
ಬೆಂಗಳೂರು: ಹಿರಿಯ ಸಂಶೋಧಕ ಎಂ ಎಂ ಕಲಬುರ್ಗಿ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳಾದ ವಾಸುದೇವ್ ಭಗವಾನ್ ಸೂರ್ಯವಂಶಿ ಮತ್ತು ಅಮಿತ್ ಬದ್ದಿ ಅವರಿಗೆ ಕರ್ನಾಟಕ ಹೈಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ.
ಜಾಮೀನು ಕೋರಿ ಇಬ್ಬರೂ ಆರೋಪಿಗಳು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ಜಿ ಉಮಾ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ನೀಡಿದೆ.
ಎಂಎಂ ಕಲಬುರ್ಗಿ ಕೊಲೆಗೆ ಶೂಟರ್‌ಗಳು ಬಳಸಿದ ದ್ವಿಚಕ್ರ ವಾಹನವನ್ನು ಕಳವು ಮಾಡಲಾದ ಆರೋಪ ಮಾತ್ರ ಅರ್ಜಿದಾರರ ಮೇಲಿದೆ. ಈ ಸಂಬಂಧ ಆರೋಪಿಗಳು ಕಳೆದ ಆರು ವರ್ಷಗಳಿಂದ ಜೈಲಿನಲ್ಲಿದ್ದಾರೆ ಮತ್ತು ಕಳ್ಳತನ ಪ್ರಕರಣವನ್ನು ವರ್ಷಗಳ ಹಿಂದೆಯೇ ಬಗೆಹರಿಸಲಾಗಿದೆ ಎಂಬುದನ್ನು ನ್ಯಾಯಮೂರ್ತಿ ಎಂ ಜಿ ಉಮಾ ಗಮನಿಸಿದರು.
ಈ ಸಂಬಂಧ ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಆರಂಭಿಸುವುದಾಗಿ ರಾಜ್ಯ ಸರ್ಕಾರ ಹೇಳಿತ್ತು. ಆದರೆ, ಈವರೆಗೂ ಆ ಕೆಲಸವಾಗಿಲ್ಲ. ಕಲಬುರ್ಗಿ ಅವರ ಪ್ರಕರಣದಲ್ಲಿ 138 ಸಾಕ್ಷ್ಯಗಳ ಪೈಕಿ ಕೇವಲ 10 ಸಾಕ್ಷ್ಯಗಳ ವಿಚಾರಣೆ ಮಾತ್ರ ಈಗ ಮುಗಿದಿದೆ. ಉಳಿದ ಸಾಕ್ಷಿಗಳ ವಿಚಾರಣೆ ಸದ್ಯಕ್ಕೆ ಮುಗಿಯುವ ಸಾಧ್ಯತೆ ಇಲ್ಲ. ಹೀಗಾಗಿ, ಅರ್ಜಿದಾರರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಆರೋಪಿಗಳ ಪರ ವಕೀಲ ಎಂ. ಅರುಣ್ ಶ್ಯಾಮ್ ಅವರು ಕೋರಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸರ್ಕಾರದ ಪರ ವಕೀಲರು, ಇಬ್ಬರೂ ಆರೋಪಿಗಳ ವಿರುದ್ಧ ಗಂಭೀರ ಆರೋಪವಿದ್ದು, ಜಾಮೀನು ಮಂಜೂರು ಮಾಡಿದಲ್ಲಿ ಇಬ್ಬರ ವಿಚಾರಣೆಗೆ ಅಡ್ಡಿಯಾಗಲಿದೆ ಎಂದು ಹೇಳಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಎಂ. ಜಿ ಉಮಾ ಅವರು ಆರೋಪಿಗೆ ಜಾಮೀನು ಮಂಜೂರು ಮಾಡಿ ಆದೇಶಿಸಿದ್ದಾರೆ.
Advertisement