
ಬೆಂಗಳೂರು: ಕರ್ನಾಟಕದಲ್ಲಿ 28 ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಲೋಕಸಭಾ ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ.
ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಒಟ್ಟು ಹೆಚ್ಚಿನ ಸ್ಥಾನಗಳು ಸಿಗುವುದಿಲ್ಲವಾದರೂ ಕಳೆದ ಲೋಕಸಭಾ ಚುನಾವಣೆಗೆ ಹೋಲಿಕೆ ಮಾಡಿದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಸೀಟುಗಳನ್ನು ಹೆಚ್ಚಿಸಿಕೊಳ್ಳಲಿದೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಮೂರು ಸಮೀಕ್ಷೆಗಳ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್ ಗೆ 3-8 ಸ್ಥಾನಗಳು ಸಿಗುವ ಸಾಧ್ಯತೆಗಳಿವೆ.
ಇಂಡಿಯಾ ಟುಡೆ-ಆಕ್ಸಿಸ್ ಮೈ ಇಂಡಿಯಾ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ, ಎನ್ ಡಿಎ ಮೈತ್ರಿಕೂಟಕ್ಕೆ ರಾಜ್ಯದಲ್ಲಿ 23-25 ಸ್ಥಾನಗಳು ಸಿಗಲಿದ್ದರೆ, ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟಕ್ಕೆ 3-5 ಸ್ಥಾನಗಳು ಸಿಗಲಿದೆ. ಪಕ್ಷೇತರರು ಖಾತೆ ತೆರೆಯುವ ಸಾಧ್ಯತೆಗಳಿಲ್ಲ.
ಇಂಡಿಯಾ ಟಿವಿ ಸಮೀಕ್ಷೆಯಲ್ಲಿ ಎನ್ ಡಿಎ 19-25 ಕ್ಷೇತ್ರಗಳಲ್ಲಿ ಗೆಲ್ಲಲಿದ್ದು, ಕಾಂಗ್ರೆಸ್ 4-8 ಕ್ಷೇತ್ರಗಳಲ್ಲಿ ಜಯಗಳಿಸಲಿದೆ. ನ್ಯೂಸ್ 18 ಸಮೀಕ್ಷೆಯ ಪ್ರಕಾರ, ಎನ್ ಡಿಎ 23-26 ಸ್ಥಾನಗಳು ಸಿಗಲಿದ್ದರೆ, ಕಾಂಗ್ರೆಸ್ ಗೆ 3-7 ಸ್ಥಾನಗಳು ಸಿಗಲಿದೆ.
ಈ ಬಾರಿ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ವಿರುದ್ಧ ನೇರ ಹಣಾಹಣಿ ಏರ್ಪಟ್ಟಿತ್ತು. 2019 ರಲ್ಲಿ ಬಿಜೆಪಿ 28 ರಲ್ಲಿ 25 ಸ್ಥಾನಗಳನ್ನು ಗೆದ್ದಿತ್ತು. ಆಗ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಇತ್ತು. ಈ ಬಾರಿ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೆ, ಜೆಡಿಎಸ್ 3 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ.
Advertisement