ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ರಾಜ್ಯ ಕಾಂಗ್ರೆಸ್ ನಿರೀಕ್ಷಿಸಿದಷ್ಟು ಸ್ಥಾನಗಳಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ. ಪರಿಣಾಮ ರಾಜ್ಯದಲ್ಲಿ ಗ್ಯಾರೆಂಟಿ ಯೋಜನೆಗಳು ಸ್ಥಗಿತಗೊಳ್ಳಲಿದೆಯೇ? ಎಂಬ ಪ್ರಶ್ನೆ ಮೂಡಿದೆ. ಈ ಬಗ್ಗೆ ಮಾತನಾಡಿರುವ ಕೆಪಿಸಿಸಿ ವಕ್ತಾರರೂ ಆಗಿರುವ ಮೈಸೂರು-ಕೊಡಗು ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಎಂ.ಲಕ್ಷ್ಮಣ್, ಜನರಿಗೆ ಕಾಂಗ್ರೆಸ್ ಗ್ಯಾರಂಟಿ ಇಷ್ಟ ಆಗಿಲ್ಲ ಆದ್ದರಿಂದ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ನಿಲ್ಲಿಸುವುದೇ ಒಳ್ಳೆಯದು ಎಂದು ಹೇಳಿದ್ದಾರೆ. ಗ್ಯಾರಂಟಿ ಇಷ್ಟವಿಲ್ಲವೆಂದು ಜನತೆ ಫಲಿತಾಂಶ ಮೂಲಕ ತೋರಿಸಿದ್ದಾರೆ. ಬಿಜೆಪಿಗರು ಗ್ಯಾರಂಟಿ ವಿರುದ್ಧ ಮಾತಾಡ್ತಿದ್ರೂ ಜನ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಸಿಎಂ ಗ್ಯಾರೆಂಟಿ ಯೋಜನೆಗಳ ಬಗ್ಗೆ ಪರಿಶೀಲಿಸಬೇಕೆಂದು ಹೇಳಿದ್ದಾರೆ. ಲಕ್ಷ್ಮಣ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಡಾ.ಜಿ ಪರಮೇಶ್ವರ್, ಗ್ಯಾರಂಟಿ ರಾಜಕೀಯ ಉದ್ದೇಶಕ್ಕಲ್ಲ, ಬಡತನ ನಿರ್ಮೂಲನೆಗೆ ಗ್ಯಾರಂಟಿ ಯೋಜನೆ ಮಾಡಿದ್ದೇವೆ. ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ ಎಂದು ಹೇಳಿದ್ದಾರೆ.
ನಟ ಶಿವರಾಜ್ ಕುಮಾರ್ ಬಗ್ಗೆ ವ್ಯಂಗ್ಯವಾಗಿ ಬರೆದಿದ್ದ ಬಿಜೆಪಿ ನಾಯಕ ಕುಮಾರ್ ಬಂಗಾರಪ್ಪ ನಿವಾಸಕ್ಕೆ ಅಭಿಮಾನಿಗಳು ಮುತ್ತಿಗೆ ಹಾಕಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಗೀತಾ ಶಿವರಾಜ್ ಕುಮಾರ್ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ವಿರುದ್ಧ ಪರಾಭವಗೊಂಡಿದ್ದಾರೆ. ಫಲಿತಾಂಶದ ಬಳಿಕ ಶಿವರಾಜ್ ಕುಮಾರ್ ಬಗ್ಗೆ ಲಘುವಾಗಿ ಬರೆದು ಫೇಸ್ ಬುಕ್ ಪೋಸ್ಟ್ ಹಾಕಿದ್ದ ಕುಮಾರ್ ಬಂಗಾರಪ್ಪ, ಶಿವರಾಜಕುಮಾರ್ ನಿರುದ್ಯೋಗಿಯಾಗಬೇಕಿಲ್ಲ, ನಮ್ಮೂರ ಜಾತ್ರೆಗಳಲ್ಲಿ ಕುಣಿಯುವ ಕೆಲಸಕ್ಕೆ ಅರ್ಜಿ ಹಾಕಿಕೊಳ್ಳಬಹುದು ಎಂದಿದ್ದರು. ಶಿವರಾಜ್ ಕುಮಾರ್ ಅಭಿಮಾನಿಗಳು ಕುಮಾರ್ ಬಂಗಾರಪ್ಪ ಮನೆ ಗೇಟ್ ಒಳಗೆ ನುಗ್ಗಿ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಶಿವರಾಜ್ ಕುಮಾರ್ ಅಭಿಮಾನಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.
ಹಣಕಾಸು ವಿಚಾರಕ್ಕೆ ನಡೆದ ಜಗಳದಲ್ಲಿ ಚಿಟ್ ಫಂಡ್ ಅಧಿಕಾರಿಯನ್ನು ರಾಡ್ ನಿಂದ ಹೊಡೆದು ಹತ್ಯೆ ಮಾಡಿ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ದೇಹದ ಭಾಗಗಳನ್ನು ಮೋರಿಗೆ ಎಸೆದಿರುವ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ವರದಿಯಾಗಿದೆ. 5 ಲಕ್ಷ ಚೀಟಿ ಹಣ ಮೋಸ ಮಾಡಿದ ಆರೋಪದಲ್ಲಿ ಮಾರ್ಗದರ್ಶಿ ಚಿಟ್ ಫಂಡ್ ನ ಅಧಿಕಾರಿಯನ್ನು ಕೊಲೆ ಮಾಡಲಾಗಿದೆ. ಕೆ.ವಿ.ಶ್ರೀನಾಥ್ ಮೃತ ವ್ಯಕ್ತಿಯಾಗಿದ್ದು, ಮಾಧವ ರಾವ್ ಕೊಲೆ ಆರೋಪಿಯಾಗಿದ್ದಾರೆ. ಮೇ 28ರ ಬೆಳಗ್ಗೆ ಮನೆಯಿಂದ ಹೊರಹೋಗಿದ್ದ ಶ್ರೀನಾಥ್ ಮನೆಗೆ ವಾಪಸ್ ಆಗಿರಲಿಲ್ಲ. ಮೇ 29ರಂದು ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ಪತ್ನಿ ದೂರು ನೀಡಿದ್ದರು. ಈ ಪ್ರಕರಣದ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಶ್ರೀನಾಥ್ ಮಾಧವ ರಾವ್ ಮನೆಗೆ ಹೋಗಿರೋದು ಪತ್ತೆಯಾಗಿತ್ತು. ತನಿಖೆ ನಡೆಸಿದ ಪೊಲೀಸರು, ಆಂಧ್ರಪ್ರದೇಶದಲ್ಲಿ ತಲೆ ಮರೆಸಿಕೊಂಡಿದ್ದ ಮಾಧವ್ ರಾವ್ ನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕೊಲೆಯ ಮಾಹಿತಿ ಬಹಿರಂಗವಾಗಿದೆ.
ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಆರೋಪದಡಿ ಬಂಧನಕ್ಕೊಳಗಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಸ್ಥಳ ಮಹಜರು ಮಾಡುವುದಕ್ಕಾಗಿ SIT ಅಧಿಕಾರಿಗಳು ಹೊಳೆನರಸೀಪುರದ ಅವರ ನಿವಾಸಕ್ಕೆ ಇಂದು ಕರೆದೊಯ್ದಿದ್ದರು. ಡಿವೈಎಸ್ಪಿರ ಸತ್ಯನಾರಾಯಣ ನೇತೃತ್ವದಲ್ಲಿ ಎಫ್ಎ್ಸ್ಎದಲ್ ಅಧಿಕಾರಿಗಳು ಸ್ಥಳ ಮಹಜರು ಮಾಡಿದ್ದಾರೆ.
ರಾಜ್ಯದಲ್ಲಿ ಮುಂಗಾರು ಚುರುಕಾಗುತ್ತಿದ್ದು, ಜೂ.13 ರ ವರೆಗೆ ರಾಜ್ಯದ 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಇಂದು ಬೆಳಗಾವಿ, ಬೀದರ್, ಧಾರವಾಡ, ಗದಗ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳ ಹಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಚಿಕ್ಕಮಗಳೂರಿನ ಎನ್‌ಆರ್ ಪುರದಲ್ಲಿ ಮಂಗಗಳ ಮಾರಣಹೋಮ ನಡೆದಿದೆ. 34 ಮಂಗಳನ್ನು ಅಮಾನುಷವಾಗಿ ಕೊಂದು ರಸ್ತೆ ಬದಿಯಲ್ಲಿ ಎಸೆಯಲಾಗಿದ್ದು, ಈ ಹೀನ ಕೃತ್ಯಕ್ಕೆ ಪ್ರಾಣಿಪ್ರಿಯರು ಖಂಡನೆ ವ್ಯಕ್ತಪಡಿದ್ದಾರೆ. ಬಾಳೆ ಹಣ್ಣಿನಲ್ಲಿ ಪ್ರಜ್ಷೆತಪ್ಪುವ ಔಷಧವಿಟ್ಟಿರುವ ಕಿಡಿಗೇರಿಗಳು, ಮಂಗಗಳ ಪ್ರಜ್ಞೆತಪ್ಪಿಸಿ ಅವುಗಳ ತಲೆಗೆ ಹೊಡೆದು ಹತ್ಯೆ ಮಾಡಿದ್ದಾರೆ. ಮಂಗಗಳನ್ನು ಕೊಂದಿರುವ ಆರೋಪಿಗಳ ಪತ್ತೆಗೆ ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ.
Advertisement