
ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ತನಿಖೆಯನ್ನು ಚುರುಕುಗೊಳಿಸಿರುವ ಎಸ್ಐಟಿ, ಹೈದರಾಬಾದ್ನ ಫಸ್ಟ್ ಫೈನಾನ್ಸ್ ಸಹಕಾರಿ ಬ್ಯಾಂಕ್ನಲ್ಲಿದ್ದ 45 ಕೋಟಿ ರೂ. ಜಪ್ತಿ ಮಾಡಿದೆ.
ಫಸ್ಟ್ ಫೈನಾನ್ಸ್ ಸಹಕಾರಿ ಬ್ಯಾಂಕ್ ಬಂಧಿತ ಆರೋಪಿ ಸತ್ಯನಾರಾಯಣ್ ಒಡೆತನದ ಸಹಕಾರಿ ಬ್ಯಾಂಕ್ ಆಗಿದ್ದು, ಇದೇ ಬ್ಯಾಂಕ್ ಖಾತೆಗೆ 94.73 ಕೋಟಿ ರೂ. ವರ್ಗಾವಣೆಯಾಗಿತ್ತು. ಬ್ಯಾಂಕ್ನ 18 ನಕಲಿ ಖಾತೆಗಳಿಗೆ 94.73 ಕೋಟಿ ರೂ. ವರ್ಗಾವಣೆಯಾಗಿದೆ.
ವರ್ಗಾವಣೆಯಾಗಿದ್ದ 94.73 ಕೋಟಿ ರೂ. ಪೈಕಿ ಬಹುಪಾಲು ಹಣ ಡ್ರಾ ಆಗಿದ್ದು, ಇನ್ನುಳಿದ ಹಣ ಎಲ್ಲಿಗೆ ಹೋಗಿದೆ ಎಂಬುದರ ಕುರಿತು ಎಸ್ಐಟಿ ತನಿಖೆ ನಡೆಸುತ್ತಿದೆ. ಪ್ರಕರಣ ಸಂಬಂಧ ಐವರನ್ನು ಎಸ್ಐಟಿ ಬಂಧಿಸಿದೆ. ಪರಶುರಾಮ್, ನೆಕ್ಕುಂಟಿ ನಾಗರಾಜ್, ನಾಗೇಶ್ವರ ರಾವ್, ಪದ್ಮನಾಭ, ಸತ್ಯನಾರಾಯಣ ಅವರನ್ನು ಎಸ್ ಐಟಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.
ಈ ಮಧ್ಯೆ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಅವರು ಬುಧವಾರ ತಿಳಿಸಿದ್ದಾರೆ.
ಮುಂಬೈನಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪ್ರಧಾನ ಕಛೇರಿ ಕಳೆದ ವಾರ ತನ್ನ ಎಂಜಿ ರೋಡ್ ಶಾಖೆಯನ್ನು ಒಳಗೊಂಡ ಸರ್ಕಾರಿ ಸ್ವಾಮ್ಯದ ವಾಲ್ಮೀಕಿ ಅಭಿವೃದ್ಧಿ ನಿಗಮದ ಸಾರ್ವಜನಿಕ ಹಣ ದುರುಪಯೋಗಪಡಿಸಿಕೊಂಡ ಪ್ರಕರಣದ ತನಿಖೆ ನಡೆಸುವಂತೆ ಸಿಬಿಐಗೆ ದೂರು ಸಲ್ಲಿಸಿತ್ತು. ಈ ದೂರಿನ ಆಧಾರದ ಮೇಲೆ ಸಿಬಿಐ ಪ್ರಕರಣದ ತನಿಖೆಗೆಯನ್ನು ಕೈಗೆತ್ತಿಕೊಂಡಿದೆ.
Advertisement