
ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಶಿರೂರು ಗ್ರಾಮದಲ್ಲಿ ಸಂಭವಿಸಿದ ಭಾರೀ ಭೂಕುಸಿತದ ನಂತರ ರಸ್ತೆಯಲ್ಲಿ ಬಿದ್ದಿದ ಮಣ್ಣನ್ನು ತೆರವುಗೊಳಿಸಲಾಗಿದೆ. ಆದರೆ ಮಣಿನಡಿಯಲ್ಲಿ ಸಿಲುಕಿದವರು ಅಥವಾ ಟ್ರಕ್ ಪತ್ತೆಯಾಗಿಲ್ಲ. ಹೀಗಾಗಿ ನಾಪತ್ತೆಯಾದ ಮೂವರ ಪತ್ತೆಗಾಗಿ ಗಂಗಾವಳಿ ನದಿಯತ್ತ ಗಮನ ಹರಿಸಲಾಗಿದ್ದು, ಅಪರೇಷನ್ ಗಂಗಾವಳಿ ಆರಂಭಿಸಲಾಗಿದೆ.
ಶಿರೂರು ಗುಡ್ಡಕುಸಿತ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರಿದಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
"ರಸ್ತೆಯಲ್ಲಿ ಬಿದ್ದಿದ್ದ ಮಣ್ಣಿನಡಿಯಲ್ಲಿ ಶೋಧ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ನಮಗೆ ಯಾವುದೇ ಬದುಕುಳಿದವರು ಅಥವಾ ಟ್ರಕ್ ಪತ್ತೆಯಾಗಿಲ್ಲ. ನಾವು ನದಿ ಮತ್ತು ತೆರೆದ ನೀರಿನಲ್ಲಿ ಕಾರ್ಯಾಚರಣೆ ಆರಂಭಿಸಿದ್ದು, ಗಂಗಾವಳಿ ನದಿಯತ್ತ ಗಮನ ಹರಿಸಲಾಗಿದೆ. ನದಿಯ ಮುಂಭಾಗವನ್ನು ಡೀಪ್ ಡೈವರ್‌ಗಳು ಟ್ರಕ್ ಕ್ಯಾಬಿನ್ ಪತ್ತೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಸಚಿವರು ಹೇಳಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್), ರಾಜ್ಯ ವಿಪತ್ತು ನಿರ್ವಹಣಾ ಪಡೆ(ಎಸ್‌ಡಿಆರ್‌ಎಫ್), ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಹಾಗೂ ನೌಕಾಪಡೆ ಜಂಟಿಯಾಗಿ ಕಾರ್ಯಾಚರಣೆ ಮುಂದುವರೆಸಿವೆ.
ಭಾರತೀಯ ಸೇನೆಯ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ತಂಡವು ಬೆಳಗಾವಿಯ ಮರಾಠಾ ಲೈಟ್ ಇನ್‌ಫೆಂಟ್ರಿ ರೆಜಿಮೆಂಟ್‌ನ ಅಧಿಕಾರಿ, ಇಬ್ಬರು ಜೂನಿಯರ್ ಕಮಿಷನ್ಡ್ ಅಧಿಕಾರಿಗಳು ಮತ್ತು 55 ಜನ ಇತರರು, ಪುಣೆಯ ಮಿಲಿಟರಿ ಇಂಜಿನಿಯರಿಂಗ್ ಕಾಲೇಜಿನ ಒಬ್ಬ ಜೂನಿಯರ್ ಕಮಿಷನ್ಡ್ ಅಧಿಕಾರಿ ಸಹ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದು ಇಂದಿಗೆ 7 ದಿನವಾಗಿದೆ. ದುರಂತದಲ್ಲಿ ನಾಪತ್ತೆಯಾದ 10 ಜನರಲ್ಲಿ ಇದುವರೆಗೆ 7 ಮಂದಿಯ ಶವ ಪತ್ತೆಯಾಗಿದೆ. ಇನ್ನುಳಿದ ಮೂವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಇಂದು ಕಾರ್ಯಾಚರಣೆಗೆ ಸೇನಾ ಪಡೆ ಸಾಥ್ ನೀಡಿದೆ.
ಇನ್ನೂ ಕಾರ್ಯಚರಣೆ ಮುಂದುವರಿದ ಪರಿಣಾಮ ಹೆದ್ದಾರಿ ಪಕ್ಕದಲ್ಲೇ ನೂರಾರು ಲಾರಿಗಳು ನಿಂತುಕೊಂಡಿವೆ. ಉಪಹಾರ, ಊಟ, ಶೌಚಾಲಯಕ್ಕೂ ಲಾರಿ ಚಾಲಕರು ಪರದಾಡುವಂತಾಗಿದೆ.
Advertisement