
ಬೆಂಗಳೂರು: ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದ್ದು, ಇದರ ಬೆನ್ನಲ್ಲೇ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ನಾಗೇಂದ್ರ ತಮ್ಮ ರಾಜಿನಾಮೆ ಪತ್ರವನ್ನು ರವಾನಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ನಾಗೇಂದ್ರ ರಾಜಿನಾಮೆ ನೀಡುವುದಾಗಿ ಹೇಳಿದ್ದರು. ಭ್ರಷ್ಟಾಚಾರ ಆರೋಪದಲ್ಲಿ ರಾಜಿನಾಮೆ ಕೊಟ್ಟ ಮೊದಲ ಸಚಿವ ಎಂಬ ಅಪಖ್ಯಾತಿಗೆ ನಾಗೇಂದ್ರ ಒಳಗಾಗಿದ್ದಾರೆ.
ಎಸ್‌ಟಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಬಳಿಕ ಬಹುಕೋಟಿ ಹಗರಣ ಬಯಲಿಗೆ ಬಂದಿದ್ದು, ಸಚಿವ ನಾಗೇಂದ್ರ ರಾಜೀನಾಮೆಗೆ ವಿಪಕ್ಷಗಳು ಪಟ್ಟು ಹಿಡಿದಿದ್ದವು. ಇದೀಗ ರಾಜೀನಾಮೆ ನೀಡುವಂತೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದ್ದರು. ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ನಾಗೇಂದ್ರ ತಮ್ಮ ರಾಜಿನಾಮೆ ಪತ್ರವನ್ನು ರವಾನಿಸಿದ್ದಾರೆ.
ವಾಲ್ಮೀಕಿ ನಿಗಮದ ಹಗರಣದ ತನಿಖೆಯನ್ನು ಸಿಬಿಐ ವಹಿಸಿಕೊಂಡಿದ್ದು ತನಿಖೆ ಚುರುಕುಗೊಳಿಸಿದೆ. ತನಿಖೆ ನಂತರ ಸತ್ಯಾಸತ್ಯತೆ ಹೊರಬರಲಿದೆ. ಆದರೆ ಸದ್ಯಕ್ಕೆ ಪಕ್ಷ ಹಾಗೂ ಕಾಂಗ್ರೆಸ್ ಸರ್ಕಾರ ಘನತೆಗೆ ಧಕ್ಕೆಯಾಗಬಾರದು ಎಂಬ ಕಾರಣಕ್ಕೆ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಿ. ನಾಗೇಂದ್ರ ಆಪ್ತ ನಾಗರಾಜ್ ನೆಕ್ಕಂಟಿ ಹಾಗೂ ನಾಗೇಶ್ವರರಾವ್ ಅವರನ್ನು ಬಂಧಿಸಲಾಗಿದ್ದು, ಪ್ರಕರಣದಲ್ಲಿ ನಾಗೇಂದ್ರ ಅವರ ಪಾತ್ರವಿರುವ ಬಗ್ಗೆಯೂ ಎಸ್‌ಐಟಿ ಪುರಾವೆಗಳನ್ನು ಕಲೆಹಾಕಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಬೆಂಗಳೂರು ಪೂರ್ವ ವಲಯದ ಡೆಪ್ಯುಟಿ ಜನರಲ್ ಮ್ಯಾನೇಜರ್ (ಡಿಜಿಎಂ) ಮಹೇಶ್ ಜೆ. ಅವರ ದೂರು ಆಧರಿಸಿ ಸಿಬಿಐ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದು, ಬಂಧಿತ ಆರೋಪಿಗಳು ಹಾಗೂ ಸಚಿವ ನಾಗೇಂದ್ರ ಅವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ದಟ್ಟವಾಗಿದೆ.
ವಾಲ್ಮೀಕಿ ನಿಗಮದ ಜೀರೋ ಬ್ಯಾಲೆನ್ಸ್ ಅಕೌಂಟ್ ಅನ್ನು ಎಂ.ಜಿ. ರಸ್ತೆಯ ಈ ಶಾಖೆಗೆ ವರ್ಗಾಯಿಸಿ ಮಾರ್ಚ್ 4ರಂದು 25 ಕೋಟಿ ರೂ., ಮಾರ್ಚ್ 6ರಂದು 25 ಕೋಟಿ ರೂ. ಹಾಗೂ ಪುನಃ ಮಾರ್ಚ್ 21ರಂದು 44 ಕೋಟಿ ರೂ. ವರ್ಗಾಯಿಸಲಾಗಿದೆ. ಜೊತೆಗೆ, ರಾಜ್ಯ ಖಜಾನೆಯಿಂದ 43.33 ಕೋಟಿ ರೂ. ಹಾಗೂ ಮತ್ತೊಮ್ಮೆ ಮಾ.21ರಂದು 50 ಕೋಟಿ ರೂ. ಸೇರಿ ಒಟ್ಟು 187.33 ಕೋಟಿ ರೂಪಾಯಿ ಅನುದಾನವನ್ನು ವಿವಿಧ ಬ್ಯಾಂಕ್‌ಗಳ ಖಾತೆಯಿಂದ ಹಾಗೂ ರಾಜ್ಯ ಖಜಾನೆಯಿಂದ ಈ ಖಾತೆಗೆ ವರ್ಗಾವಣೆ ಮಾಡಲಾಗಿದೆ.
Advertisement