ಯಾಗ ಮಾಡಿಸೋದು ಡಿಕೆಶಿ ಸಂಸ್ಕೃತಿ: ಕಳ್ಳನಿಗೆ ಮಳ್ಳ ಸಾಕ್ಷಿ; DCM ವಿರುದ್ಧ ಹರಿಹಾಯ್ದ HDK

ನಾವು ದೇವರ ಪೂಜೆ ಮಾಡ್ತೀವಿ. ಹಿಂದೂ ಸಂಸ್ಕೃತಿಯಲ್ಲಿ ಇರುವ ನಾವು ಧಾರ್ಮಿಕವಾಗಿ ಪೂಜೆ ಮಾಡ್ತೀವಿ. ನಮಗೆ ಇರುವ ದೋಷ ಪರಿಹಾರಕ್ಕೆ ದೇವಾಲಯಕ್ಕೆ ಹೋಗುತ್ತೇವೆ ಹೊರತು ಯಾಗ ಮಾಡುವುದಿಲ್ಲ.
ಕುಮಾರಸ್ವಾಮಿ, ಡಿಕೆ ಶಿವಕುಮಾರ್
ಕುಮಾರಸ್ವಾಮಿ, ಡಿಕೆ ಶಿವಕುಮಾರ್
Updated on

ಬೆಂಗಳೂರು: ನಾವು ದೇವರ ಪೂಜೆ ಮಾಡ್ತೀವಿ. ಹಿಂದೂ ಸಂಸ್ಕೃತಿಯಲ್ಲಿ ಇರುವ ನಾವು ಧಾರ್ಮಿಕವಾಗಿ ಪೂಜೆ ಮಾಡ್ತೀವಿ. ನಮಗೆ ಇರುವ ದೋಷ ಪರಿಹಾರಕ್ಕೆ ದೇವಾಲಯಕ್ಕೆ ಹೋಗುತ್ತೇವೆ ಹೊರತು ಯಾಗ ಮಾಡುವುದಿಲ್ಲ. ಯಾಗ ಮಾಡೋದು ಡಿಕೆಶಿ ಸಂಸ್ಕೃತಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಗರದ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿಂದು ಸಭೆ ನಡೆಸಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ (DK Shivakumar) ಅವರಿಗೆ ರಕ್ಷಣೆ ಮಾಡೋದಕ್ಕೆ ದೇವರು ಇರುವಂತೆ ನಮಗೂ ದೇವರಿದ್ದಾನೆ. ನಾನು ರಾಜರಾಜೇಶ್ವರ ದೇವಾಲಯಕ್ಕೆ ಹೋಗಿದ್ದೇನೆ. ರಾಜರಾಜೇಶ್ವರ ದೇವರಿಗೇ ಇದನ್ನ ಬಿಡ್ತೀನಿ, ರಾಜರಾಜೇಶ್ವರ ದೇವರೆ ಅವರಿಗೆ ಶಿಕ್ಷೆ ಕೊಡಲಿ ಎಂದು ಹೇಳಿದ್ದಾರೆ. ನಮ್ಮ ಸರ್ಕಾರದ ನಾಶಕ್ಕಾಗಿ ನನ್ನ ಹಾಗೂ ಸಿಎಂ ವಿರುದ್ಧ ಶತ್ರು ಭೈರವಿ ಯಾಗ ಮಾಡಿಸುತ್ತಿದ್ದಾರೆ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು. “ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ದಿ ಬಿಡು ನಾಲಿಗೆ” ಎಂಬ ಪುರಂದರ ದಾಸರ ಕೀರ್ತನೆಯ ಮೂಲಕ ತಿರುಗೇಟು ನೀಡಿದ್ದಾರೆ.

ಡಿಸಿಎಂ ಆಗಿದ್ದರೂ ಆ ಸ್ಥಾನದ ಗೌರವ, ಮೌಲ್ಯ ಏನು ಅಂತ ಅವರಿಗೆ ಅರ್ಥ ಅಗಿಲ್ಲ. ಒಟ್ಟಿನಲ್ಲಿ ನಮ್ಮ ಕುಟುಂಬ ಮುಗಿಸಲೇಬೇಕು ಎಂದು ಶ್ರಮಪಡ್ತಿದ್ದಾರೆ. ಅದರ ಮುಂದುವರಿದ ಭಾಗವಾಗಿ ಯಾಗದ ಮಾತು ಹೇಳ್ತಿದ್ದಾರೆ. ನಮ್ಮ ಕುಟುಂಬದಲ್ಲಿ ನನಗೆ ತಿಳಿವಳಿಕೆ ಬಂದಾಗಿನಿಂದ ಕುರಿ, ಕೋಣ, ಮೇಕೆ ಕಡಿಯೋದು ಯಾವತ್ತೂ ಮಾಡಿಲ್ಲ.

ಕುಮಾರಸ್ವಾಮಿ, ಡಿಕೆ ಶಿವಕುಮಾರ್
''ಕೇರಳದ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಶತ್ರು ಸಂಹಾರ ಪೂಜೆ ನಡೆದಿಲ್ಲ'': ಸ್ಪಷ್ಟನೆ ನೀಡಿದ ಡಿಸಿಎಂ DK Shivakumar

ಕಳ್ಳನಿಗೆ ಮಳ್ಳನ ಸಾಕ್ಷಿ ಎಂಬಂತೆ ಅವರೆ ನಮ್ಮ ಹೆಸರು ಹೇಳ್ತಾರೆ. ನಾನು ಎರಡು ಬಾರಿ ಸಿಎಂ ಆಗಿದ್ದೆ ಕೋಣ, ಕುರಿ ಕಡಿದು ಆಗಿಲ್ಲ. ದೇವರು ಕೊಟ್ಟು, ಆಗಿದ್ದೇನೆ. ದೇವೇಗೌಡರು ಅಧಿಕಾರ ಅನುಭವಿಸಿದ್ದೇ ಕಡಿಮೆ ಅವಧಿ. ಅದೇನು ಕೋಳಿ, ಕುರಿ ಕಡಿದು ಮಾಡಿ ಆಗಿದ್ದಾ? ಡಿಕೆ ಶಿವಕುಮಾರ್ ದೇವರು, ಶರಣರ ಜೊತೆ ಚೆಲ್ಲಾಟ ಆಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ನಾನು ಇತ್ತೀಚೆಗೆ ವಿಶ್ರಾಂತಿಗೆಂದು ನನ್ನ ಮೊಮ್ಮಗನ ಜೊತೆ ಕಬಿನಿ ಹಿನ್ನೀರಿಗೆ ಹೋಗಿದ್ದೆ. ಅದಕ್ಕೂ ಕೇರಳಕ್ಕೆ ಮಾಟ ಮಾಡಿಸೋಕೆ ಅಂತ ಹೇಳಿದ್ರು. ನಾನು ಹೋಗಿ ಯಾಗ ಮಾಡಿಸಬೇಕಾ? ಕಾನೂನಿನ ಪ್ರಕಾರ ಕೋಣ, ಕುರಿ ಬಲಿ ಕೊಟ್ಟು ನಾಶ ಮಾಡೋದು ಅಪರಾಧ. ಆಗ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ತಾನೆ. ಜನರಲ್ಲಿ ನಮ್ಮ ಕುಟುಂಬ ನೆಲ ಕಚ್ಚಿಸಬೇಕು ಅಂತ ಇಂತಹ ಸುದ್ದಿ ಹರಡಿಸುತ್ತಿದ್ದಾರೆ. ಇಡೀ ದೇವೇಗೌಡ ಕುಟುಂಬ ನಾಶ ಮಾಡೋಕೆ ಮುಂದಾಗಿದ್ದಾರೆ. ಇದು ಅದರ ಮುಂದುವರಿದ ಭಾಗ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com