
ಬೆಂಗಳೂರು: ಎರಡು ದಿನಗಳ ಹಿಂದೆ ಭಾರೀ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೃಹತ್ ಗುಡ್ಡ ಕುಸಿದು ಬಿದ್ದು ಸುಮಾರು 7 ಮಂದಿ ಸಾವನ್ನಪ್ಪಿದ್ದ ಉತ್ತರ ಕನ್ನಡ ಜಿಲ್ಲೆಯ ಶಿರೂರು ಗ್ರಾಮದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯ ವೇಳೆ ಇಂದು ಮತ್ತೆ ಎರಡು ಮೃತದೇಹಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ಘಟನೆ ನಡೆದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸ್ಥಳೀಯ ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಮತ್ತು ಇತರ ಏಜೆನ್ಸಿಗಳ ಅಧಿಕಾರಿಗಳು ಮಳೆಯ ನಡುವೆ ತೀವ್ರವಾದ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಯ ನಂತರ ಮಂಗಳವಾರ ಸಂಜೆಯ ವೇಳೆಗೆ ನಾಲ್ಕು ಮೃತದೇಹಗಳನ್ನು ಹೊರತೆಗೆಯಲಾಯಿತು.
ಕಳೆದ ಎರಡು ದಿನಗಳಿಂದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಎಲ್ಲಾ ಏಜೆನ್ಸಿಗಳ ಸಹಾಯದಿಂದ ನಾವು ಇದುವರೆಗೆ ಆರು ಮೃತದೇಹಗಳನ್ನು ಹೊರತೆಗೆದಿದ್ದೇವೆ ಎಂದು ಪೊಲೀಸ್ ಅಧೀಕ್ಷಕ (ಕಾರವಾರ) ನಾರಾಯಣ ಎಂ ತಿಳಿಸಿದ್ದಾರೆ.
ಮೃತ ನಾಲ್ವರಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಟೀ ಅಂಗಡಿ ನಡೆಸುತ್ತಿದ್ದ ಒಂದೇ ಕುಟುಂಬದವರಾಗಿದ್ದಾರೆ. ಮೃತರನ್ನು 47 ವರ್ಷದ ಲಕ್ಷ್ಮಣ್ ನಾಯ್ಕ್, ಅವರ ಪತ್ನಿ 36 ವರ್ಷದ ಶಾಂತಿ ನಾಯ್ಕ್ ಮತ್ತು ಅವರ ಮಕ್ಕಳಾದ ರೋಷನ್ (11), ಆವಂತಿಕಾ (6) ಎಂದು ಗುರುತಿಸಲಾಗಿದೆ. ಮೃತ ಇನ್ನಿಬ್ಬರನ್ನು ಚಾಲಕರು ಎಂದು ಗುರುತಿಸಲಾಗಿದೆ. ಅಧಿಕಾರಿಗಳ ಪ್ರಕಾರ, ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಈ ಪೈಕಿ ಇದುವರೆಗೆ ಆರು ಮಂದಿಯ ಮೃತದೇಹಗಳು ಪತ್ತೆಯಾಗಿವೆ. ಎಲ್ಲಾ ಮೃತದೇಹಗಳು ಪತ್ತೆಯಾಗುವವರೆಗೂ ಶೋಧ ಕಾರ್ಯಾಚರಣೆ ಮುಂದುವರಿಯಲಿದೆ.
ಏತನ್ಮಧ್ಯೆ, ಭಾರೀ ಮಳೆಯಿಂದಾಗಿ ಗುಡ್ಡ ಕುಸಿದು ರಸ್ತೆ ಮೇಲ್ಮೈಗೆ ತೀವ್ರ ಹಾನಿಯಾಗಿರುವ ಕಾರಣ ಚಿಕ್ಕಮಗಳೂರು ತಾಲೂಕಿನ ಸೀತಾಲಯನಗಿರಿ-ಮುಳ್ಳಯ್ಯನಗಿರಿ ಪ್ರದೇಶದಲ್ಲಿ ಜುಲೈ 22ರವರೆಗೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.
Advertisement