Wayanad Landslide: ಮೃತ ಕನ್ನಡಿಗರಿಗೆ ತಲಾ 5 ಲಕ್ಷ ರೂ ಪರಿಹಾರ; ಪುನೀತ್ ಕೆರೆಹಳ್ಳಿ ಮತ್ತೆ ಬಂಧನ, ಪ್ರತಾಪ್ ಸಿಂಹ ವಿರುದ್ಧ ದೂರು; MudaScam ಸಂಬಂಧ ಪ್ರತಿಕ್ರಿಯಿಸುವಂತೆ ಸಿಎಂಗೆ ರಾಜ್ಯಪಾಲ ಸೂಚನೆ! ಇವು ಇಂದಿನ ಪ್ರಮುಖ ಸುದ್ದಿಗಳು 31-07-24

Wayanad Landslide: ಮೃತ ಕನ್ನಡಿಗರಿಗೆ ತಲಾ 5 ಲಕ್ಷ ರೂ ಪರಿಹಾರ; ಪುನೀತ್ ಕೆರೆಹಳ್ಳಿ ಮತ್ತೆ ಬಂಧನ, ಪ್ರತಾಪ್ ಸಿಂಹ ವಿರುದ್ಧ ದೂರು; MudaScam ಸಂಬಂಧ ಪ್ರತಿಕ್ರಿಯಿಸುವಂತೆ ಸಿಎಂಗೆ ರಾಜ್ಯಪಾಲ ಸೂಚನೆ! ಇವು ಇಂದಿನ ಪ್ರಮುಖ ಸುದ್ದಿಗಳು 31-07-24

1. ವಯನಾಡು ಭೂಕುಸಿತ: ಮೃತ ಕನ್ನಡಿಗರಿಗೆ ತಲಾ 5 ಲಕ್ಷ ಪರಿಹಾರ ಘೋಷಣೆ!

ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟ ಕನ್ನಡಿಗರಿಗೆ ತಲಾ ರೂ.5 ಲಕ್ಷ ಪರಿಹಾರ ನೀಡುವುದಾಗಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಭೂಕುಸಿತದಲ್ಲಿ 7 ಮಂದಿ ಕನ್ನಡಿಗರು ಮೃತಪಟ್ಟಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈ ದುರಂತದಲ್ಲಿ ಕನ್ನಡಿಗರು ಪ್ರಾಣ ಕಳೆದುಕೊಂಡಿದ್ದು ಮತ್ತಷ್ಟು ನೋವುಂಟು ಮಾಡಿದೆ. ಈಗಾಗಲೇ ರಾಜ್ಯದ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳು, ಎನ್.ಡಿ.ಆರ್.ಎಫ್ ತಂಡ ಮತ್ತು ಸೇನಾ ಪಡೆಯ ತಂಡಗಳು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ರಕ್ಷಣಾ ಕಾರ್ಯದ ಉಸ್ತುವಾರಿಗಾಗಿ ಸಚಿವರಾದ ಸಂತೋಷ್ ಲಾಡ್ ಅವರನ್ನು ಇಂದು ವಯನಾಡಿಗೆ ಕಳುಹಿಸಿಕೊಡಲಾಗುತ್ತಿದೆ ಎಂದರು. ಅಲ್ಲದೆ, ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ಮೂಲಕ ಕೇರಳದ ವಯನಾಡಿನಲ್ಲಿ ಸಂಭವಿಸಿರುವ ಭೀಕರ ಭೂಕುಸಿತದ ಪರಿಹಾರ ಕಾರ್ಯಗಳಿಗೆ ಕೈಜೋಡಿಸುವಂತೆ ಕಾರ್ಪೊರೇಟ್ ಕಂಪನಿಗಳಿಗೆ ರಾಜ್ಯ ಸರ್ಕಾರ ಮನವಿ ಮಾಡಿದೆ.

2. MudaScam ಸಂಬಂಧ ಪ್ರತಿಕ್ರಿಯಿಸುವಂತೆ ಸಿದ್ದರಾಮಯ್ಯಗೆ ರಾಜ್ಯಪಾಲ ಸೂಚನೆ

ಮುಡಾದಿಂದ ತಮ್ಮ ಪತ್ನಿ ಪಾರ್ವತಿ ಅವರಿಗೆ ನಿವೇಶನ ಹಂಚಿಕೆ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರು ಪ್ರತಿಕ್ರಿಯೆ ಕೇಳಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ಮೂಲಗಳು ತಿಳಿಸಿವೆ. ಬಿಜೆಪಿ ಶಾಸಕರ ನಿಯೋಗವು ಜುಲೈ 25ರಂದು ರಾಜ್ಯಪಾಲರನ್ನು ಭೇಟಿ ಮಾಡಿ ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ವರ್ಗಾಯಿಸಲು ಮತ್ತು ಸಿಎಂ ರಾಜೀನಾಮೆಗೆ ಕೋರಿ ಮನವಿಯನ್ನು ಸಲ್ಲಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಬಿಜೆಪಿ ಮನವಿ ಪತ್ರವನ್ನು ಸಲ್ಲಿಸಿರುವುದರಿಂದ ರಾಜ್ಯಪಾಲರು ಮುಖ್ಯಮಂತ್ರಿಯಿಂದ ಉತ್ತರವನ್ನು ಕೇಳುವುದು ಅನಿವಾರ್ಯವಾಗಿದೆ. ಮತ್ತೊಂದೆಡೆ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡುವ ಕುರಿತು ತಾವರಚಂದ್ ಗೆಹ್ಲೋಟ್ ತಜ್ಞರ ಕಾನೂನು ಅಭಿಪ್ರಾಯವನ್ನು ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

3. ಮೇಕೆದಾಟು ಯೋಜನೆ ಸಂಬಂಧ ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿ ಮೋದಿಗೆ ಡಿಕೆ ಶಿವಕುಮಾರ್ ಮನವಿ

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವ ಮಹತ್ವಾಕಾಂಕ್ಷೆಯ ಮೇಕೆದಾಟು ಯೋಜನೆಯನ್ನು ಜಾರಿಗೆ ತರಲು ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಬೇಕು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಒತ್ತಾಯಿಸಿದ್ದಾರೆ. ಪ್ರಧಾನಿ ಮೋದಿ ಭೇಟಿಯ ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ದೆಹಲಿಯ ಕರ್ನಾಟಕ ಭವನದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಕರ್ನಾಟಕದ ಮಳೆಯ ಬಗ್ಗೆ ವಿಚಾರಿಸಿದರು. ಮೋದಿಗೆ ಮಳೆಯ ಬಗ್ಗೆ ತಿಳಿಸಿದ್ದೇನೆ. ನಂತರ, ಪ್ರಧಾನಿ ಮೋದಿ ಅವರು ಕರ್ನಾಟಕ ಮತ್ತು ತಮಿಳುನಾಡು ಒಟ್ಟಿಗೆ ಕುಳಿತು ಸಮಸ್ಯೆ ಇತ್ಯರ್ಥಪಡಿಸುವಂತೆ ಸಲಹೆ ನೀಡಿದರು. ಕೇಂದ್ರದ ಮಧ್ಯಸ್ಥಿಕೆ ವಹಿಸುವವರೆಗೆ ಅದು ಕಷ್ಟ ಎಂದು ನಾನು ಮೋದಿಗೆ ಮನವರಿಕೆ ಮಾಡಿದೆ. ಜೊತೆಗೆ, ಬೆಂಗಳೂರು ಮತ್ತು ನೀರಾವರಿ ಅಭಿವೃದ್ಧಿಗೆ ಹೆಚ್ಚಿನ ಅನುದಾನಕ್ಕೆ ಪ್ರಧಾನಿಯವರನ್ನು ಒತ್ತಾಯಿಸಿದ್ದಾಗಿ ಶಿವಕುಮಾರ್ ತಿಳಿಸಿದ್ದಾರೆ.

4. ಪೊಲೀಸರ ಕಾರ್ಯಕ್ಕೆ ಅಡ್ಡಿ ಆರೋಪ: ಪುನೀತ್ ಕೆರೆಹಳ್ಳಿ ಮತ್ತೆ ಬಂಧನ. ಪ್ರತಾಪ್ ಸಿಂಹ ವಿರುದ್ಧ ದೂರು

ಹಿಂದೂ ಕಾರ್ಯಕರ್ತ ಪುನೀತ್‌ ಕೆರೆಹಳ್ಳಿ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಮಾಜಿ ಸಂಸದ ಪ್ರತಾಪ್‌ ಸಿಂಹ, ಶಾಸಕ ಹರೀಶ್‌ ಪೂಂಜಾ ನೇತೃತ್ವದಲ್ಲಿ ಬಿಜೆಪಿ ಹಾಗೂ ಹಿಂದು ಕಾರ್ಯಕರ್ತರು, ಬೆಂಗಳೂರಿನ ಬಸವೇಶ್ವರ ನಗರದ ಪೊಲೀಸ್‌ ಠಾಣೆ ಎದುರು ಇಂದು ಪ್ರತಿಭಟನೆ ನಡೆಸಿದರು. ಮಾಂಸ ಸಾಗಾಟಕ್ಕೆ ತಡೆ ಪ್ರಕರಣದಲ್ಲಿ ಬಂಧನವಾಗಿದ್ದ ಪುನೀತ್‌ ಕೆರೆಹಳ್ಳಿಗೆ ಲಾಕಪ್‌ನಲ್ಲಿ ಬಟ್ಟೆ ಬಿಚ್ಚಿಸಿ, ಹಿಂಸೆ ನೀಡಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆ ವೇಳೆ ಠಾಣೆಯಲ್ಲಿ ಬೆತ್ತಲುಗೊಳಿಸಿ ಹಿಂಸೆ ಕೊಟ್ಟಿದ್ದಾರೆ ಎಂದು ಎಸಿಪಿ ಚಂದನ್ ವಿರುದ್ಧ ಪ್ರತಾಪ್‌ ಸಿಂಹ ಕಿಡಿಕಾರಿದ್ದರು. ಪರಿಸ್ಥಿತಿ ನಿಯಂತ್ರಿಸಲು ಪುನೀತ್‌ ಕೆರೆಹಳ್ಳಿಯನ್ನು ಬಸವೇಶ್ವರನಗರ ಪೊಲೀಸರು ಮತ್ತೆ ವಶಕ್ಕೆ ಪಡೆದಿದ್ದಾರೆಂದು ತಿಳಿದುಬಂದಿದೆ.

5. Kodagu ಎರಡು ದಿನಗಳ ಕಾಲ ರೆಡ್ ಅಲರ್ಟ್. ಪ್ರವಾಸಿ ತಾಣಗಳಿಗೆ ಎರಡು ದಿನ ನಿರ್ಬಂಧ

ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದ್ದು, ಭಾರತೀಯ ಹವಾಮಾನ ಇಲಾಖೆ ಜುಲೈ 31 ಮತ್ತು ಆಗಸ್ಟ್ 1ರಂದು ರೆಡ್ ಅಲರ್ಟ್ ಘೋಷಣೆ ಮಾಡಿದೆ. ಅತಿಯಾದ ಮಳೆಯಿಂದ ದುಬಾರೆ, ಹಾರಂಗಿ ಸಾಕಾನೆ ಶಿಬಿರಗಳನ್ನು ಬುಧವಾರ ಮತ್ತು ಗುರುವಾರ ಬಂದ್ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಎರಡು ದಿನ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಕುಶಾಲನಗರ ವಲಯ ಅರಣ್ಯಾಧಿಕಾರಿ ಆದೇಶ ಹೊರಡಿಸಿದ್ದಾರೆ. ಈಮಧ್ಯೆ, ಕಾವೇರಿ ಜಲಾನಯನ ಪ್ರದೇಶದಲ್ಲಿ ಅಭೂತಪೂರ್ವ ಮಳೆಯಾಗುತ್ತಿದ್ದು, ಆಗಸ್ಟ್ ನಲ್ಲಿ ಕರ್ನಾಟಕದ ಜಲಾಶಯಗಳಿಂದ ತಮಿಳುನಾಡಿಗೆ ಬಿಡಬೇಕಾಗಿದ್ದ ನೀರು ಜುಲೈ ತಿಂಗಳಲ್ಲೇ ಹರಿದಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com