
ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಭವಾನಿ ರೇವಣ್ಣ ವಿರುದ್ಧ ನ್ಯಾಯಾಲಯ ಬಂಧನ ವಾರೆಂಟ್ ಜಾರಿ ಮಾಡಿದೆ.
ಮೈಸೂರು ಜಿಲ್ಲೆಯ ಕೆಆರ್ ನಗರ ಪೊಲೀಸರು ಮಹಿಳೆಯ ಅಪಹರಣ ಮತ್ತು ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿಗೆ ಬೇಕಾಗಿರುವ ಭವಾನಿ ರೇವಣ್ಣ ವಿರುದ್ಧ ಬೆಂಗಳೂರಿನ 42 ನೇ ಎಸಿಎಂಎಂ ಅವರು ಬಂಧನ ವಾರಂಟ್ ಹೊರಡಿಸಿದೆ. ಪ್ರಕರಣದಲ್ಲಿ ಭವಾನಿ ಭಾಗಿಯಾಗಿರುವ ಬಗ್ಗೆ ಎಸ್‌ಐಟಿ ವಿವರವಾದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.
ಪ್ರಜ್ವಲ್ ರೇವಣ್ಣ ಅವರ ತಾಯಿ ಭವಾನಿ ಅವರಿಗೆ ತನಿಖಾ ತಂಡ ಮೂರು ಬಾರಿ ನೋಟಿಸ್ ನೀಡಿದ್ದರೂ ಎಸ್‌ಐಟಿ ಎದುರು ಹಾಜರಾಗಲು ವಿಫಲರಾಗಿದ್ದಾರೆ. ಹದಿನೈದು ದಿನಗಳಿಂದ ತಲೆಮರೆಸಿಕೊಂಡಿರುವ ಭವಾನಿಯನ್ನು ಬಂಧಿಸಲು ಎಸ್‌ಐಟಿ ಪೊಲೀಸ್ ತಂಡಗಳನ್ನು ರಚಿಸಿದೆ. ಬೆಂಗಳೂರಿಗೆ ಹಿಂದಿರುಗುವ ಮೊದಲು ಎಸ್‌ಐಟಿ ಇತ್ತೀಚೆಗೆ ಹೊಳೆನರಸೀಪುರದ ಅವರ ನಿವಾಸದಲ್ಲಿ ಭವಾನಿಗಾಗಿ ಕನಿಷ್ಠ ಏಳು ಗಂಟೆಗಳ ಕಾಲ ಕಾದು ವಾಪಾಸಾಗಿತ್ತು.
ಭವಾನಿ ಪತ್ತೆಗಾಗಿ ಪೊಲೀಸ್ ತಂಡಗಳು ಬೆಂಗಳೂರು, ಮೈಸೂರು ಮತ್ತು ಹಾಸನದಲ್ಲಿ ಬೀಡು ಬಿಟ್ಟಿದ್ದು, ಭವಾನಿ ಇರುವಿಕೆಯ ಬಗ್ಗೆ ಇನ್ನೂ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ. ಭವಾನಿ ಅವರ ಸ್ಥಳವನ್ನು ಪತ್ತೆಹಚ್ಚಲು ಮೊಬೈಲ್ ಕರೆ ರೆಕಾರ್ಡಿಂಗ್‌ಗಳು, ಮೊಬೈಲ್ ಟವರ್ ಸ್ಥಳಗಳು ಮತ್ತು ಸಿಡಿಆರ್ ಪರಿಶೀಲನೆಯನ್ನು ಟ್ರ್ಯಾಕ್ ಮಾಡುವ ತಾಂತ್ರಿಕ ತಂಡವನ್ನು ಎಸ್‌ಐಟಿ ರಚಿಸಿದೆ.
ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ 2019 ರಿಂದ ಹಾಸನದಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ ಮೂವರು ಐಪಿಎಸ್ ಅಧಿಕಾರಿಗಳಿಗೆ ಎಸ್‌ಐಟಿ ನೋಟಿಸ್ ನೀಡಿದೆ. ಸುಮಾರು ಮೂರ್ನಾಲ್ಕು ವರ್ಷಗಳ ಹಿಂದೆ ಈ ಘಟನೆ ನಡೆದಿದೆ ಎಂದು ಕೆಲವು ಸಂತ್ರಸ್ತರು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ. ಈ ಘಟನೆಗಳ ಬಗ್ಗೆ ಅಧಿಕಾರಿಗಳಿಗೆ ಅರಿವಿದೆಯೇ ಎಂದು ತಿಳಿಯಲು ಎಸ್‌ಐಟಿ ಬಯಸಿದೆ ಮತ್ತು ಒಬ್ಬ ಅಧಿಕಾರಿಗೆ ಏನಾಗುತ್ತಿದೆ ಎಂದು ತಿಳಿದಿದ್ದರೂ ಕ್ರಮ ತೆಗೆದುಕೊಳ್ಳಲು ವಿಫಲರಾಗಿದ್ದಕ್ಕೆ ಈ ನೊಟೀಸ್ ನೀಡಲಾಗಿದೆ.
ಹಾಸನದ ಆರ್‌ಸಿ ರಸ್ತೆಯಲ್ಲಿರುವ ಎಸ್‌ಪಿ ಕಚೇರಿಯ ಸಮೀಪದಲ್ಲಿರುವ ಸಂಸದರ ಅಧಿಕೃತ ಕ್ವಾರ್ಟರ್ಸ್‌ನಲ್ಲಿ ಲೈಂಗಿಕ ದೌರ್ಜನ್ಯ ನಡೆದಿರುವ ಹಿನ್ನೆಲೆಯಲ್ಲಿ ಪ್ರಜ್ವಲ್ ಬಗ್ಗೆ ಹೆಚ್ಚುವರಿ ಮಾಹಿತಿ ಪಡೆಯಲು ಹರಿರಾಮ್ ಶಂಕರ್, ಪ್ರಕಾಶ್ ಗೌಡ ಮತ್ತು ಶ್ರೀನಿವಾಸಗೌಡ ಅವರಿಗೆ ಎಸ್‌ಐಟಿ ನೋಟಿಸ್ ಜಾರಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.
Advertisement