ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಪತ್ತೆಹಚ್ಚಲು ಕ್ರಮ: ಮನೆ ಮನೆಗೆ ತೆರಳಿ ಸಮೀಕ್ಷೆ
ಬೆಂಗಳೂರು: ಶಾಲೆಯಿಂದ ಹೊರಗುಳಿದಿರುವ 6 ರಿಂದ 18 ವರ್ಷದೊಳಗಿನ ಮಕ್ಕಳನ್ನು ಪತ್ತೆ ಹಚ್ಚಲು ರಾಜ್ಯ ಸರ್ಕಾರ ಮೊಟ್ಟ ಮೊದಲ ಬಾರಿಗೆ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಲಿದೆ. ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಬಗ್ಗೆ ಸಮೀಕ್ಷೆ ನಡೆಸುವಂತೆ ಇತ್ತೀಚೆಗೆ ಹೈಕೋರ್ಟ್ ಆದೇಶ ನೀಡಿತ್ತು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ(RDPR) ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (DSEL) ಸಹಯೋಗದೊಂದಿಗೆ ಸಮೀಕ್ಷೆ ನಡೆಸಲಾಗುತ್ತದೆ. ಮೊಬೈಲ್ ಆ್ಯಪ್ ಬಳಸಿ ಸಮೀಕ್ಷೆ ನಡೆಸಲು ಸ್ವಸಹಾಯ ಗುಂಪುಗಳ (SHG) ಮಹಿಳೆಯರನ್ನು ಗಣತಿದಾರರನ್ನಾಗಿ ನೇಮಿಸಲಾಗುತ್ತದೆ.
ಗ್ರಾಮ ಪಂಚಾಯ್ತಿಗಳ ಮುಂದಾಳತ್ವ: ರಾಜ್ಯದಲ್ಲಿನ ಗ್ರಾಮ ಪಂಚಾಯಿತಿಗಳು ಸಮೀಕ್ಷೆಯ ಮುಂದಾಳತ್ವ ವಹಿಸುತ್ತವೆ. ಒಂದು ಗ್ರಾಮದಲ್ಲಿ 300 ಮನೆಗಳನ್ನು ಸಮೀಕ್ಷೆ ಮಾಡಲು ಎಸ್‌ಎಸ್‌ಎಲ್‌ಸಿ ಅರ್ಹ ಮಹಿಳೆಯರನ್ನು ಸ್ವಸಹಾಯ ಗುಂಪುಗಳಿಂದ ಆಯ್ಕೆ ಮಾಡುತ್ತವೆ. ನಾಗರಿಕ ಸೇವೆಗಳ ಎಲೆಕ್ಟ್ರಾನಿಕ್ ಡೆಲಿವರಿ ನಿರ್ದೇಶನಾಲಯ (EDCS) ಮೊಬೈಲ್ ಅಪ್ಲಿಕೇಶನ್ ನ್ನು ಅಭಿವೃದ್ಧಿಪಡಿಸಿದೆ, ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಸಮೀಕ್ಷೆ ಮಾಡುತ್ತದೆ ಎಂದು ಇಲಾಖೆಯ ಸುತ್ತೋಲೆಯಲ್ಲಿ ವಿವರಿಸಲಾಗಿದೆ. ಮಕ್ಕಳ ಸರಿಯಾದ ವಿವರಗಳನ್ನು ನಮೂದಿಸಲು ಶಿಕ್ಷಣ ಇಲಾಖೆಯಿಂದ ಮಹಿಳೆಯರಿಗೆ ತರಬೇತಿ ನೀಡಲಾಗುತ್ತದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಡಿಎಸ್ ಇಎಲ್ ಒದಗಿಸಿದ ಮಾಹಿತಿಯ ಪ್ರಕಾರ, 2022-2023ರ ಅವಧಿಯಲ್ಲಿ ಒಟ್ಟು 18,461 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದರು. ಅತಿ ಹೆಚ್ಚು ಡ್ರಾಪ್ಔಟ್‌ಗಳಲ್ಲಿ ಕರ್ನಾಟಕದ ರಾಜ್ಯ ದೇಶದಲ್ಲಿ ಏಳನೇ ಸ್ಥಾನದಲ್ಲಿದೆ. 2017-2023 ರ ನಡುವೆ - ಆರು ವರ್ಷಗಳ ಅವಧಿ - 71,945 ವಿದ್ಯಾರ್ಥಿಗಳು ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದಾರೆ, ಸಮಗ್ರ ಶಿಕ್ಷಣ ಕರ್ನಾಟಕ (SSK) ಯ ಅಂಕಿಅಂಶ ಇದನ್ನು ಬಹಿರಂಗಪಡಿಸುತ್ತದೆ.
ಹೈಕೋರ್ಟ್ ನಿರ್ದೇಶನದಂತೆ ಸಮೀಕ್ಷೆಯನ್ನು ಪೂರ್ಣಗೊಳಿಸಲು ಇಲಾಖೆಯು ಈ ತಿಂಗಳಾಂತ್ಯದ ಗಡುವನ್ನು ನಿಗದಿಪಡಿಸಿದೆ. ಸಮೀಕ್ಷೆಯನ್ನು ನಡೆಸುವ ಮಹಿಳೆಯರಿಗೆ ಅವರ ಸಮಯಕ್ಕೆ ಸಂಭಾವನೆ ಮತ್ತು ಇಂಟರ್ನೆಟ್ ವೆಚ್ಚಗಳಿಗಾಗಿ ಭತ್ಯೆಯನ್ನು ನೀಡಲಾಗುತ್ತದೆ.
ಈ ಜಂಟಿ ಉಪಕ್ರಮವು ಪ್ರತಿ ಮಗುವಿನ ಶಿಕ್ಷಣದ ಹಕ್ಕನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಪರಿಣಾಮವನ್ನು ಇನ್ನಷ್ಟು ಹೆಚ್ಚಿಸಲು, ಶಾಲೆಗಳು, ಯುವ ಗುಂಪುಗಳು ಮತ್ತು ಇತರ ಸಂಬಂಧಪಟ್ಟವರಲ್ಲಿ ಕೆಲಸ ಮಾಡುವ ಎನ್‌ಜಿಒಗಳನ್ನು ಒಳಗೊಳ್ಳುವುದು ಅತ್ಯಗತ್ಯ. ಹೆಚ್ಚುವರಿಯಾಗಿ, ಮೂಲ ಕಾರಣಗಳನ್ನು ಪರಿಹರಿಸುವ ಮೂಲಕ ಮತ್ತು ಬೆಂಬಲ ಕ್ರಮಗಳನ್ನು ಒದಗಿಸುವ ಮೂಲಕ ಶಾಲೆ ಬಿಡುವುದನ್ನು ತಡೆಗಟ್ಟುವ ಸಮಗ್ರ ಯೋಜನೆಯು ಪ್ರಗತಿಯನ್ನು ಉಳಿಸಿಕೊಳ್ಳಲು ಮತ್ತು ದೇಶದ ಭವಿಷ್ಯದ ಪ್ರಜೆಗಳ ಜೀವನದಲ್ಲಿ ಶಾಶ್ವತವಾದ ವ್ಯತ್ಯಾಸವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಎಂದು ಚೈಲ್ಡ್ ರೈಟ್ಸ್ ಟ್ರಸ್ಟ್ (ಸಿಆರ್‌ಟಿ) ನಿರ್ದೇಶಕ ನಾಗಸಿಂಹ ರಾವ್ ತಿಳಿಸಿದ್ದಾರೆ.
ಶಾಲೆಯಿಂದ ಹೊರಗುಳಿಯುವುದು ಮತ್ತು ಬಾಲ ಕಾರ್ಮಿಕರು ಒಂದೇ ನಾಣ್ಯದ ಎರಡು ಮುಖಗಳು ಎಂದು ಅವರು ಹೇಳಿದರು. ಕುಟುಂಬಗಳಲ್ಲಿ ಮಕ್ಕಳನ್ನು ಆದಾಯದ ಮೂಲವಾಗಿ ದುಡಿಸುವ ಬಗ್ಗೆ ಸರ್ಕಾರ ಗಮನ ಹರಿಸಬೇಕಾಗಿದೆ ಎಂದರು.
ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆಗೆ ಬಿಬಿಎಂಪಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ನಗರದಲ್ಲಿ ಶಾಲೆ ಬಿಟ್ಟ ಮಕ್ಕಳ ಸಂಖ್ಯೆಯನ್ನು ಕಂಡುಹಿಡಿಯಲು ಸಮೀಕ್ಷೆ ನಡೆಸಲು ಸಿದ್ಧವಾಗಿದೆ. ಮಾಹಿತಿ ಪ್ರಕಾರ ಪಾಲಿಕೆ ಸಮೀಕ್ಷೆಗೆ ಸುಮಾರು 3 ಕೋಟಿ ರೂಪಾಯಿ ವೆಚ್ಚ ಮಾಡಲಿದೆ. ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಾಯೋಗಿಕವಾಗಿ ಸಮೀಕ್ಷೆ ಆರಂಭಿಸಲಾಗುವುದು ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ಅಂಬೇಡ್ಕರ್ ಕಾಲೋನಿ, ನಾರಾಯಣರಾವ್ ಕಾಲೋನಿ, ವಿಎಸ್‌ಟಿ ಕಾಲೋನಿ, ಸಂಜಯ್ ಗಾಂಧಿ ನಗರ ಮತ್ತು ಸುಭಾಷ್ ನಗರ ವಾರ್ಡ್‌ನ ಪ್ರದೇಶಗಳನ್ನು ಆಯ್ಕೆ ಮಾಡಲಾಗಿದೆ. ಅಲ್ಪಾವಧಿಯ ಟೆಂಡರ್ ಆಹ್ವಾನಿಸಲಾಗಿದೆ ಮತ್ತು ಸಮೀಕ್ಷೆಗಾಗಿ ಎನ್‌ಜಿಒಗಳಿಗೆ ಪ್ರತಿ ಮನೆಗೆ 10 ರೂಪಾಯಿಗಳಂತೆ ನೀಡಲಾಗುವುದು ಎಂದು ಗಿರಿನಾಥ್ ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ