ಬಜೆಟ್ ನಲ್ಲಿ ರಾಜ್ಯಕ್ಕೆ ಚೊಂಬು- ಸಿಎಂ; ED ಅಧಿಕಾರಿಗಳ ವಿರುದ್ಧ ರಾಜ್ಯದಲ್ಲಿ FIR!; ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಗೆ ಸರ್ಕಾರದ ಒಪ್ಪಿಗೆ- ಇವು ಇಂದಿನ ಪ್ರಮುಖ ಸುದ್ದಿಗಳು 23-07-2024

File pic
ಇಂದಿನ ಪ್ರಮುಖ ಸುದ್ದಿಗಳು (ಸಂಗ್ರಹ ಚಿತ್ರ)online desk

1. ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆಚೊಂಬು: ಸಿಎಂ ಟೀಕೆ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು 2024-25 ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ನ್ನು ಇಂದು ಸಂಸತ್ ನಲ್ಲಿ ಮಂಡಿಸಿದರು. 7 ನೇ ಬಾರಿ ಬಜೆಟ್ ಮಂಡಿಸಿದ ವಿತ್ತ ಸಚಿವರು, ಕೃಷಿ, ಉದ್ಯೋಗ ಸೃಷ್ಟಿ, ಶಿಕ್ಷಣ ಕ್ಷೇತ್ರಕ್ಕೆ, ಮೂಲಸೌಕರ್ಯ ಅಭಿವೃದ್ಧಿ, ಸಾರಿಗೆ ಸಂಪರ್ಕ, ಇಂಧನ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಬಿಹಾರ, ಆಂಧ್ರಕ್ಕೆ ಹೆಚ್ಚಿನ ಅನುದಾನ ಘೋಷಿಸಿದ್ದಾರೆ. ಬಜೆಟ್ ನಲ್ಲಿ ತೆರಿಗೆ ಪದ್ಧತಿ ಮತ್ತಷ್ಟು ಸರಳಗೊಳಿಸಲಾಗಿದ್ದು, ಇ-ಕಾಮರ್ಸ್‌ ಮೇಲಿನ TDS ಇಳಿಕೆ ಮಾಡಲಾಗಿದ್ದರೆ, ವೇತನ ಪಡೆಯುವವರ ಸ್ಟಾಂಡರ್ಡ್‌ ಡಿಡಕ್ಷನ್‌ ಮೊತ್ತವನ್ನು 50 ಸಾವಿರ ರೂ.ನಿಂದ 75 ಸಾವಿರ ರೂಗೆ ಏರಿಕೆ ಮಾಡಿದ್ದು, ಇದರಿಂದ 4 ಕೋಟಿ ಜನರಿಗೆ ಅನುಕೂಲವಾಗಲಿದೆ ಎಂದು ಸಚಿವರು ಹೇಳಿದ್ದಾರೆ.

ಹೊಸ ತೆರಿಗೆ ಸ್ಲ್ಯಾಬ್ ನ್ನು ಪ್ರಕಟಿಸಿರುವ ವಿತ್ತ ಸಚಿವರು, ಹೊಸ ತೆರಿಗೆ ಪದ್ಧತಿಯಲ್ಲಿ ಕೂಡ ಬದಲಾವಣೆ ಮಾಡಲಾಗಿದ್ದು, 17,500 ರೂ. ತೆರಿಗೆ ಉಳಿತಾಯ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ. ಕೇಂದ್ರ ಬಜೆಟ್ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಬಜೆಟ್ ನಲ್ಲಿ ಕರ್ನಾಟಕಕ್ಕೆ ಚೊಂಬು ಕೊಟ್ಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ನಿರ್ಮಲಾ ‌ಸೀತಾರಾಮನ್ ಕರ್ನಾಟಕದಿಂದ ರಾಜ್ಯಸಭೆಗೆ ಹೋದವರು. ಕರ್ನಾಟಕದ ಹಿತ ಕಾಪಾಡಿ, ನ್ಯಾಯ ಕೊಡ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ನಿರಾಸೆ ಮಾಡಿದ್ದಾರೆ. ಆಂಧ್ರಪ್ರದೇಶ-ಬಿಹಾರ ರಾಜ್ಯಗಳಿಗೆ ವಿಶೇಷ ಅನುದಾನ ಕೊಟ್ಟಿದ್ದಾರೆ, ನರೇಂದ್ರ ಮೋದಿ ಪ್ರಧಾನಿಯಾಗಿ ಉಳಿಯಬೇಕಂದ್ರೆ ಈ ರಾಜ್ಯಗಳ ಸಹಕಾರ ಬೇಕು, ಅದಕ್ಕಾಗಿ ವಿಶೇಷ ಅನುದಾನವನ್ನ ಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.

2. ಅಂಕೋಲ ಭೂಕುಸಿತ- 8 ದಿನಗಳ ಬಳಿಕ ಮಹಿಳೆಯ ಮೃತದೇಹ ಪತ್ತೆ

ಅಂಕೋಲದ ಶಿರೂರಿನಲ್ಲಿ ಭೂಕುಸಿತ ಸಂಭವಿಸಿದ್ದ ಪ್ರದೇಶದಲ್ಲಿ 8 ದಿನಗಳ ಬಳಿಕ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದೆ. ದುರಂತ ಸಂಭವಿಸಿದ ದಿನ ಮನೆಯಲ್ಲಿ ಒಬ್ಬರೇ ಇದ್ದ ಸಣ್ಣಿ ಹನುಮಂತಗೌಡ ಎಂಬ ಮಹಿಳೆ ಗುಡ್ಡ ಕುಸಿತದ ಪರಿಣಾಮ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಶೋಧ ಕಾರ್ಯಾಚರಣೆ ವೇಳೆ ಗಂಗಕೊಳ್ಳ ಎಂದು ಕರೆಯಲ್ಪಡುವ ಗಂಗಾವಳಿ ನದಿಯ 15 ಕಿಲೋಮೀಟರ್ ದೂರದಲ್ಲಿ ಶವ ಪತ್ತೆಯಾಗಿದೆ. ಈ ದುರಂತದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಈವರೆಗೆ 8 ಮೃತದೇಹಗಳು ಪತ್ತೆಯಾಗಿವೆ.

3. ಜಾನಪದ ಹಾಡುಗಾರ ಸಾಹಿತಿ ಆಲೂರು ನಾಗಪ್ಪ ನಿಧನ

ಪ್ರಸಿದ್ಧ ಜಾನಪದ ಹಾಡುಗಾರ, ಸಾಹಿತಿ, ಆಲೂರು ನಾಗಪ್ಪ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಇಂದು ನಿಧನರಾದರು. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ನಾಗಪ್ಪ ಚಿಕಿತ್ಸೆ ಪಡೆಯುತ್ತಿದ್ದರು. ಹುಟ್ಟೂರು ಬಿಡದಿಯಲ್ಲಿ ಆಲೂರು ನಾಗಪ್ಪ ಅಂತ್ಯಕ್ರಿಯೆ ನಡೆಯಲಿದೆ. ನಿಂಗವ್ವ ಬೆಂಗಳೂರಿಗೆ ಬಂದು ನೋಡವ್ವ ಹಾಡಿನ ಖ್ಯಾತಿಯ ಆಲೂರು ನಾಗಪ್ಪ ಅವರು ಸಾವಿರಾರು ಲಾವಣಿ, ತತ್ವಪದಗಳನ್ನು ರಚಿಸಿದ್ದಾರೆ. ಹೆಡ್‌ ಕಾನ್‌ಸ್ಟೇಬಲ್‌ ಹುದ್ದೆಯಲ್ಲಿದ್ದ ಅಲೂರು ನಾಗಪ್ಪ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಆಸಕ್ತಿಗೆ ಒತ್ತು ನೀಡಿದ್ದರು.

4. BBMP ರದ್ದುಗೊಳಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಗೆ ಸಂಪುಟ ಒಪ್ಪಿಗೆ! 

ಬೃಹತ್ ಬೆಂಗಳೂರನ್ನು ವಿಭಜಿಸುವ ಬಿಬಿಎಂಪಿ ಸುಧಾರಣಾ ಸಮಿತಿ ಅಧ್ಯಕ್ಷ ಬಿ.ಎಸ್. ಪಾಟೀಲ್ ಸಮಿತಿ ನೀಡಿದ್ದ ವರದಿಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಬೆಂಗಳೂರನ್ನು 10 ಪಾಲಿಕೆಗಳಾಗಿ ವಿಭಜಿಸಿ, ಬಿಬಿಎಂಪಿಯನ್ನು ರದ್ದುಗೊಳಿಸಲು ಈ ಸಮಿತಿ ಶಿಫಾರಸ್ಸು ಮಾಡಿತ್ತು. ಈ ಸಮಿತಿಯ ಸಲಹೆಯಂತೆ ಗ್ರೇಟರ್ ಬೆಂಗಳೂರು ಅಥಾರಿಟಿ ಮಾಡುವ ನಿರ್ಧಾರಕ್ಕೆ ಸಚಿವ ಸಂಪುಟ ಸೋಮವಾರ ಒಪ್ಪಿಗೆ ನೀಡಿದೆ. ಹೊಸಕೋಟೆ, ನೆಲಮಂಗಲ, ದೇವನಹಳ್ಳಿ, ದೊಡ್ಡಬಳ್ಳಾಪುರ, ಎಲೆಕ್ಟ್ರಾನಿಕ್ ಸಿಟಿ, ಬಿಡದಿ, ಆನೇಕಲ್ ಸೇರಿ ಎರಡು ಜಿಲ್ಲೆ ಹಾಗೂ ಸುತ್ತಮುತ್ತಲ ಪ್ರದೇಶಗಳನ್ನು ಸೇರಿಸಿ ಗ್ರೇಟರ್ ಬೆಂಗಳೂರು ರಚಿಸಲು ತೀರ್ಮಾನಿಸಲಾಗಿದ್ದು, ಸಂಪುಟದ ಅನುಮೋದನೆಯೊಂದಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 5 ರಿಂದ 10 ಭಾಗಗಳಾಗುವ ಸಾಧ್ಯತೆ ಇದೆ.

5. ED ಅಧಿಕಾರಿಗಳ ವಿರುದ್ಧ FIR

ವಾಲ್ಮೀಕಿ ನಿಗಮ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಣಕಾಸು ಇಲಾಖೆಯನ್ನು ಸಿಲುಕಿಸುವಂತೆ ರಾಜ್ಯ ಸರ್ಕಾರಿ ಅಧಿಕಾರಿಯೊಬ್ಬರಿಗೆ ಒತ್ತಡ ಹೇರಿದ ಆರೋಪದ ಮೇರೆಗೆ ಜಾರಿ ನಿರ್ದೇಶನಾಲಯದ ಇಬ್ಬರು ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಹೆಚ್ಚುವರಿ ನಿರ್ದೇಶಕ ಕಲ್ಲೇಶ್ ಬಿ ದೂರು ಆಧರಿಸಿ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಮ್ಮ ವಿರುದ್ಧ ಎಫ್ಐಆರ್ ದಾಖಲಿಸಿರುವುದನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯದ ಇಬ್ಬರು ಅಧಿಕಾರಿಗಳು ಹೈಕೋರ್ಟ್ ಮೊರೆ ಹೋಗಿದ್ದು, ಕೋರ್ಟ್ FIRಗೆ ತಡೆ ನೀಡಿದೆ. ಇದೇ ವೇಳೆ ಇಡಿ ಅಧಿಕಾರಿಗಳ ವಿರುದ್ಧ ಕಿರುಕುಳ ಆರೋಪ ಮಾಡಿರುವ ಕಾಂಗ್ರೆಸ್, ಇಡಿ ಅಧಿಕಾರಿಗಳ ಬಂಧಿಸಿವಂತೆ ಆಗ್ರಹಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ, ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವರು ಕಾಂಗ್ರೆಸ್ ಶಾಸಕರು ಪ್ರತಿಭಟನೆ ನಡೆಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com