
ಬೆಂಗಳೂರು: ಬೆಂಗಳೂರು ರೈಲು ನಿಲ್ದಾಣದಿಂದ ಯಲಹಂಕ ರೈಲು ನಿಲ್ದಾಣದವರೆಗಿನ ಬಹು ನಿರೀಕ್ಷಿತ ಬೆಂಗಳೂರು ಉಪನಗರ ರೈಲು ಯೋಜನೆಯ ಕಾರಿಡಾರ್-1 ಗಾಗಿ ಬೆಂಗಳೂರು ಉಪನಗರ ರೈಲ್ವೆ ಯೋಜನೆಯನ್ನು ಅನುಷ್ಟಾನಗೊಳಿಸುತ್ತಿರುವ ಕೆ-ರೈಡ್ ಸಂಸ್ಥೆ ಟೆಂಡರ್ ಆಹ್ವಾನಿಸಿದೆ.
ಯಲಹಂಕದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ವರೆಗಿನ ಎರಡನೇ ಹಂತದ ಯೋಜನೆಯನ್ನು ಮುಂದೆ ಕೈಗೆತ್ತಿಕೊಳ್ಳಲಿದೆ. ಬೆಂಗಳೂರು ನಗರ ಮತ್ತು ಕೆಐಎ ನಡುವೆ ಸಂಪರ್ಕ ಕಲ್ಪಿಸುವಂತೆ ಹಲವು ದಿನಗಳಿಂದ ಬೇಡಿಕೆಯಿದೆ.
ಕೆ-ರೈಡ್ ಅಧಿಕಾರಿಗಳ ಪ್ರಕಾರ, ಕಾರಿಡಾರ್-1ಎ ಟೆಂಡರ್ ಮೊತ್ತ 1,422 ಕೋಟಿ ರೂ. ಆಗಿದೆ. ಈ ಯೋಜನೆಯು ಗ್ರೇಡ್ ಮತ್ತು 17.63 ಕಿ. ಮೀ ಉದ್ದದ ಎಲಿವೇಟೆಡ್ ನಿರ್ಮಾಣ ಜೊತೆಗೆ ನಿಲ್ದಾಣಗಳ ನಿರ್ಮಾಣ ಕಾರ್ಯ ಒಳಗೊಂಡಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಟೆಂಡರ್ ಪ್ಯಾಕೇಜ್‌ನಲ್ಲಿ 14.213 ಕಿಮೀ ಉದ್ದದ ಎಲಿವೇಟೆಡ್ ವಿನ್ಯಾಸ ಮತ್ತು ನಿರ್ಮಾಣ, 3.417 ಕಿಮೀ ಉದ್ದದ ಗ್ರೇಡ್ ರಚನೆ, ಏಳು ನಿಲ್ದಾಣಗಳ ಕಟ್ಟಡಗಳು ಮತ್ತು ರೈಲ್ವೆ ಓವರ್ ಬ್ರಿಡ್ಜ್ ನಿರ್ಮಾಣವನ್ನು ಒಳಗೊಂಡಿದೆ. ನಮ್ಮ ಹಿಂದಿನ ಯೋಜನೆಗಳಲ್ಲಿ ಮಾಡಿದಂತೆ ಸಣ್ಣ ಟೆಂಡರ್‌ಗಳಾಗಿ ಒಡೆಯುವ ಬದಲು ನಾವು ಒಬ್ಬರಿಗೆ ಗುತ್ತಿಗೆ ನೀಡುತ್ತಿರುವುದು ಇದೇ ಮೊದಲು ಎಂದು ಕೆ-ರೈಡ್ ಮೂಲಗಳು ಪಿಟಿಐಗೆ ತಿಳಿಸಿವೆ.
ಬೆಂಗಳೂರು ಉಪನಗರ ಯೋಜನೆಯಾಗಿ ಕಾರಿಡಾರ್-2 ಮತ್ತು ಕಾರಿಡಾರ್-4ರಲ್ಲಿ ನಡೆಯುತ್ತಿರುವ ಕಾಮಗಾರಿಗಳಿಂದ ಕೆ-ರೈಡ್ ಪಾಠಗಳನ್ನು ಕಲಿತಿದೆ. ಉಪ ನಗರ ಯೋಜನೆಯಲ್ಲಿ ಇದು ಅತಿ ಹೆಚ್ಚು ಮೊತ್ತದ ಟೆಂಡರ್ ಆಗಿದೆ ಎಂದು ಮೂಲಗಳು ತಿಳಿಸಿವೆ.
Advertisement