ಪಂಚೆಯುಟ್ಟ ರೈತನಿಗೆ ಪ್ರವೇಶ ನಿರಾಕರಿಸುವ ಮೂಲಕ ವಿವಾದಕ್ಕೀಡಾಗಿದ್ದ ಬೆಂಗಳೂರಿನ ಪ್ರತಿಷ್ಠಿತ GT Mallಗೆ ತೆರಿಗೆ ಪಾವಕಿ ಬಾಕಿ ಹಿನ್ನಲೆಯಲ್ಲಿ ಬೀಗ ಜಡಿಯಲಾಗಿದೆ. 1.78 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿದ್ದ ಹಿನ್ನಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ದಕ್ಷಿಣ ವಲಯ ವಿಭಾಗ ಮಾಲ್ ಅನ್ನು ಸೀಲ್ ಮಾಡಿದೆ. 2023-2024ರ ಆಸ್ತಿ ತೆರಿಗೆಯನ್ನು ಪಾವತಿಸಲು ಮಾಲ್ ಅಧಿಕಾರಿಗಳು ವಿಫಲರಾಗಿದ್ದು, ಆದ್ದರಿಂದ ನಾವು ಸೀಲಿಂಗ್‌ನಂತಹ ಕ್ರಮವನ್ನು ಪ್ರಾರಂಭಿಸುತ್ತಿದ್ದೇವೆ ಎಂದು ಬಿಬಿಎಂಪಿ ದಕ್ಷಿಣ ವಲಯ ಆಯುಕ್ತ ವಿನೋತ್ ಪ್ರಿಯಾ ಹೇಳಿದ್ದಾರೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕೂಡ ಮಾಲ್ ಅನ್ನು ಸೀಲ್ ಡೌನ್ ಮಾಡಲು ಸೂಚನೆ ನೀಡಿದ್ದಾರೆ. ಅದರಂತೆ ಕ್ರಮ ಕೈಗೊಂಡಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೂ ಮುನ್ನ, ಜಿಟಿ ಮಾಲ್ ನಲ್ಲಿ ಪಂಚೆ ಧರಿಸಿ ಬಂದಿದ್ದ ರೈತನಿಗೆ ಪ್ರವೇಶ ನಿರಾಕರಿಸಿ ಅವಮಾನಿಸಿದ ಘಟನೆ ವಿಧಾನಸಭೆಯಲ್ಲೂ ಪ್ರತಿಧ್ವನಿಸಿತು. ಜಿಟಿ ಮಾಲ್ ನ್ನು 7 ದಿನಗಳ ಕಾಲ ಮುಚ್ಚಿಸುವುದಕ್ಕೆ ಕಾನೂನಿನಲ್ಲಿ ಅವಕಾಶವಿದೆ ಎಂದು ಘಟನೆ ಬಗ್ಗೆ ಮಾತನಾಡಿದ ಸಚಿವ ಭೈರತಿ ಸುರೇಶ್ ಹೇಳಿದ್ದಾರೆ. ಫಕೀರಪ್ಪನಿಗೆ ಮಾಲ್ ಪ್ರವೇಶ ನಿರಾಕರಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲ್ ಮಾಲೀಕರು ಹಾಗೂ ಸೆಕ್ಯುರಿಟಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕನ್ನಡಿಗರಿಗೆ ಖಾಸಗಿ ಉದ್ಯಮಗಳಲ್ಲಿ ಶೇ.100ರಷ್ಟು ಮೀಸಲಾತಿ ನೀಡುವ ಮಸೂದೆಗೆ ರಾಜ್ಯ ಸರ್ಕಾರ ತಾತ್ಕಾಲಿಕವಾಗಿ ತಡೆದಿದೆ. ಈ ಬಗ್ಗೆ ಸದನದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮಸೂದೆಗೆ ಸಂಬಂಧಿಸಿದಂತೆ ಕೆಲವು ಗೊಂದಲ ಉಂಟಾದ ಹಿನ್ನೆಲೆಯಲ್ಲಿ ಮಸೂದೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ ಎಂದು ತಿಳಿಸಿದ್ದಾರೆ. ಅನುಮಾನಗಳನ್ನು ನಿವಾರಿಸಲು ಮುಂದಿನ ಸಂಪುಟ ಸಭೆಯಲ್ಲಿ ಮಸೂದೆಯನ್ನು ಚರ್ಚೆಗೆ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು. ಸೋಮವಾರ ನಡೆದ ಸಂಪುಟ ಸಭೆಯಲ್ಲಿ ಸಂಪೂರ್ಣ ಚರ್ಚೆ ನಡೆಯಲು ಸಾಧ್ಯವಾಗಲಿಲ್ಲ ಎಂದು ಸಿಎಂ ಹೇಳಿದ್ದಾರೆ. ಮಸೂದೆಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಟ್ವಿಟರ್ ನಲ್ಲಿ 3 ಬಾರಿ ಭಿನ್ನವಾದ ಮಾಹಿತಿ ಹಂಚಿಕೊಂಡಿದ್ದರು, ಮೊದಲ ಬಾರಿ ಹಂಚಿಕೊಂಡಿದ್ದ ಮಾಹಿತಿಯನ್ನು ಸಿಎಂ ಅಳಿಸಿದ್ದಾರೆ, ಸರ್ಕಾರದ ಈ ನಡೆ ರಾಜ್ಯದಲ್ಲಿ ತುಘಲಕ್ ಸರಕಾರ ಇದ್ದಂತೆ ಕಾಣುತ್ತಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಸದನದಲ್ಲಿ ಸರ್ಕಾರವನ್ನು ಟೀಕಿಸಿದ್ದರು.
ವಾಲ್ಮೀಕಿ ನಿಗಮದಲ್ಲಿ ಅಕ್ರಮ ಮತ್ತು ಮುಡಾ ಹಗರಣ ಪ್ರಕರಣ ಸಂಬಂಧ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಇಂದು ಪ್ರತಿಭಟನೆ ನಡೆಸಿತು. ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಫ್ರೀಡಂ ಪಾರ್ಕ್ ನಿಂದ ವಿಧಾನ ಸೌಧದವರೆಗೆ ಬಿಜೆಪಿ ಪ್ರತಿಭಟನಾ ರ್ಯಾಲಿ ನಡೆಸಿತು. ಈ ನಡುವೆ ವಿಧಾನಸೌಧಕ್ಕೆ ಮುತ್ತಿಗೆಗೆ ಯತ್ನಿಸಿದ ಬಿವೈ ವಿಜಯೇಂದ್ರ ಸೇರಿ ಹಲವು ನಾಯಕರು, ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದರು. ಸಿಎಂ ಸಿದ್ದರಾಮಯ್ಯಗೆ ಭಯ ಶುರುವಾಗಿದೆ. ಇದರಿಂದಾಗಿ ಇಡಿ ಮೇಲೆ ಆರೋಪ ಮಾಡುತ್ತಿದ್ದಾರೆ. ನಿಗಮದ ಭ್ರಷ್ಟಾಚಾರ ದೇಶಾದ್ಯಂತ ಚರ್ಚೆಯಾಗುತ್ತಿದೆ. ಕಾಂಗ್ರೆಸ್ ಗೆ ನೈತಿಕತೆ ಇದೆಯಾ..? ಎಂದು ಬಿಜೆಪಿ ವಿಜಯೇಂದ್ರ ಪ್ರಶ್ನಿಸಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ಪವಿತ್ರಾ ಗೌಡ ಹಾಗೂ ಇತರ 15 ಆರೋಪಿಗಳ ನ್ಯಾಯಾಂಗ ಬಂಧನವನ್ನು ವಿಶೇಷ ನ್ಯಾಯಾಲಯ ಆಗಸ್ಟ್ 1ವರೆಗೆ ವಿಸ್ತರಿಸಿದೆ. ಆರೋಪಿಗಳ ನ್ಯಾಯಾಂಗ ಬಂಧನ ಇಂದು ಅಂತ್ಯಗೊಂಡಿದ್ದರಿಂದ ಅವರನ್ನು ಬೆಂಗಳೂರು ಮತ್ತು ತುಮಕೂರು ಕಾರಾಗೃಹದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು. ಮನೆ ಆಹಾರ, ಹಾಸಿಗೆ ಮತ್ತು ಪುಸ್ತಕಗಳನ್ನು ತರಿಸಿಕೊಳ್ಳಲು ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ದರ್ಶನ್ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆ ಶುಕ್ರವಾರ ನಡೆಯಲಿದೆ.
ಬಹುಕೋಟಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಇನ್ನೂ ಐದು ದಿನಗಳ ಜಾರಿ ನಿರ್ದೇಶನಾಲಯ ಕಸ್ಟಡಿಗೆ ಒಪ್ಪಿಸಿಲಾಗಿದೆ. ಕಸ್ಟಡಿ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ, ಅವರನ್ನು ಮತ್ತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಇಡಿ ಹಾಜರುಪಡಿಸಲಾಗಿತ್ತು. ನಾಗೇಂದ್ರ ಅವರನ್ನು ತನಿಖೆಗೆ ಒಳಪಡಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಕಸ್ಟಡಿಗೆ ಒಪ್ಪಿಸಬೇಕೆಂದು ಇಡಿ ಪರ ವಕೀಲರು ನ್ಯಾಯಾಧೀಶರಿಗೆ ಮನವಿ ಮಾಡಿದರು. ಗುರುವಾರ ಸೇರಿ ಜುಲೈ 22 ರವರೆಗೂ ಇಡಿ ವಶಕ್ಕೆ ನೀಡಿ 82ನೇ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಆದೇಶ ಹೊರಡಿಸಿದರು.
Advertisement