ದೆಹಲಿಯ ರಾಷ್ಟ್ರಪತಿ ಭವನದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಇಂದು ನರೇಂದ್ರ ಮೋದಿ ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ ಕೇಂದ್ರದಲ್ಲಿ ಎನ್ ಡಿಎ ಸರ್ಕಾರ ಇಂದಿನಿಂದ ಅಸ್ತಿತ್ವಕ್ಕೆ ಬಂದಿದೆ. ಪದಹ್ರಹಣಕ್ಕೂ ಮುನ್ನ ಪ್ರಧಾನಿ ಮೋದಿ ರಾಜ್ ಘಾಟ್ ಗೆ ತೆರಳಿ ಮಹಾತ್ಮಾ ಗಾಂಧಿ ಸಮಾಧಿ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮಾರಕ, ಸೈನಿಕ ಸ್ಮಾರಕಗಳಿಗೆ ಭೇಟಿ ನೀಡಿ ನಮನ ಸಲ್ಲಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಧಾನಿ ಮೋದಿಗೆ ಪ್ರತಿಜ್ಞಾವಿಧಿ ಬೋಧಿಸಿದ್ದಾರೆ. ಮೋದಿ ಜೊತೆ ಬಿಜೆಪಿಯ ಸಂಸದರು, ಮಿತ್ರಪಕ್ಷಗಳ ಸಂಸದರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯದಿಂದ ಹೆಚ್ ಡಿ ಕುಮಾರಸ್ವಾಮಿ, ವಿ ಸೋಮಣ್ಣ, ಶೋಭಾ ಕರಂದ್ಲಾಜೆ, ಪ್ರಲ್ಹಾದ್ ಜೋಶಿ, ಕೇಂದ್ರ ಸಚಿವರಾಗಿ ಪದಗ್ರಹಣ ಮಾಡಿದ್ದಾರೆ. ಪ್ರಧಾನಿ ಮೋದಿ ಪದಗ್ರಹಣ ಕಾರ್ಯಕ್ರಮದಲ್ಲಿ ನೇಪಾಳ ಪ್ರಧಾನಿ ಪುಷ್ಪಕಮಲ್ ದಹಲ್, ಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಮಾರಿಷಸ್ ಪ್ರಧಾನಿ ಪ್ರವಿಂದ್ ಜಗ್ನಾತ್, ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಸೇರಿದಂತೆ ನೆರೆ ರಾಷ್ಟ್ರಗಳ ಮುಖ್ಯಸ್ಥರು ಭಾಗಿಯಾಗಿದ್ದರು.
ನಕಲಿ ವೈದ್ಯಕೀಯ ವೃತ್ತಿಯನ್ನು ಬೇರುಸಮೇತ ಕಿತ್ತೊಗೆಯಲು ಆರೋಗ್ಯ ಇಲಾಖೆ ಮುಂದಾಗಿದ್ದು, ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್'ಗಳು ತಮ್ಮ ಕೆಪಿಎಂಇ ನೋಂದಣಿ ಸಂಖ್ಯೆ, ಆಸ್ಪತ್ರೆಯ ಹೆಸರು ಮತ್ತು ಮಾಲೀಕರ ಹೆಸರನ್ನು ಕಟ್ಟಡದ ಮುಂಭಾಗದಲ್ಲಿ ಪ್ರದರ್ಶಿಸವುದು ಕಡ್ಡಾಯವಾಗಿದೆ. ಈ ಸಂಬಂಧ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಸಾರ್ವಜನಿಕರ ಮಾಹಿತಿಗಾಗಿ ವೈದ್ಯಕೀಯ ಪದ್ಧತಿ ಮತ್ತು ಲಭ್ಯವಿರುವ ಸೇವೆಗಳ ವಿವರವನ್ನು ಆಸ್ಪತ್ರೆಯ ಆವರಣದ ಪ್ರಮುಖ ಸ್ಥಳಗಳಲ್ಲಿ ಸ್ಪಷ್ಟವಾಗಿ ಪ್ರದರ್ಶಿಸಬೇಕು ಎಂದು ಸೂಚಿಸಿದೆ. ಈ ನಿಯಮಗಳನ್ನು ಅನುಸರಿಸಲು ವಿಫಲವಾದಲ್ಲಿ, ಅಂತಹವರ ವಿರುದ್ಧ ಕೆಪಿಎಂಇ ಕಾಯ್ದೆಯಡಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ ಮತ್ತು ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಪ್ರಕರಣದ ಸಂಬಂಧ ಎಸ್‌ಐಟಿ ತನಿಖೆಯನ್ನು ಚುರುಕುಗೊಳಿಸಿದ್ದು, ಮ್ಯಾಪಿಂಗ್ ಮತ್ತು ಪೆನ್ ಡ್ರೈವ್ ಹಂಚಿಕೆ ಮಾಡಿದ ಆರೋಪದ ಮೇಲೆ ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್ ಗೌಡ ಅವರನ್ನು ಬಂಧಿಸಿದೆ. ಕಾರ್ತಿಕ್ ಗೌಡ ಪ್ರಜ್ವಲ್ ಅವರ ಅಶ್ಲೀಲ ವಿಡಿಯೋಗಳನ್ನು ಹೊಂದಿರುವ ಪೆನ್‌ಡ್ರೈವ್ ನ್ನು ಮೊದಲು ಬಿಜೆಪಿ ಮುಖಂಡ ದೇವರಾಜೇಗೌಡಗೆ ನೀಡಿರುವುದಾಗಿ ವಿಚಾರಣೆ ವೇಳೆ ಹೇಳಿದ್ದರು.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಹಂದಿಗುಂದ ಗ್ರಾಮದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಬಳಿಕ ಕಂಬದ ಸಮೇತ ರಸ್ತೆ ಬದಿಯ ಜಮೀನಿಗೆ ನುಗ್ಗಿದೆ. ಡಿಕ್ಕಿ ರಭಸಕ್ಕೆ ಕಾರಿನ ಹಿಂಬದಿ ಕುಳಿತಿದ್ದ ಇಬ್ಬರಿಗೆ ತೀವ್ರ ರಕ್ತಸ್ರಾವವಾಗಿತ್ತು. ಕೂಡಲೇ ಕಾರಿನಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದವರನ್ನು ರಕ್ಷಿಸಿದರಾದರೂ ಅವರು ಬದುಕಿ ಉಳಿಯಲಿಲ್ಲ. ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತವಾಗುತ್ತಿದ್ದಂತೆ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಬಿಜೆಪಿ ಶಾಸಕ ಅರವಿಂದ ಬೆಲ್ಲದ ಸೇರಿ ಮೂವರ ವಿರುದ್ಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಸಕ ಅರವಿಂದ ಬೆಲ್ಲದ, ಉಪ ಮೇಯರ್ ಸತೀಶ್ ಹಾನಗಲ್ ಮತ್ತು ಲಕ್ಷ್ಮಣ ಭೋವಿ ವಿರುದ್ಧ ವಿರುದ್ಧ ಕೊಳಚೆ ನಿರ್ಮೂಲನ ಮಂಡಳಿ ನೀಡಿದ ಹಕ್ಕು ಪತ್ರ ವಿತರಣೆ ಕುರಿತು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಜೀವ ಬೆದರಿಕೆ ಆರೋಪ ಕೇಳಿಬಂದಿದೆ.2023 ಡಿ. 30 ರಂದು ಪೊಲೀಸ್ ಕಮಿಷನರ್ ನೇತೃತ್ವದಲ್ಲಿ ಪರಿಶಿಷ್ಟ ಜಾತಿ, ಪಂಗಡದ ಕುಂದು ಕೊರತೆ ಸಭೆ ನಡೆದಿದ್ದಾಗ, ಆನಂದ ನಗರದ ಕೃಷ್ಣಾ ಕಾಲೊನಿಗೆ ಸಂಬಂಧಪಟ್ಟ ಖಾಲಿ ಜಾಗವನ್ನು ಕೊಳಚೆ ನಿರ್ಮೂಲನ ಮಂಡಳಿ ಅಕ್ರಮವಾಗಿ ಹಕ್ಕುಪತ್ರ ವಿತರಿಸಿದೆ ಎಂಬ ದೂರು ಕೇಳಿಬಂದಿತ್ತು. ಈ ಬಗ್ಗೆ ಪರಶುರಾಮ ದಾವಣಗೆರೆ ಎಂಬುವರು ಅರ್ಜಿ ಸಲ್ಲಿಸಿದ್ದರು. ಬಳಿಕ ಈ ಅರ್ಜಿಯನ್ನು ಹಿಂಪಡೆಯಲು ಉಪ ಮೇಯರ್ ಮೇಯರ್ ಸತೀಶ ಹಾನಗಲ್ ಹಾಗೂ ಶಾಸಕ ಅರವಿಂದ ಬೆಲ್ಲದ ಕುಮ್ಮಕ್ಕಿನಿಂದ ಲಕ್ಷ್ಮಣ ಭೋವಿ ಅವಾಚ್ಯ ಪದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದರು.
Advertisement