ರಾಜ್ಯದಲ್ಲಿ ಮತ ಎಣಿಕೆಗೆ ಸಕಲ ಸಿದ್ದತೆ; ತೆಲುಗು ನಟಿ ಹೇಮಾ ಬಂಧನ; ಬೆಂಗಳೂರಿನಲ್ಲಿ 133 ವರ್ಷಗಳ ದಾಖಲೆಯ ಮಳೆ! ಇಂದಿನ ಸುದ್ದಿ ಮುಖ್ಯಾಂಶಗಳು 03-06-24

ರಾಜ್ಯದಲ್ಲಿ ಮತ ಎಣಿಕೆಗೆ ಸಕಲ ಸಿದ್ದತೆ; ತೆಲುಗು ನಟಿ ಹೇಮಾ ಬಂಧನ; ಬೆಂಗಳೂರಿನಲ್ಲಿ 133 ವರ್ಷಗಳ ದಾಖಲೆಯ ಮಳೆ! ಇಂದಿನ ಸುದ್ದಿ ಮುಖ್ಯಾಂಶಗಳು 03-06-24

1. ರಾಜ್ಯದಲ್ಲಿ ಲೋಕಸಭೆ ಚುನಾವಣೆ ಮತ ಎಣಿಕೆಗೆ ಸಕಲ ಸಿದ್ದತೆ

ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳು ಸೇರಿದಂತೆ ಭಾರತದ 543 ಕ್ಷೇತ್ರಗಳ ಲೋಕಸಭಾ ಚುನಾವಣೆ ಮತ ಎಣಿಕೆ ನಾಳೆ ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗಲಿದ್ದು, ರಾಜ್ಯದಲ್ಲಿ 29 ಎಣಿಕೆ ಕೇಂದ್ರಗಳಲ್ಲಿ 13,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ. ರಾಜ್ಯದಲ್ಲಿ ಒಟ್ಟು 28 ಲೋಕಸಭಾ ಕ್ಷೇತ್ರಗಳ ಪೈಕಿ ದಕ್ಷಿಣ ಮತ್ತು ಕರಾವಳಿ ಜಿಲ್ಲೆಗಳ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಏಪ್ರಿಲ್ 26 ರಂದು ನಡೆದಿದ್ದು, ಉತ್ತರದ ಜಿಲ್ಲೆಗಳ ಇತರ 14 ಕ್ಷೇತ್ರಗಳಲ್ಲಿ ಮೇ 7ರಂದು ಎರಡನೇ ಹಂತದ ಮತದಾನ ನಡೆದಿತ್ತು. ಪ್ರತಿ ಲೋಕಸಭಾ ಕ್ಷೇತ್ರಕ್ಕೆ ತಲಾ ಒಂದು ಮತ ಎಣಿಕೆ ಕೇಂದ್ರವಿದೆ. ಆದರೆ ತುಮಕೂರಿನಲ್ಲಿ ಎರಡು ಕಡೆ ಮತ ಎಣಿಕೆ ನಡೆಯಲಿದ್ದು, ಒಟ್ಟು ಎಣಿಕೆ ಕೇಂದ್ರಗಳ ಸಂಖ್ಯೆ 29 ಆಗಿದೆ ಎಂದು ತಿಳಿಸಿದರು.

2. ಚುನಾವಣಾ ಆಯೋಗಕ್ಕೆ ಪತ್ರ ಬರೆದ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಎನ್ ಡಿಎ ಅಭ್ಯರ್ಥಿ ಡಾ. ಸಿಎನ್ ಮಂಜುನಾಥ್

ಮತ ಎಣಿಕೆ ದಿನ ಬೆಂಗಳೂರಿನಲ್ಲೇ 2,400ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ಮಧ್ಯರಾತ್ರಿಯಿಂದ ಜೂನ್ 4 ರ ಮಧ್ಯರಾತ್ರಿಯವರೆಗೆ, ನಗರ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಬೆಂಗಳೂರಿನಲ್ಲಿ ಮಂಗಳವಾರ ಬೆಳಿಗ್ಗೆ 6ರಿಂದ ಮಂಗಳವಾರ ಮಧ್ಯರಾತ್ರಿಯವರೆಗೆ ಸೆಕ್ಷನ್ 144 CrPC ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈಮಧ್ಯೆ, ಲೋಕಸಭಾ ಚುನಾವಣಾ ಫಲಿತಾಂಶದ ದಿನ ಮತ ಎಣಿಕೆ ಕಾರ್ಯಕ್ಕೆ ಉಂಟಾಗುವ ಸಂಭಾವ್ಯ ಅಡೆತಡೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಬಿಜೆಪಿ-ಜೆಡಿಎಸ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಡಾ. ಸಿಎನ್ ಮಂಜುನಾಥ್, ಹಿಂಸಾಚಾರ ತಡೆಯಲು ಹೆಚ್ಚುವರಿ ಭದ್ರತೆ ಒದಗಿಸುವಂತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಮತ ಎಣಿಕೆ ಕೇಂದ್ರದ ಸುತ್ತ ಅರೆಸೇನಾ ಪಡೆಗಳನ್ನು ನಿಯೋಜಿಸುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ.

3. ರೇವ್ ಪಾರ್ಟಿ ಪ್ರಕರಣ: ತೆಲುಗು ನಟಿ ಹೇಮಾ ಬಂಧನ

ಬೆಂಗಳೂರಿನಲ್ಲಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟಿ ಹೇಮಾ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ನಟಿ ಹೇಮಾ ಸೇರಿದಂತೆ ಎಂಟು ಮಂದಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಆದರೆ ವಿಚಾರಣೆಗೆ ಹಾಜರಾಗಲು ಹೇಮಾ ಏಳು ದಿನಗಳ ಕಾಲಾವಕಾಶ ಕೋರಿದ್ದರು. ಇಂದು ಬುರ್ಕಾ ಧರಿಸಿ ಬಂದಿದ್ದ ಹೇಮಾ ಸಿಸಿಬಿ ಅಧಿಕಾರಿಗಳ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದ ಹಿನ್ನಲೆಯಲ್ಲಿ ನಟಿಯನ್ನು ಬಂಧಿಸಲಾಗಿದೆ.

4. ವಿಧಾನಪರಿಷತ್ ಚುನಾವಣೆ: ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ರಾಜ್ಯ ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ವಿಧಾನಸೌಧಕ್ಕೆ ತೆರಳಿ ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ. ಕಾಂಗ್ರೆಸ್ ನ ಯತೀಂದ್ರ ಸಿದ್ದರಾಮಯ್ಯ, ಹಾಲಿ ಸಚಿವ ಎನ್.ಎಸ್ ಬೋಸರಾಜು, ಸಿಎಂ ರಾಜಕೀಯ ಕಾರ್ಯದರ್ಶಿ ಡಾ. ಕೆ ಗೋವಿಂದರಾಜು, ವಸಂತಕುಮಾರ್, ಜಗದೇವ್ ಗುತ್ತೇದಾರ್, ಐವನ್ ಡಿಸೋಜಾ ಮತ್ತು ಬಿಲ್ಕಿಸ್ ಬಾನೊ ನಾಮಪತ್ರ ಸಲ್ಲಿಸಿದರು. ಮತ್ತೊಂದೆಡೆ ಬಿಜೆಪಿಯಿಂದ ಸಿಟಿ ರವಿ, ಎನ್ ರವಿಕುಮಾರ್ ಹಾಗೂ ಎಂಜಿ ಮೂಳೆ ಸಹ ಇಂದು ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ.

5. ಅಪ್ರಾಪ್ತ ಬಾಲಕಿಯ ಮೇಲೆ ಪದೇ ಪದೆ ಅತ್ಯಾಚಾರ: ಮೌಲ್ವಿ ಬಂಧನ

ದುಷ್ಟಶಕ್ತಿಗಳನ್ನು ಓಡಿಸುವ ನೆಪದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಪದೇ ಪದೆ ಅತ್ಯಾಚಾರವೆಸಗಿದ ಮತ್ತು ಸಂತ್ರಸ್ತೆಯ ಸಹೋದರ ಕೂಡ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುವಂತೆ ಮಾಡಿದ ಆರೋಪದ ಮೇಲೆ ಪೊಲೀಸರು ಇಂದು ಚಿತ್ರದುರ್ಗದಲ್ಲಿ ಮೌಲ್ವಿಯೊಬ್ಬನನ್ನು ಬಂಧಿಸಿದ್ದಾರೆ. ಪೊಲೀಸರು ಆರೋಪಿ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಸೀದಿಗೆ ಬರುತ್ತಿದ್ದ ಅಪ್ತಾಪ್ತೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಸಂತ್ರಸ್ತೆಯ ತಾಯಿ ದೂರು ನೀಡಿದ್ದರು. ಸಂತ್ರಸ್ತೆಯ ಸಹೋದರನ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

6. ಬೆಂಗಳೂರಿನಲ್ಲಿ 133 ವರ್ಷಗಳ ದಾಖಲೆಯ ಮಳೆ

ಬೆಂಗಳೂರಿನಲ್ಲಿ ಭಾನುವಾರ 111 ಮಿಮೀ ಮಳೆಯಾಗಿದ್ದು, ಜೂನ್‌ನಲ್ಲಿ ಒಂದೇ ದಿನದಲ್ಲಿ ಸುರಿದ ಈ ಮಳೆ 133 ವರ್ಷಗಳ ದಾಖಲೆಯನ್ನು ಮುರಿದಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಜೂನ್ 2ರಂದು ಬೆಂಗಳೂರಿನಲ್ಲಿ ದಾಖಲೆಯ ಮಳೆಯಾಗಿದೆ ಎಂದು ಬೆಂಗಳೂರಿನ ಭಾರತೀಯ ಹವಾಮಾನ ಇಲಾಖೆ ವಿಜ್ಞಾನಿ ಎನ್ ಪುವಿಯರಸನ್ ಹೇಳಿದ್ದಾರೆ. ಜೂನ್ 1 ಮತ್ತು ಜೂನ್ 2ರಂದು ಎರಡು ದಿನದಲ್ಲಿ 140.7 ಮಿಮೀ ಮಳೆಯಾಗಿದೆ. ಇದು ಜೂನ್ ತಿಂಗಳ ಸರಾಸರಿಯನ್ನು ಮೀರಿಸಿದೆ. 1891ರ ಜೂನ್ 16ರಂದು ಒಂದೇ ದಿನ ಅತಿ ಹೆಚ್ಚು ಮಳೆಯಾಗಿತ್ತು ಎಂದು ಪುವಿಯರಸನ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com