
ಬೆಂಗಳೂರು: ಮಳೆ ಹಾನಿಯಾಗಿರುವ ಅಂಕೋಲಾ ಸೇರಿದಂತೆ ಇತರ ಕಡೆಗಳಿಗೆ ಕುಮಾರಸ್ವಾಮಿ ಭೇಟಿ ಬಗ್ಗೆ ಪ್ರತಿಕ್ರಿಯಿಸಿರುವ ಡಿ.ಕೆ ಶಿವಕುಮಾರ್, ಅವರು ಯಾವ ಫೀಲ್ಡಿಗೆ ಇಳಿದಿದ್ದಾರೆ? ಅವರು ಸಿಆರ್ ಪಿಎಫ್ ಪಡೆ ಕರೆಸಿ, ತೆರವು ಕಾರ್ಯಕ್ಕೆ ನೆರವಾಗಿದ್ದರೆ, ಫೀಲ್ಡಿಗೆ ಇಳಿದಿದ್ದಾರೆ ಎಂದು ಹೇಳಬಹುದಿತ್ತು.
ಅನಾಹುತ ನಡೆದ ಒಂದೇ ತಾಸಿನಲ್ಲಿ ನಮ್ಮ ಸಚಿವರನ್ನು ಸ್ಥಳಕ್ಕೆ ಕಳುಹಿಸಿದ್ದೇವೆ. ನಮ್ಮ ಸಚಿವರಾದ ಮಂಕಳಾ ವೈದ್ಯ, ಕೃಷ್ಣ ಭೈರೇಗೌಡರು ಸ್ಥಳಕ್ಕೆ ಹೋಗಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದ್ದಾರೆ. ರಾಜ್ಯ ಸರ್ಕಾರ ತನ್ನ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುತ್ತಿದೆ. ಕುಮಾರಸ್ವಾಮಿ ಅವರು ಭೇಟಿ ನೀಡಿದ್ದಾರೆ. ಅವರು ಭೇಟಿ ನೀಡಿರುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಈ ವಿಚಾರದಲ್ಲಿ ಈಗ ರಾಜಕಾರಣ ಮಾಡುವುದು ಬೇಡ. ಮೊದಲು ಜನರ ರಕ್ಷಣೆ ಮಾಡೋಣ ಎಂದರು. ನಿಗಮಗಳಲ್ಲಿ ಪಾರದರ್ಶಕತೆ ತರಲು ಮುಂದಾಗಿದ್ದು, ನಾವು ನಮ್ಮ ಅಧ್ಯಕ್ಷರುಗಳಿಗೆ ಈ ವಿಚಾರವಾಗಿ ಹೇಳಿದ್ದೆವು. ನಿಗಮಗಳಲ್ಲಿ ಕೆಲವು ಅಧಿಕಾರಿಗಳು ಖದೀಮರು ಸೇರಿಕೊಂಡಿದ್ದಾರೆ. ಬಿಜೆಪಿ ಆಡಳಿತದಲ್ಲೂ ತಿಂದು ಈಗಲೂ ಸೇರಿಕೊಂಡಿದ್ದಾರೆ. ಬಿಜೆಪಿ ಅವಧಿಯಲ್ಲಿ 300 ಕೋಟಿಗೂ ಹೆಚ್ಚು ಅಕ್ರಮ ನಡೆದಿದೆ. ಅದೇ ಅಧಿಕಾರಿಗಳು ಈಗ ಇದ್ದು, ಡಿ ವರ್ಗದ ನೌಕರರನ್ನು ಎಂಡಿ ಮಾಡಿದ್ದಾರೆ. ಅಂತಹ ಪ್ರಕರಣಗಳನ್ನು ಪರಿಶೀಲನೆ ಮಾಡಲಾಗುವುದು. ಹೀಗಾಗಿ ಆರ್ಥಿಕ ಇಲಾಖೆ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಮುಂದಾಗಿದೆ ಎಂದರು.
ಕಾಂಗ್ರೆಸ್ ಪಕ್ಷದ ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸಭೆ ಬಗ್ಗೆ ಮಾತನಾಡಿದ ಡಿಸಿಎಂ, ಬ್ಲಾಕ್ ಮಟ್ಟದಲ್ಲಿ ಪಕ್ಷವನ್ನು ಪುನರ್ ರಚನೆ ಮಾಡಬೇಕಿದೆ. ಹೀಗಿರುವ ಅಧ್ಯಕ್ಷರುಗಳು ಬಹಳ ವರ್ಷಗಳಿಂದ ಪಕ್ಷಕ್ಕೆ ದುಡಿದಿದ್ದಾರೆ. ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕಿದೆ. ಕೆಲವರಿಗೆ ಬಡ್ತಿ ನೀಡಬೇಕು. ಮತ್ತೆ ಕೆಲವರಿಗೆ ಜವಾಬ್ದಾರಿ ನೀಡಬೇಕಿದೆ. ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಚುನಾವಣೆಗೆ ನ್ಯಾಯಾಲಯ ಯಾವಾಗ ಬೇಕಾದರೂ ಸೂಚನೆ ನೀಡಬಹುದು. ಅವುಗಳಿಗೆ ತಯಾರಿ ಮಾಡಿಕೊಳ್ಳಬೇಕು. ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ. ಈ ಎಲ್ಲಾ ವಿಚಾರಗಳನ್ನು ಚರ್ಚೆ ಮಾಡಿ, ಮಾರ್ಗದರ್ಶನ ನೀಡಲು ಇಂದು ಜಿಲ್ಲಾ ಹಾಗೂ ಬ್ಲಾಕ್ ಮಟ್ಟದ ಅಧ್ಯಕ್ಷರ ಸಭೆ ಕರೆದಿದ್ದೇವೆ ಎಂದು ತಿಳಿಸಿದರು.
Advertisement