕೆಯ ಪ್ರಿಯಕರ ವೇಣು ಇಬ್ಬರು ಸೊಂಟಕ್ಕೆ ವೇಲ್ ಬಿಗಿದುಕೊಂಡು ಕೃಷಿ ಹೊಂಡಕ್ಕೆ‌ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

4. ಜಿಂಕೆ ಬೇಟೆಯಾಡಿದ ಮೂವರು ಆರೋಪಿಗಳ ಬಂಧನ

ಧಾರವಾಡದ ಕಲಘಟಗಿ ವ್ಯಾಪ್ತಿಯಲ್ಲಿ ಜಿಂಕೆ ಬೇಟೆಯಾಡಿದ ಮೂವರು ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಮೂವರು ಆರೋಪಿಗಳು ರೈತರಾಗಿದ್ದು, ನಾಯಿಗಳ ಸಹಾಯದಿಂದ ಜಿಂಕೆಯನ್ನು ಬೇಟೆಯಾಡಿದ್ದರು. ಈ ಬಗ್ಗೆ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ದಿಢೀರ್‌ ತಪಾಸಣೆ ನಡೆಸಿ ವಾಹನಗಳನ್ನು ಪರಿಶೀಲಿಸಿದಾಗ ಜಿಂಕೆ ಮಾಂಸ ಇರುವುದು ಪತ್ತೆಯಾಗಿದೆ. ಈ ಸಂಬಂಧ ಮೂವರು ಬಂಧಿಸಲಾಗಿದ್ದು ಮತ್ತೆ ಮೂವರು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳು ಮಾಂಸವನ್ನು ತಮ್ಮ ಸಂಬಂಧಿಕರ ಮನೆಗೆ ಸಾಗಿಸುತ್ತಿದ್ದರು ಎಂದು ಅರಣ್ಯಾಧಿಕಾರಿ ಅರುಣ್ ಕುಮಾರ್ ಹೇಳಿದ್ದಾರೆ.

5. KSRTC ದರ ಏರಿಕೆ ಸಾಧ್ಯತೆ

ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ಬೆನ್ನಲ್ಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಟಿಕೆಟ್‌ ದರ ಏರಿಕೆ ವಿಚಾರವಾಗಿ KSRTC ಅಧ್ಯಕ್ಷ ಎಸ್‌.ಆರ್‌. ಶ್ರೀನಿವಾಸ್ ಸುಳಿವು ನೀಡಿದ್ದಾರೆ. ಇಂಧನ ದರ, ವಾಹನ ಬಿಡಿ ಭಾಗಗಳ ಬೆಲೆ ಏರಿಕೆ ಹಾಗೂ ಸಿಬ್ಬಂದಿ ವೇತನ ವೆಚ್ಚದಿಂದ ಕೆಎಸ್‌ಆರ್‌ಟಿಸಿ ನಷ್ಟ ಅನುಭವಿಸುತ್ತಿದೆ. ಹೀಗಾಗಿ ನಷ್ಟ ಸರಿದೂಗಿಸಲು ಟಿಕೆಟ್‌ ದರ ಏರಿಕೆ ಅನಿವಾರ್ಯ ಎಂದು ಹೇಳುವ ಮೂಲಕ ಬಸ್‌ ಟಿಕೆಟ್‌ ದರ ಖಚಿತ ಎಂಬ ಸುಳಿವು ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com