
ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದಿಂದ ಬಹುಕೋಟಿ ಹಗರಣದ ತನಿಖೆಯನ್ನು ಸಿಬಿಐಗೆ ರಾಜ್ಯ ಸರ್ಕಾರ ಅಧಿಕೃತವಾಗಿ ವಹಿಸಬೇಕು ಮತ್ತು ಸಚಿವ ಬಿ ನಾಗೇಂದ್ರ ಅವರು ರಾಜೀನಾಮೆ ನೀಡಬೇಕೆಂಬ ಆಗ್ರಹ ಬಿಜೆಪಿ ನಾಯಕರಿಂದ ಹೆಚ್ಚಾಗುತ್ತಿರುವ ಹೊತ್ತಿನಲ್ಲಿ ತಾವು ಸಚಿವರ ರಾಜೀನಾಮೆಯನ್ನು ಕೇಳಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಛರಿಸಿದ್ದಾರೆ.
ತಮ್ಮ ಸಂಪುಟ ಸಹೋದ್ಯೋಗಿ ಬಿ ನಾಗೇಂದ್ರ ಅವರ ರಾಜೀನಾಮೆಯನ್ನು ಕೇಳಿಲ್ಲ. ಅಭಿವೃದ್ಧಿ ನಿಗಮದ ಅವ್ಯವಹಾರದ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (SIT) ತನಿಖೆಯ ವರದಿಯನ್ನು ಆಧರಿಸಿ ನಿರ್ಧರಿಸುತ್ತೇವೆ. ಎಸ್ ಐಟಿ ತ್ವರಿತವಾಗಿ ತನಿಖೆ ಮಾಡುತ್ತಿದ್ದು ಶೀಘ್ರವೇ ವರದಿ ನೀಡಲಿದೆ ಎಂದು ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ನಾನು ನಾಗೇಂದ್ರ ಅವರ ರಾಜೀನಾಮೆ ಕೇಳಿಲ್ಲ. ಎಸ್‌ಐಟಿ ವರದಿ ಇನ್ನೂ ಬಂದಿಲ್ಲ. ಕಳೆದೆರಡು ದಿನಗಳ ಹಿಂದೆಯೇ ಎಸ್‌ಐಟಿ ರಚನೆಯಾಗಿತ್ತು. ಅವರು ತಮ್ಮ ವರದಿಯಲ್ಲಿ ಏನು ನೀಡುತ್ತಾರೆಂದು ನೋಡೋಣ. ಅವರು ವರದಿ ಸಲ್ಲಿಸಿದ ನಂತರವೇ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ, ಎಸ್ ಐಟಿ ಸೂಕ್ತ ತನಿಖೆ ಮಾಡುವ ವಿಶ್ವಾಸವಿದೆ' ಎಂದು ತಿಳಿಸಿದರು.
ಬಹುಕೋಟಿ ಹಗರಣದಲ್ಲಿ ತಮ್ಮ ಹೆಸರು ಕೇಳಿ ಬಂದಿರೋದ್ರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬಿ. ನಾಗೇಂದ್ರಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂಬ ಸುದ್ದಿ ಕಳೆದ ಮೂರ್ನಾಲ್ಕು ದಿನಗಳಿಂದ ಕೇಳಿಬರುತ್ತಿದೆ.
ಬಿಜೆಪಿಯಿಂದ ರಾಜಭವನ ಚಲೋ: ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಕೇವಲ ಸಚಿವ ನಾಗೇಂದ್ರ ಅವರಷ್ಟೇ ಅಲ್ಲದೆ ಎಲ್ಲಾ ಇಲಾಖೆಗಳೂ ಭಾಗಿಯಾಗಿವೆ. ಭ್ರಷ್ಟಾಚಾರ ಹಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೂ ಹಣ ಹೋಗಿದೆ. ಹೀಗಾಗಿ ನೈತಿಕ ಹೊಣೆ ಹೊತ್ತು ಸಚಿವ ನಾಗೇಂದ್ರ ಜೊತೆ ಸಿಎಂ ಕೂಡ ರಾಜೀನಾಮೆ ನೀಡಬೇಕು. ಅವರು ರಾಜೀನಾಮೆ ನೀಡುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ಇಂದು ರಾಜಭವನ ಚಲೋ ಹಮ್ಮಿಕೊಂಡಿದ್ದ ಆರ್ ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸೇರಿದಂತೆ ಹಲವು ಬಿಜೆಪಿ ನಾಯಕರು ಸಚಿವ ನಾಗೇಂದ್ರ ರಾಜೀನಾಮೆಗೆ ಪಟ್ಟು ಹಿಡಿದರು. ನಂತರ ರಾಜ್ಯಪಾಲರ ಬಳಿ ತೆರಳಿ ಸಚಿವರ ರಾಜೀನಾಮೆಗೆ ಸೂಚಿಸಬೇಕೆಂದು ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ವಿಜಯೇಂದ್ರ, ಕಳೆದೆರಡು ದಿನಗಳಿಂದ ನಾಗೇಂದ್ರ ಅವರ ರಾಜೀನಾಮೆ ಬಗ್ಗೆ ನಾವು ಕೇಳುತ್ತಿದ್ದೇವೆ ಆದರೆ ಅವರು ಇಂದಿಗೂ ಸಚಿವರಾಗಿ ಮುಂದುವರಿದಿದ್ದಾರೆ, ಮುಖ್ಯಮಂತ್ರಿಗಳು ಅವರ ರಾಜೀನಾಮೆ ಪಡೆಯಲು ಹಿಂದೇಟು ಹಾಕುತ್ತಿರುವುದೇಕೆ?ಹೈದ್ರಾಬಾದ್‌ಗೆ ನೂರಾರು ಕೋಟಿ ವರ್ಗಾವಣೆಯಾದಾಗ, ಅಧಿಕಾರಿಗಳು ನಕಲಿ ಖಾತೆಗಳನ್ನು ಸೃಷ್ಟಿಸಿದಾಗ, ಸಂಬಂಧಪಟ್ಟ ಸಚಿವರ ಒಪ್ಪಿಗೆಯಿಲ್ಲದೆ ಯಾವ ಅಧಿಕಾರಿಯೂ ಇದನ್ನೆಲ್ಲ ಮಾಡುತ್ತಾರೆ ಎಂದು ನನಗೆ ಅನಿಸುವುದಿಲ್ಲ ಎಂದರು.
Advertisement